ಮನಪಾ ಬಜೆಟ್ ಪೂರ್ವಭಾವಿ ಸಭೆ : ಸಾರ್ವಜನಿಕರು 5 ಮಂದಿ !

Update: 2021-01-13 15:57 GMT

ಮಂಗಳೂರು, ಜ. 13: ಮಹಾನಗರ ಪಾಲಿಕೆಯ ಮುಂದಿನ ಬಜೆಟ್‌ಗೆ ಸಂಬಂಧಿಸಿ ಸಲಹೆ ಸೂಚನೆಗಳನ್ನು ಪಡೆಯುವ ಹಿನ್ನೆಲೆ ಯಲ್ಲಿ ಮನಪಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಬಜೆಟ್ ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿದ್ದ ಸಾರ್ವಜನಿಕರ ಸಂಖ್ಯೆ 5. ಮೇಯರ್ ದಿವಾಕರ ಪಾಂಡೇಶ್ವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದ ಸಾರ್ವಜನಿಕರು ಹಲವಾರು ಸಲಹೆ, ಸೂಚನೆಗಳ ನೀುವ ಮೂಲಕ ಗಮನ ಸೆಳೆದರು.

ಕಳೆದ ವರ್ಷದ ಸಭೆಯಲ್ಲಿ 23 ಮಂದಿ ಪಾಲ್ಗೊಂಡಿದ್ದರೆ ಈ ಸಭೆಯಲ್ಲಿ ಎರಡಂಕೆಯ ಸಾರ್ವಜನಿಕರೂ ಇಲ್ಲದ ಬಗ್ಗೆ ಅಲ್ಲಿದ್ದ ಸಾರ್ವಜನಿಕರಿಂದಲೇ ಆಕ್ಷೇಪ ವ್ಯಕ್ತವಾಯಿತು.

ಈ ಹಿಂದೆಲ್ಲಾ ಬಜೆಟ್‌ಪೂರ್ವ ಸಭೆಗೆ ಸಂಘ ಸಂಸ್ಥೆಗೆ ಪತ್ರ ಕಳುಹಿಸಲಾಗುತ್ತಿತ್ತು. ಈ ಬಾರಿ ಪತ್ರ ಕಳುಹಿಸಿಲ್ಲ. ಹೀಗಾಗಿ ಜನರು ಬರಲಿಲ್ಲ. ಕಳೆದ ಬಾರಿಗೆ 23 ಜನ ಪಾಲ್ಗೊಂಡಿದ್ದರು. ಈ ಬಾರಿ ಯಾವುದೇ ಕಾರ್ಪೊರೇಟರ್‌ಗಳು ಕೂಡ ಸಭೆಗೆ ಬಾರದಿರುವುದು ಸಭೆಯ ಗಂಭೀರತೆಯನ್ನು ತೋರಿಸುತ್ತದೆ ಎಂದರು. ಮೇಯರ್ ದಿವಾಕರ ಪಾಂಡೇಶ್ವರ ಅವರು ಸಂಘಸಂಸ್ಥೆಗಳಿಗೆ ಆಮಂತ್ರಣ ಪತ್ರ ಕಳುಹಿಸದ ಬಗೆ್ಗ ಅಧಿಕಾರಿಗಳನ್ನು ತರಾಟೆಗೈದರು.

ಮಹಾನಗರ ಪಾಲಿಕೆ ಬಜೆಟ್‌ನಲ್ಲಿ ಸಂಪನ್ಮೂಲ ಕ್ರೋಢೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ತೆರಿಗೆ ಸಂಗ್ರಹ ಸರಿಯಾಗಿ ಆಗದೆ, ಕೋಟ್ಯಂತರ ರೂಪಾಯಿ ನಷ್ಟ ಉಂಟಾಗುತ್ತಿದೆ. ಅದನ್ನು ತಡೆಯಲು ಹಾಗೂ ವಿವಿಧ ಮೂಲಗಳಿಂದ ಪಾಲಿಕೆಗೆ ಬಾಕಿ ಇರುವ ಬೃಹತ್ ಮೊತ್ತದ ತೆರಿಗೆಯನ್ನು ಸಂಗ್ರಹಿಸಲು ಬಜೆಟ್‌ನಲ್ಲಿ ಕಾರ್ಯಕ್ರಮ ರೂಪಿಸಬೇಕೆಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.

ಹನುಮಂತ ಕಾಮತ್ ಅವರು ಮಾತನಾಡಿ, ಮನೆತೆರಿಗೆಯನ್ನು ಪ್ರತಿ ಮೂರು ವರ್ಷಕ್ಕೊಮ್ಮೆ ಶೇ.15ರಷ್ಟು ಏರಿಕೆ ಮಾಡುವ ಪಾಲಿಕೆ, ಕಟ್ಟಡ ನಿರ್ಮಾಣ ಪರವಾನಗಿ ಶುಲ್ಕವನ್ನು 1992ರ ಬಳಿಕ ಪರಿಷ್ಕರಣೆ ಮಾಡಿಲ್ಲ. ಅದರಲ್ಲಿ ಕೆಲವೊಂದು ಶುಲ್ಕಗಳು ಇನ್ನೂ ಪೈಸೆಗಳ ಲೆಕ್ಕದಲ್ಲಿದ್ದು, ತಕ್ಷಣದ ಪರಿಷ್ಕರಿಸಬೇಕು ಎಂದರು.

ಕೋಟೆಕಾರು, ಉಳ್ಳಾಲ ನಗರ ಸ್ಥಳೀಯ ಸಂಸ್ಥೆ, ಗ್ರಾಪಂ ಗಳಿಂದ ಲಕ್ಷಾಂತರ ರೂ. ತೆರಿಗೆ ಬಾಕಿ ಇದೆ. ಜಾಹೀರಾತು ಸಂಸ್ಥೆ ಗಳೂ ಕೋಟ್ಯಂತರ ರೂ.ಬಾಕಿ ಇರಿಸಿಕೊಂಡಿವೆ. ಬಂದರಿನ ಗುಜರಿ ಯಾರ್ಡ್‌ನಿಂದಲೂ ಎರಡು ವರ್ಷದಿಂದ ತೆರಿಗೆ ಪಾವತಿ ಬಾಕಿದೆ. ಪಚ್ಚನಾಡಿ ಬಳಿ ಡಾಂಬರು ಘಟಕಕ್ಕೆ ನೀಡಲಾಗಿರುವ ಪಾಲಿಕೆ ಜಾಗಕ್ಕೆ ವಾರ್ಷಿಕ 5 ಸಾವಿರ ರೂ. ಪಡೆಯಲಾಗುತ್ತಿದೆ. ಇದು ಯಾವ ನ್ಯಾಯ ಎಂದು ಪ್ರಶ್ನಿಸಿದರು.

ತುಂಬೆ ಡ್ಯಾಂನಿಂದ ಮುಳುಗಡೆಯಾಗುವ ಪ್ರದೇಶಗಳ ಭೂಸ್ವಾಧೀನಕ್ಕೆ ಬೇಕಾಗುವ ಹಣವನ್ನು ಈ ಬಾರಿಯ ಬಜೆಟ್‌ನಲ್ಲಿ ಮೀಸಲಿಡಬೇಕು. ಆರ್‌ಟಿಓದಿಂದ ಪಾಲಿಕೆಗೆ ಬರಬೇಕಾದ ಮೊತ್ತ ಇನ್ನೂ ಬಂದಿಲ್ಲ. ಪಾಲಿಕೆಗೆ ಜಾಹೀರಾತುದಾರರಿಂದ, ಹೋರ್ಡಿಂಗ್ಸ್‌ನಿಂದ ಕೋಟ್ಯಾಂತರ ರೂ. ಹಣ ಬರಲು ಬಾಕಿ ಇದೆ. ಆಸ್ತಿ ತೆರಿಗೆ, ನೀರಿನ ತೆರಿಗೆಯನ್ನು ಹಲವು ಉದ್ಯಮಿಗಳು ಲಕ್ಷಾಂತರ ರೂ. ಬಾಕಿ ಇರಿಸಿದ್ದಾರೆ. ಅಂತವರ ಹೆಸರನ್ನು ಪಾಲಿಕೆಯ ಬೋರ್ಡ್‌ನಲ್ಲಿ ಹಾಕಬೇಕು. ಮಧ್ಯಾಹ್ನ ಮೂರು ಗಂಟೆಯ ಬಳಿಕ ಅಧಿಕಾರಿಗಳು ಪಾಲಿಕೆಯಲ್ಲಿ ಸಾರ್ವಜನಿಕರಿಗೆ ಸಿಗುವಂತೆ ಆಗಬೇಕು ಎಂದು ಒತ್ತಾಯಿಸಿದರು.

ಗೋಪಾಲಕೃಷ್ಣ ಭಟ್ ಮಾತನಾಡಿ, ಮನೆ ತೆರಿಗೆ, ಆಸ್ತಿ ತೆರಿಗೆ ವಸೂಲಿ ಸರಿಯಾಗಿ ಆಗುತ್ತಿಲ್ಲ. ದೊಡ್ಡ ಕಂಪೆನಿ, ಆಸ್ಪತ್ರೆ, ತೆರಿಗೆ ಬಾಕಿ ಉಳಿಸಿದೆ. ತೆರಿಗೆ ಸೋರಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು. ತ್ಯಾಜ್ಯ ನಿರ್ವಹಣೆಗೆ ಕೋಟಗಟ್ಟಲೆ ಹಣ ಖರ್ಚು ಮಾಡುವ ಬದಲು ರಾಮಕೃಷ್ಣ ಮಠದವರಿಗೆ ಇದರ ಉಸ್ತುವಾರಿ ನೀಡಿದರೆ ಉತ್ತಮ ಎಂದು ಅಭಿಪ್ರಾಯಿಸಿದರು.

ಪದ್ಮನಾಭ ಉಳ್ಳಾಲ್ ಮಾತನಾಡಿ, ವಾರ್ಡ್ ಸಮಿತಿ ಅನುಮತಿ ಇಲ್ಲದೆ ಪಾಲಿಕೆ ಮಾಡಿರುವ ಎಲ್ಲಾ ಕಾಮಗಾರಿಗಳ ಬಗ್ಗೆ ಪುನರ್ ‌ಪರಿಶೀಲನೆ ಮಾಡಿ ದುಂದುವೆಚ್ಚ ಎಂದು ಕಂಡುಬಂದಲ್ಲಿ ಆ ಹಣವನ್ನು ದಂಡದ ರೂಪದಲ್ಲಿ ಅಧಿಕಾರಿಗಳಿಂದ ವಸೂಲಿ ಮಾಡಬೇಕು ಎಂದರು.

ಪಾಲಿಕೆ ಮುಂಭಾಗ ದೊಡ್ಡ ಡಿಸ್ಪ್ಲೇ ಹಾಕಿ ತೆರಿಗೆ ಕಟ್ಟದವರ ಹೆಸರನ್ನು ಅದರಲ್ಲಿ ಪ್ರಕಟಿಸಿ, ಸಾರ್ವಜನಿಕರಿಗೆ ತಿಳಿಯುವಂತೆ ಮಾಡಬೇಕು. ಪಾಲಿಕೆ ವ್ಯಾಪ್ತಿಯ ಪಾರ್ಕಿಂಗ್ ಇಲ್ಲದ ಕಟ್ಟಡಗಳಿಗೆ 3 ಪಟ್ಟು ಹೆಚ್ಚು ತೆರಿಗೆ ವಿಧಿಸಬೇಕು ಎನ್ನುವ ಆಗ್ರಹ ವ್ಯಕ್ತವಾ ಯಿತು. ಯುವ ಸಮುದಾಯಕ್ಕೆ ಉದ್ಯೋಗಕ್ಕೆ ಪೂರಕವಾದ ಕಾರ್ಯಕ್ರಮ ಪಾಲಿಕೆ ರೂಪಿಸಬೇಕು ಎಂದು ಸಭೆಯಲ್ಲಿ ಭಾವಹಿಸಿದ್ದ ಯುವತಿಯರಿಬ್ಬರು ಮನವಿ ಮಾಡಿದರು.

ಉಪಮೇಯರ್ ವೇದಾವತಿ, ಆಯುಕ್ತ ಅಕ್ಷಯ್ ಶ್ರೀಧರ್, ಸ್ಥಾಯಿ ಸಮಿತಿ ಸದ್ಯರಾದ ಕಿರಣ್ ಕುಮಾರ್, ಜಗದೀಶ್ ಶೆಟ್ಟಿ, ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ, ಉಪಾಯುಕ್ತ ಡಾ.ಸಂತೋಷ್ ಕುಮಾರ್, ಕಾರ್ಪೋರೇಟರ್ ಸುಧೀರ್ ಶೆಟ್ಟಿ ಕಣ್ಣೂರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News