ಕಂಟೈನ್ಮೆಂಟ್ ವಲಯಗಳ ಹೊರಗೆ ಅಂಗನವಾಡಿಗಳ ಪುನರಾರಂಭ: ಜ.31ರೊಳಗೆ ನಿರ್ಧಾರಕ್ಕೆ ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ಸೂಚನೆ

Update: 2021-01-14 17:59 GMT

ಹೊಸದಿಲ್ಲಿ,ಜ.14: ಕಂಟೈನ್ಮೆಂಟ್ ವಲಯಗಳ ಹೊರಗಿರುವ ಅಂಗನವಾಡಿ ಕೇಂದ್ರಗಳನ್ನು ತೆರೆಯುವ ಬಗ್ಗೆ ಜ.31ರೊಳಗೆ ನಿರ್ಧಾರವೊಂದನ್ನು ಕೈಗೊಳ್ಳುವಂತೆ ಸರ್ವೋಚ್ಚ ನ್ಯಾಯಾಲಯವು ಕೋವಿಡ್-19 ಲಾಕ್‌ಡೌನ್‌ನಿಂದಾಗಿ ಮುಚ್ಚಲಾಗಿದ್ದ ಈ ಕೇಂದ್ರಗಳನ್ನು ಇನ್ನೂ ಪುನರಾರಂಭಿಸದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ.

ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು 2020,ನ.11ರಂದು ಹೊರಡಿಸಿದ್ದ ತನ್ನ ಮಾರ್ಗಸೂಚಿಯಲ್ಲಿ ಅಂಗನವಾಡಿ ಕೇಂದ್ರಗಳನ್ನು ತೆರೆಯಲು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಅನುಮತಿ ನೀಡಿತ್ತು ಎಂದು ಅಂಗನವಾಡಿ ಕೇಂದ್ರಗಳ ಮುಚ್ಚುವಿಕೆಯನ್ನು ಪ್ರಶ್ನಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ವಿಚಾರಣೆ ವೇಳೆ ಬೆಟ್ಟು ಮಾಡಿದ ಸರ್ವೋಚ್ಚ ನ್ಯಾಯಾಲಯವು,ಅವುಗಳನ್ನು ತೆರೆಯುವ ನಿರ್ಧಾರವನ್ನು ಕೈಗೊಳ್ಳುವುದು ಈಗ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಬಾಧ್ಯತೆಯಾಗಿದೆ ಎಂದು ತಿಳಿಸಿತು.

ಅಂಗನವಾಡಿ ಕೇಂದ್ರಗಳನ್ನು ತೆರೆಯದಿರುವ ಯಾವುದೇ ನಿರ್ಧಾರವನ್ನು ರಾಜ್ಯ ವಿಪತ್ತು ನಿರ್ವಹಣೆ ಪ್ರಾಧಿಕಾರವು ಹಾಗೆ ಸೂಚಿಸಿದರೆ ಮಾತ್ರ ತೆಗೆದುಕೊಳ್ಳಬೇಕು ಎಂದ ನ್ಯಾಯಾಲಯವು,ನಿರ್ಬಂಧ ಚಾಲ್ತಿಯಲ್ಲಿರುವವರೆಗೆ ಕಂಟೈನ್ಮೆಂಟ್ ವಲಯಗಳಲ್ಲಿರುವ ಅಂಗನವಾಡಿ ಕೇಂದ್ರಗಳನ್ನು ತೆರೆಯುವಂತಿಲ್ಲ ಎಂದು ಸ್ಪಷ್ಟಪಡಿಸಿತು.

ತನ್ನ ಪ್ರಜೆಗಳ ಆರೋಗ್ಯವನ್ನು ರಕ್ಷಿಸುವುದು ಸರಕಾರದ ಪ್ರಾಥಮಿಕ ಕರ್ತವ್ಯವಾಗಿದೆ ಎಂದು ಹೇಳಿದ ನ್ಯಾಯಾಲಯವು,ಅಂಗನವಾಡಿ ಕೇಂದ್ರಗಳ ಆರಂಭ,ಅವುಗಳ ಮೂಲಕ ಪೌಷ್ಟಿಕ ಆಹಾರಗಳ ಒದಗಣೆ,ಮಧ್ಯಾಹ್ನದೂಟ ಇತ್ಯಾದಿಗಳಂತಹ ವಿವಿಧ ಯೋಜನೆಗಳ ಮೂಲಕ ಸರಕಾರವು ತನ್ನ ಬದ್ಧತೆಯನ್ನು ನಿರ್ವಹಿಸುತ್ತಿದೆ ಎನ್ನುವುದರಲ್ಲಿ ಶಂಕೆಯಿಲ್ಲ. ಆದರೆ ಇದನ್ನು ಅರ್ಥಪೂರ್ಣವಾಗಿಸಲು ಈ ಯೋಜನೆಗಳು ಜನರಿಗೆ ತಲುಪುವಂತಿರಬೇಕು ಮತ್ತು ರಾಷ್ಟ್ರೀಯ ಆಹಾರ ಸುರಕ್ಷತಾ ಕಾಯ್ದೆಯಲ್ಲಿಯ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು ನಿಜವಾದ ಅರ್ಥದಲ್ಲಿ ಪೌಷ್ಟಿಕ ಆಹಾರಗಳನ್ನು ಪೂರೈಸಬೇಕು ಎಂದು ತಿಳಿಸಿತು.

ನ.11ರ ಮಾರ್ಗಸೂಚಿಯ ಬಳಿಕ ಪಂಜಾಬ ಮತ್ತು ರಾಜಸ್ಥಾನದಂತಹ ಕೆಲವು ರಾಜ್ಯಗಳು ಅಂಗನವಾಡಿ ಕೇಂದ್ರಗಳನ್ನು ಪುನರಾರಂಭಿಸಿವೆ ಮತ್ತು ಈ ರಾಜ್ಯಗಳು ತಮ್ಮ ಅಫಿಡವಿಟ್‌ಗಳಲ್ಲಿ ಫಲಾನುಭವಿಗಳ ಮನೆಗಳಿಗೆ ರೇಷನ್ ಪೂರೈಸಲಾಗುತ್ತಿದೆ ಎಂದು ತಿಳಿಸಿವೆ ಎಂದು ನ್ಯಾಯಾಲಯವು ಹೇಳಿತು.

 ಮಕ್ಕಳು ಮುಂದಿನ ಪೀಳಿಗೆಯಾಗಿದ್ದಾರೆ. ಆದ್ದರಿಂದ ಮಕ್ಕಳು ಮತ್ತು ಮಹಿಳೆಯರಿಗೆ ಪೌಷ್ಟಿಕ ಆಹಾರವು ಲಭ್ಯವಾಗದಿದ್ದರೆ ಅದು ಮುಂದಿನ ಪೀಳಿಗೆಯ ಮೇಲೆ ಮತ್ತು ಅಂತಿಮವಾಗಿ ದೇಶದ ಮೇಲೆ ದುಷ್ಪರಿಣಾಮವನ್ನುಂಟು ಮಾಡುತ್ತದೆ ಎಂದೂ ಅದು ಬೆಟ್ಟು ಮಾಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News