ವಿವಿಯ ಕಾನೂನು ಬಾಹಿರ ಕೃತ್ಯ ತನಿಖೆಯಾಗಲಿ

Update: 2021-01-14 17:57 GMT

ಮಾನ್ಯರೇ,

ಮೈಸೂರು ವಿವಿಯಲ್ಲಿ ನಡೆದಿದೆ ಎನ್ನಲಾದ ತಾತ್ಕಾಲಿಕ ನೌಕರರು ಮತ್ತು ಅತಿಥಿ ಉಪನ್ಯಾಸಕರ ಅಕ್ರಮ ನೇಮಕಾತಿಯು ವಿಶ್ವವಿದ್ಯಾನಿಲಯದಲ್ಲಿ ಕಲುಷಿತ ವಾತಾವರಣಕ್ಕೆ ಸಾಕ್ಷಿಯಾಗುತ್ತಿದೆ. ಮೈಸೂರು ವಿವಿ ಸಿಂಡಿಕೇಟ್ ಸದಸ್ಯರು, ವಿವಿಯ ಉನ್ನತಾಧಿಕಾರಿಗಳಿಂದ ಆಗಿರುವ ಕರ್ತವ್ಯಲೋಪ ಹಾಗೂ ಅಧಿಕಾರ ದುರುಪಯೋಗದ ಕುರಿತು ಶೀಘ್ರ ಕೂಲಂಕಷವಾಗಿ ತನಿಖೆಯಾಗಬೇಕಿದೆ. ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಮೈಸೂರು ವಿವಿ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಆದಕಾರಣ ತಾತ್ಕಾಲಿಕ ನೌಕರರು ಯಾವುದೇ ಹೆಚ್ಚಿನ ವೇತನಕ್ಕಾಗಿ ಅರ್ಜಿ ಸಲ್ಲಿಸಬಾರದು ಎಂದು ಮಾನ್ಯ ಕುಲಸಚಿವರು ಪ್ರತಿಯೊಂದು ವಿಭಾಗಗಳಿಗೆ ಸುತ್ತೋಲೆ ನೀಡಿರುತ್ತಾರೆ. ಇದರ ಅನ್ವಯ ತಾತ್ಕಾಲಿಕ ನೌಕರರು ಯಾರೂ ಹೆಚ್ಚಿನ ವೇತನಕ್ಕಾಗಿ ಅರ್ಜಿ ಸಲ್ಲಿಸಿರುವುದಿಲ್ಲ..! ಆದರೆ ಇದೇ ಸಮಯದಲ್ಲಿ ಹಳೆ ದಿನಾಂಕಕ್ಕೆ ಹೊಂದಿಕೆಯಾಗುವಂತೆ ಕಳೆದ ಡಿಸೆಂಬರ್‌ನಲ್ಲಿ ಸರಿಸುಮಾರು 30 ಜನ ತಾತ್ಕಾಲಿಕ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗಿದೆ.

ವಿವಿಗೆ ಸಂಬಂಧಪಡದ ಒಬ್ಬ ಮಧ್ಯವರ್ತಿಯ ಮೂಲಕ ಹಣ ಪಡೆದು ತಮಗಿಷ್ಟಬಂದಂತೆ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಂಡಿರುವುದರಿಂದ ಅರ್ಹತೆ ಇರುವ ಎಷ್ಟೋ ಬಡ ವಿದ್ಯಾರ್ಥಿಗಳಿಗೆ ತುಂಬಾ ಮೋಸವಾಗಿದೆ. ಯಾರೂ ಹೇಳದ ಕೇಳದ ಇಂತಹ ಪ್ರಕ್ರಿಯೆಗಳು ಸರಳವಾಗಿ ಈ ವಿಶ್ವವಿದ್ಯಾನಿಲಯದಲ್ಲಿ ನಡೆಯುತ್ತಿರುವುದು ನಾಚಿಕೆಗೇಡಿನ ಸಂಗತಿ. ಇದು ಕುಲಪತಿಗಳ ಪಾತ್ರವಿಲ್ಲದೆ ಹೇಗೆ ನಡೆಯಲು ಸಾಧ್ಯ..? ಅದರಲ್ಲೂ ಸಂದಿಗ್ಧ ಪರಿಸ್ಥಿತಿಯ ಕೊರೋನ ಕಾಲಘಟ್ಟದಲ್ಲಿ..! ಇವರನ್ನು ನೇಮಕ ಮಾಡಿಕೊಳ್ಳುವಾಗ ವಿವಿಗೆ ಆರ್ಥಿಕ ಸಂಕಷ್ಟ ಎದುರಾಗಲಿಲ್ಲವೇ..? ಇವೆೆಲ್ಲಾ ಅಕ್ರಮ ನೇಮಕಾತಿ ಅಲ್ಲವೇ..! ದುಪ್ಪಟ್ಟು ಹಣದ ವರ್ಗಾವಣೆ ನಡೆದು ಇಲ್ಲಿ ಭಾರೀ ಭ್ರಷ್ಟಾಚಾರ ನಡೆದಿರುವ ಸಾಧ್ಯತೆ ಇದೆ. ಇಲ್ಲಿ ನಡೆದಿದೆ ಎನ್ನಲಾದ ದೊಡ್ಡಮಟ್ಟದ ಹಗರಣಕ್ಕೆ ಸಂಬಂಧಿಸಿದಂತೆ ಇದರಲ್ಲಿ ಭಾಗಿಯಾಗಿರುವವರ ವಿರುದ್ಧ ಉನ್ನತ ಶಿಕ್ಷಣ ಸಚಿವರು, ಮೈಸೂರು ಜಿಲ್ಲಾಧಿಕಾರಿಗಳು, ಲೋಕಾಯುಕ್ತರು ಮತ್ತು ರಾಜ್ಯ ಸರಕಾರ ಕೂಡಲೇ ಮುಲಾಜಿಲ್ಲದೇ ಶಿಸ್ತುಕ್ರಮ ಕೈಗೊಳ್ಳಲಿ.

Writer - - ಅನಿಲ್ ಕುಮಾರ್, ನಂಜನಗೂಡು.

contributor

Editor - - ಅನಿಲ್ ಕುಮಾರ್, ನಂಜನಗೂಡು.

contributor

Similar News