45,696 ಕೋ.ರೂ.ವೆಚ್ಚದಲ್ಲಿ 83 ತೇಜಸ್ ಲಘು ಯುದ್ಧವಿಮಾನಗಳ ಖರೀದಿಗೆ ಸಂಪುಟದ ಒಪ್ಪಿಗೆ

Update: 2021-01-13 17:04 GMT

ಹೊಸದಿಲ್ಲಿ,ಜ.13: ಭಾರತೀಯ ವಾಯುಪಡೆಗಾಗಿ 45,696 ಕೋ.ರೂ.ವೆಚ್ಚದಲ್ಲಿ ಎಚ್‌ಎಎಲ್ ನಿರ್ಮಿತ 73 ತೇಜಸ್ ಲಘು ಯುದ್ಧವಿಮಾನ (ಎಲ್‌ಸಿಎ)ಗಳು ಮತ್ತು 10 ತರಬೇತಿ ವಿಮಾನಗಳ ಖರೀದಿಗೆ ಬುಧವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಭದ್ರತೆ ಕುರಿತು ಸಂಪುಟ ಸಮಿತಿಯ ಸಭೆಯು ಒಪ್ಪಿಗೆ ನೀಡಿದೆ.

ತೇಜಸ್ ಎಂಕೆ-1ಎ ಎಲ್‌ಸಿಎ ದೇಶಿಯವಾಗಿ ವಿನ್ಯಾಸಗೊಂಡು ತಯಾರಾಗಿರುವ ನಾಲ್ಕನೇ ಪೀಳಿಗೆಯ ಯುದ್ಧವಿಮಾನವಾಗಿದ್ದು, ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ಸಜ್ಜುಗೊಂಡಿದೆ.

‘ತೇಜಸ್ ಎಲ್‌ಸಿಎ ಮುಂಬರುವ ವರ್ಷಗಳಲ್ಲಿ ಭಾರತೀಯ ವಾಯುಪಡೆಯ ಯುದ್ಧವಿಮಾನಗಳ ತಂಡದ ಬೆನ್ನೆಲುಬು ಆಗಲಿದೆ. ವಿಮಾನವು ಹಲವಾರು ನೂತನ ತಂತ್ರಜ್ಞಾನಗಳನ್ನು ಹೊಂದಿದ್ದು,ಈ ಪೈಕಿ ಹೆಚ್ಚಿನವುಗಳನ್ನು ಭಾರತದಲ್ಲಿ ಈವರೆಗೆ ಪ್ರಯತ್ನಿಸಲಾಗಿಲ್ಲ. ಈ ಖರೀದಿ ಒಪ್ಪಂದವು ಭಾರತೀಯ ರಕ್ಷಣಾ ತಯಾರಿಕೆ ಕ್ಷೇತ್ರದಲ್ಲಿ ಸ್ವಾವಲಂಬಗಾಗಿ ಬದಲಾವಣೆಯ ಹರಿಕಾರನಾಗಲಿದೆ ’ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಟ್ವೀಟಿಸಿದ್ದಾರೆ.

ಕರ್ತವ್ಯ ನಿಲ್ದಾಣಗಳಲ್ಲಿ ವಿಮಾನಗಳ ರಿಪೇರಿ ಮತ್ತು ನಿರ್ವಹಣೆಯನ್ನು ಸಾಧ್ಯವಾಗಿಸಲು ಮೂಲಸೌಕರ್ಯ ಅಭಿವೃದ್ಧಿ ಪ್ರಸ್ತಾವಕ್ಕೂ ಬುಧವಾರದ ಸಭೆಯು ಹಸಿರು ನಿಶಾನೆಯನ್ನು ತೋರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News