ರಾಜ್ಯ ಸರಕಾರಕ್ಕೆ ತಾಪಂ ವ್ಯವಸ್ಥೆಯನ್ನು ರದ್ದು ಮಾಡುವ ಅಧಿಕಾರವಿಲ್ಲ: ಯು.ಟಿ.ಖಾದರ್

Update: 2021-01-14 09:38 GMT

ಮಂಗಳೂರು, ಜ.14: ಪಂಚಾಯತ್ ರಾಜ್ ಕಾಯ್ದೆಯ 73ನೇ ತಿದ್ದುಪಡಿ ತ್ರಿಸ್ತರ ಪದ್ಧತಿಯಲ್ಲಿ ರಾಜ್ಯ ಸರಕಾರಕ್ಕೆ ತಾಪಂ ವ್ಯವಸ್ಥೆಯನ್ನು ರದ್ದು ಮಾಡುವ ಅಧಿಕಾರವಿಲ್ಲ ಎಂದು ಮಾಜಿ ಸಚಿವ, ಶಾಶಕ ಯು.ಟಿ. ಖಾದರ್ ಹೇಳಿದ್ದಾರೆ.

ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರ ಸ್ಥಳೀಯ ಚುನಾಯಿತ ಸಂಸ್ಥೆಗಳಡಿ ತಾಪಂ ವ್ಯವಸ್ಥೆಯನ್ನು ರದ್ದುಪಡಿಸುವ ಬಗ್ಗೆ ಹೇಳಿಕೆಗಳು ಕೇಳಿಬರುತ್ತಿವೆ. ಸರಕಾರವು ಪಂಚಾಯತ್ ರಾಜ್ ತಜ್ಞರ ಜತೆ ಚರ್ಚಿಸದೆ, ಪ್ರತಿಪಕ್ಷವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ತಾಪಂ ವ್ಯವಸ್ಥೆಯನ್ನು ರದ್ದು ಮಾಡುವ ಬಗ್ಗೆ ಹೇಳಿಕೆ ನೀಡುತ್ತಿರುವುದು ಖಂಡನೀಯ. ಸರಕಾರಕ್ಕೆ ತ್ರಿಸ್ತರ ಪದ್ಧತಿ ವಿರುದ್ಧ ಹೋಗಲು ಸಾಧ್ಯವೇ? ಇದು ಅಸಾಂವಿಧಾನಿಕವಲ್ಲವೇ? ಈ ಬಗ್ಗೆ ಗ್ರಾಮೀಣಾಭಿವೃದ್ಧಿ ಸಚಿವರು ರಾಜ್ಯದ ಜನತೆಗೆ ಸ್ಪಷ್ಟ ಉತ್ತರ ನೀಡಬೇಕು ಎಂದರು,

ತಾಪಂ ವ್ಯವಸ್ಥೆಯಡಿ 29 ಇಲಾಖೆಗಳು ಬರುತ್ತಿದ್ದು, ಅದರ ಬಗ್ಗೆ ನಿಗಾ ಇಡುವವರು ಯಾರು? ಎಲ್ಲವನ್ನೂ ಜಿಪಂ, ಶಾಸಕರು ನೋಡಲಿಕ್ಕೆ ಆಗುತ್ತದೆಯೇ? ಆಯಾಯ ತಾಲೂಕು ಮಟ್ಟದಲ್ಲಿ ಅಭಿವೃದ್ಧಿ ಮೇಲ್ವಿಚಾರಣೆಗೆ ತಾಪಂ ಅಗತ್ಯವಾಗಿದೆ. ಯಾವುದೇ ಕಾರಣಕ್ಕೂ ತಾಪಂ ರದ್ದುಪಡಿಸಬಾರದು. ಒಂದು ವೇಳೆ ತಾಪಂಗೆ ಅನುದಾನ ಕಡಿಮೆಯಿದ್ದರೆ ರಾಜ್ಯ ಸರಕಾರ ಅದರ ಮೊತ್ತ ಅಧಿಕಗೊಳಿಸಿ ಬಲಪಡಿಸಲಿ ಎಂದು ಖಾದರ್ ಸಲಹೆ ನೀಡಿದರು.

*ದ.ಕ. ಜಿಲ್ಲೆಯಲ್ಲಿ ಮೀನುಗಾರಿಕೆಗೆ ಸಂಬಂಧಪಟ್ಟಂತೆ ಈ ಹಿಂದೆ 315 ಲೀ. ಸೀಮೆಎಣ್ಣೆ ಲಭಿಸುತ್ತಿತ್ತು. ಆದರೆ ಕಳೆದ 3 ತಿಂಗಳಿನಿಂದ ಅದನ್ನು 130 ಲೀಟರ್‌ಗೆ ಕಡಿತಗೊಳಿಸಲಾಗಿದೆ. ಇದು ಮೀನುಗಾರಿಕೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಸಣ್ಣ ಮೀನುಗಾರರು ವಹಿವಾಟು ನಡೆಸುವುದೇ ಕಷ್ಟವಾಗಿದೆ. ಉಚ್ಚಿಲ ವ್ಯಾಪ್ತಿಯಲ್ಲಿ ಕಳೆದ ವರ್ಷ ಕಡಲ್ಕೊರೆತದಿಂದ ರಸ್ತೆ ಕುಸಿದು ಬಿದ್ದಿದ್ದು, ಪಿಡಬ್ಲ್ಯುಡಿ ಮುಖಾಂತರ 50 ಲಕ್ಷ ರೂ. ಟೆಂಡರ್ ಆಗಿದೆ. ಸಮರ್ಪಕ ತಡೆಗೋಡೆ ಮಾಡದಿದ್ದರೆ ಈ ಕಾಮಗಾರಿಯೂ ಉಳಿಯುವುದಿಲ್ಲ. ಈ ಬಗ್ಗೆ ಸಚಿವ ಜತೆ ಮಾತನಾಡಿದ್ದು, ತಡೆಗೋಡೆ ನಿರ್ಮಾಣಕ್ಕೆ 4.5 ಕೋ.ರೂ. ತಕ್ಷಣ ಬಿಡುಗಡೆಗೊಳಿಸಲು ಕೋರಲಾಗಿದೆ. ಹಣ ಬಿಡುಗಡೆಯಾದ ತಕ್ಷಣ ಕಾಮಗಾರಿ ಆರಂಭವಾಗಲಿದೆ ಎಂದು ಖಾದರ್ ನುಡಿದರು.

ಶಾಸಕ ಬಸವನಗೌಡ ಯತ್ನಾಳ್‌ರ ಸಿ.ಡಿ ಬಾಂಬ್ ಆರೋಪಕ್ಕೆ ಪ್ರತಿಕ್ರಿಯಿಸಿದ ಖಾದರ್, ಎಲ್ಲ ವಿಚಾರಗಳನ್ನು ಜನತೆ ಸೂಕ್ಷ್ಮವಾಗಿ ಗಮನಿಸುತ್ತಾರೆ. ಶಾಸಕ ಸುನೀಲ್ ಕುಮಾರ್ ಕೂಡಾ ‘ನನಗೆ ಪಕ್ಷ ನಿಷ್ಠೆ ಗೊತ್ತು, ಬ್ಲ್ಯಾಕ್‌ಮೇಲೆ ಗೊತ್ತಿಲ್ಲ’ ಹೇಳುತ್ತಾರೆ. ಇದರರ್ಥ ಏನು? ಎಂದು ಪ್ರಶ್ನಿಸಿದರು.

*ಅಂಗಾರ ಸಚಿವರಾಗಿರುವುದು ಸಂತೋಷದ ವಿಚಾರ

ಸುಳ್ಯ ಶಾಸಕ ಎಸ್. ಅಂಗಾರ ಸಚಿವರಾಗಿರುವುದು ಸಂತೋಷದ ವಿಷಯ. ಕೋಟ ಶ್ರೀನಿವಾಸ ಪೂಜಾರಿ ಕೂಡಾ ಉತ್ತಮವಾಗಿ ಕಾರ್ಯನಿರ್ವಹಿಸಿದ್ದು, ಅವರನ್ನೇ ಉಸ್ತುವಾರಿ ಸಚಿವರನ್ನಾಗಿ ಮುಂದುವರಿಸುವುದಕ್ಕೆ ನನ್ನ ಅಭ್ಯಂತರವಿಲ್ಲ. ಆದರೆ ಅವರನ್ನು ಉಡುಪಿಯ ಬದಲು ದ.ಕ. ಜಿಲ್ಲೆಗೆ ಉಸ್ತುವಾರಿಯನ್ನಾಗಿ ಮಾಡಿರುವುದರ ಉದ್ದೇಶವೇನು ಎಂಬುದನ್ನು ಸರಕಾರ ಸ್ಪಷ್ಟಪಡಿಸಲಿ ಎಂದು ಖಾದರ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು, ಜಿಪಂ ಮಾಜಿ ಅಧ್ಯಕ್ಷೆ ಮಮತಾ ಗಟ್ಟಿ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಈಶ್ವರ್ ಉಳ್ಳಾಲ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News