ಉಡುಪಿ ಜಿಲ್ಲೆಗೆ 12,000 ‘ಕೋವಿ ಶೀಲ್ಡ್’ ಕೋವಿಡ್ ಲಸಿಕೆ ಆಗಮನ

Update: 2021-01-14 13:43 GMT

ಉಡುಪಿ, ಜ.14: ಬಹುನಿರೀಕ್ಷಿತ ‘ಕೋವಿ ಶೀಲ್ಡ್’ ಕೊರೋನಾ ಲಸಿಕೆಯು ಗುರುವಾರ ಮಧ್ಯಾಹ್ನ 12ಗಂಟೆ ಸುಮಾರಿಗೆ ಅಜ್ಜರಕಾಡಿನಲ್ಲಿರುವ ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿಗೆ ಬಿಗಿ ಪೊಲೀಸ್ ಭದ್ರತೆಯಲ್ಲಿ ತಲುಪಿತು.

ಮೊದಲ ಹಂತದ 12,000 ಲಸಿಕೆಯನ್ನು ಮಂಗಳೂರಿನಿಂದ ಭಾರತ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಸಚಿವಾಲಯದ ವ್ಯಾಕ್ಸಿನ್ ವ್ಯಾನ್‌ನಲ್ಲಿ ಸುರಕ್ಷಿತವಾಗಿ ಇಲಾಖಾ ಕಚೇರಿಗೆ ತರಲಾಯಿತು. ಈ ವೇಳೆ ಇಲಾಖಾ ಸಿಬ್ಬಂದಿಗಳು ಗಂಟೆ ಹಾಗೂ ಜಾಗಟೆ ಬಾರಿಸುವ ಮೂಲಕ ಲಸಿಕೆಯನ್ನು ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಹಾಜರಿದ್ದ ಜಿಲ್ಲಾಧಿಕಾರಿ ಜಿ.ಜಗದೀಶ್, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ಅವರಿಗೆ ಲಸಿಕೆಯ ಪೆಟ್ಟಿಗೆಯನ್ನು ಹಸ್ತಾಂತರಿಸಲಾ ಯಿತು. ಬಳಿಕ ಲಸಿಕೆಯನ್ನು ಸುರಕ್ಷಿತವಾಗಿ ಕಚೇರಿಯ ಔಷಧ ಉಗ್ರಾಣದಲ್ಲಿ ಇರಿಸಲಾಯಿತು. ಉಗ್ರಾಣಕ್ಕೆ ಪೊಲೀಸ್ ಭದ್ರತೆ ಯನ್ನು ಒದಗಿಸಲಾಗಿದೆ.

ಜ.15ರಂದು ಈ ಲಸಿಕೆಗಳನ್ನು ಮೊದಲ ಹಂತದಲ್ಲಿ ಈಗಾಗಲೇ ಗುರುತಿಸ ಲಾಗಿರುವ ಐದು ಸರಕಾರಿ ಕೇಂದ್ರಗಳಾದ ಉಡುಪಿ ಜಿಲ್ಲಾಸ್ಪತ್ರೆ, ಉಡುಪಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಕುಂದಾಪುರ ತಾಲೂಕು ಸರಕಾರಿ ಆಸ್ಪತ್ರೆ, ಕಂಡ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರ, ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆ ಮತ್ತು ಒಂದು ಖಾಸಗಿ ಕೇಂದ್ರ ಆಗಿರುವ ಉಡುಪಿ ಟಿಎಂಎ ಪೈ ಆಸ್ಪತ್ರೆಗೆ ರವಾನಿಸ ಲಾಗುತ್ತದೆಂದು ಡಿಎಚ್‌ಓ ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದರು.

94 ಲಸಿಕಾ ಕೇಂದ್ರಗಳು: ‘ಉಡುಪಿ ಜಿಲ್ಲೆಯ 105 ಸರಕಾರಿ ಆರೋಗ್ಯ ಸಂಸ್ಥೆಗಳ 5712 ಮತ್ತು 797 ಖಾಸಗಿ ಸಂಸ್ಥೆಗಳ 16518 ಸೇರಿದಂತೆ ಒಟ್ಟು 22,230 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ಕಳುಹಿಸುವಂತೆ ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ವರದಿಯನ್ನು ಸಲ್ಲಿಸಲಾಗಿತ್ತು. ಇದೀಗ ಮೊದಲ ಹಂತದಲ್ಲಿ 12ಸಾವಿರ ಲಸಿಕೆಗಳು ಬಂದಿವೆ. ಜ.16ರಂದು ಪ್ರಧಾನಿ ಚಾಲನೆ ನೀಡಿದ ಬಳಿಕ ನಮ್ಮ ಜಿಲ್ಲೆಯ ಆರು ಕೇಂದ್ರಗಳಲ್ಲಿ 600 ಮಂದಿಗೆ ಲಸಿಕೆಯನ್ನು ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.

ಜಿಲ್ಲೆಯಲ್ಲಿ ಈಗಾಗಲೇ 74 ಸರಕಾರಿ ಮತ್ತು 20 ಖಾಸಗಿ ಸೇರಿದಂತೆ ಒಟ್ಟು 94 ಲಸಿಕಾ ಕೇಂದ್ರಗಳನ್ನು ಗುರುತಿಸಲಾಗಿದೆ. 22230 ಮಂದಿಗೆ ಲಸಿಕೆ ನೀಡುವ ಸಂಬಂಧ ಸರಕಾರಿ 85 ಮತ್ತು ಖಾಸಗಿ 155 ಸೇರಿದಂತೆ ಒಟ್ಟು 240 ಲಸಿಕಾ ಶಿಬಿರಗಳನ್ನು ನಡೆಸಲು ಯೋಜಿಸಲಾಗಿದೆ. ಎರಡನೆ ಹಂತದ ಪಟ್ಟಿಯಲ್ಲಿ ಕೋವಿಡ್ ವಾರಿಯರ್ಸ್‌ಗಳಾದ ಪೊಲೀಸ್, ಕಂದಾಯ, ನಗರಾ ಭಿವೃದ್ಧಿ ಇಲಾಖೆಯ ಸಿಬ್ಬಂದಿಗಳನ್ನು ಸೇರಿಸಿಕೊಳ್ಳಲಾಗಿದೆ ಎಂದರು.

ಮೂರನೆ ಹಂತದಲ್ಲಿ 50ವರ್ಷ ವಯಸ್ಸಿಗಿಂತ ಮೇಲ್ಪಟ್ಟವರಿಗೆ ಲಸಿಕೆ ನೀಡಲು ನಿರ್ಧರಿಸಲಾಗಿದೆ. 50ವರ್ಷ ವಯಸ್ಸಿಗಿಂತ ಕೆಳಗೆ ಇತರ ಕಾಯಿಲೆ ಇರುವವರಿಗೆ ಮಾತ್ರ ಲಸಿಕೆ ನೀಡುವ ಬಗ್ಗೆ ತೀರ್ಮಾನ ಮಾಡಲಾಗಿದೆ. ಈ ಬಗ್ಗೆ ಸರಕಾರ ನೀಡುವ ನಿರ್ದೇಶನದಂತೆ ಲಸಿಕೆ ನೀಡುವ ಕಾರ್ಯವನ್ನು ಅಚ್ಚುಕಟ್ಟಾಗಿ ನಡೆಸಲು ಎಲ್ಲ ರೀತಿಯ ತಯಾರಿ ಮಾಡಲಾಗಿದೆ. ಮೊದಲ ಡೋಸ್ ನೀಡಿದ 28 ದಿನಗಳ ನಂತರ ಎರಡನೆ ಡೋಸ್ ನೀಡಬೇಕಾಗುತ್ತದೆ. ಅದಕ್ಕೆ ಬೇಕಾದ ಲಸಿಕೆಗಳು ಆ ಸಮಯದಲ್ಲಿ ಬರುತ್ತದೆ ಎಂದು ಅವರು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಕೋವಿಡ್ ನೋಡೆಲ್ ಅಧಿಕಾರಿ ಡಾ.ಪ್ರಶಾಂತ್ ಭಟ್, ಲಸಿಕೆ ಉಸ್ತುವಾರಿ ಡಾ.ಎಂ.ಜಿ.ರಾಮ, ಅಧಿಕಾರಿ ಡಾ.ಪ್ರೇಮಾನಂದ, ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್ ಮೊದಲಾದವರು ಉಪಸ್ಥಿತರಿದ್ದರು.

‘ಯಾರೂ ಹಿಂದೇಟು ಹಾಕಿಲ್ಲ’

ಈವರೆಗೆ ನಮ್ಮ ಜಿಲ್ಲೆಯಲ್ಲಿ ಲಸಿಕೆ ಬೇಡ ಎಂದು ಯಾರೂ ಕೂಡ ಹಿಂದೇಟು ಹಾಕಿಲ್ಲ. ಈಗಾಗಲೇ ಲಸಿಕೆ ಪಡೆಯುವ ಆರೋಗ್ಯ ಕಾರ್ಯ ಕರ್ತರು ನೋಂದಾಣಿ ಮಾಡಿದ್ದಾರೆ. ಎಲ್ಲರೂ ಲಸಿಕೆ ತೆಗೆದುಕೊಳ್ಳಲು ಉತ್ಸುಕ ರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.

ಅದೇ ರೀತಿ ಮುಂಚೂಣಿಯಲ್ಲಿರುವ ಕೊರೋನಾ ವಾರಿಯರ್ಸ್‌ಗಳ ಪಟ್ಟಿ ಮಾಡಿದ್ದೇವೆ. ಅವರಲ್ಲಿಯೂ ಯಾರು ಕೂಡ ಲಸಿಕೆ ಬೇಡ ಎಂದು ಹೇಳಿಲ್ಲ. ಎಲ್ಲರು ನೋಂದಾಣಿ ಮಾಡುತ್ತಿದ್ದಾರೆ. ಲಸಿಕೆ ಬಂದ ಹಾಗೆ ಎಲ್ಲರಿಗೂ ಹಂತ ಹಂತವಾಗಿ ನೀಡಲಾಗು ವುದು. ಪಟ್ಟಿ ಮಾಡಿದ ಫಲಾನುಭವಿಗಳ ಮೊಬೈಲ್‌ಗೆ ಕೇಂದ್ರದ ಮಾಹಿತಿಯೊಂದಿಗೆ ಲಸಿಕೆ ತೆಗೆದುಕೊಳ್ಳುವ ಕುರಿತ ಮಾಹಿತಿ ಸಂದೇಶವು ರವಾನೆಯಾಗುತ್ತದೆ ಎಂದರು.

''ಪ್ರತಿ ಫಲಾನುಭವಿಗಳಿಗೆ 0.5ಎಂಎಲ್ ಡೋಸ್‌ನ್ನು ನೀಡಲಾಗುವುದು. ಒಂದು ಬಾಟಲ್‌ನಲ್ಲಿ 10 ಡೋಸ್‌ಗಳಿದ್ದು, ಹೀಗೆ ಒಟ್ಟು 1200 ಬಾಟಲು ಗಳು ಜಿಲ್ಲೆಗೆ ಬಂದಿವೆ. ಮೊದಲ ಹಂತದಲ್ಲಿ ಐದು ಸರಕಾರಿ ಮತ್ತು ಒಂದು ಖಾಸಗಿ ಕೇಂದ್ರದಲ್ಲಿ 600 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡ ಲಾಗುವುದು. ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಜಿ.ಜಗದೀಶ್ ಜ.16 ರಂದು ಬೆಳಗ್ಗೆ 11.30ಕ್ಕೆ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಚಾಲನೆ ನೀಡಲಿದ್ದಾರೆ.''

-ಡಾ.ಸುಧೀರ್‌ಚಂದ್ರ ಸೂಡ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಉಡುಪಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News