ಸೈನಾ ನೆಹ್ವಾಲ್‌ಗೆ ಪ್ರಿ ಕ್ವಾರ್ಟರ್ ಫೈನಲ್ ನಲ್ಲಿ ಸೋಲು

Update: 2021-01-14 18:23 GMT

ಬ್ಯಾಂಕಾಕ್, ಜ.14:ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಗುರುವಾರ ಥಾಯ್ಲೆಂಡ್ ಓಪನ್ ಮಹಿಳೆಯರ ಸಿಂಗಲ್ಸ್‌ನ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ವಿಶ್ವದ 12ನೇ ಕ್ರಮಾಂಕದ ಥಾಯ್ಲೆಂಡ್‌ನ ಬುಸಾನನ್ ಒಂಗ್ಬಾಮ್ರಂಗ್‌ಫಾನ್ ವಿರುದ್ಧ ಸೋಲು ಅನುಭವಿಸಿದ್ದಾರೆ.

ಸೈನಾ ನೆಹ್ವಾಲ್ ಅವರು ಬುಸಾನನ್ ವಿರುದ್ಧ 21-23, 14-21, 16-21ಅಂತರದಲ್ಲಿ ಸೋಲು ಅನುಭವಿಸಿದರು.

ಸೈನಾ ತನ್ನ ಎದುರಾಳಿಗಿಂತ ಹೆಚ್ಚು ಬಲಶಾಲಿಯಾಗಿ ಆಟವನ್ನು ಪ್ರಾರಂಭಿಸಿದ್ದರು. ಮೊದಲ ಸೆಟ್‌ನ್ನು 23-21ಅಂತರದಿಂದ ಮೇಲುಗೈ ಸಾಧಿಸಿದ್ದರು. ಎರಡನೇ ಸೆಟ್‌ನ್ನು 14-21 ಅಂತರದಲ್ಲಿ ಕಳೆದುಕೊಂಡರು ಮತ್ತು ಮೂರನೇ ಸೆಟ್‌ನಲ್ಲಿ ವಿರಾಮದ ವೇಳೆಗೆ 1-11ರಿಂದ ಕೆಳಗಿಳಿದ ನಂತರ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಬುಧವಾರ ಸೈನಾ ಮಲೇಶ್ಯದ ಕಿಸೋನಾ ಸೆಲ್ವಾಡುರೈ ಅವರನ್ನು ನೇರ ಸೆಟ್‌ಗಳಲ್ಲಿ ಸೋಲಿಸಿ ಈವೆಂಟ್‌ನ ಎರಡನೇ ಸುತ್ತು ಪ್ರವೇಶಿಸಿದ್ದರು. ಇದೇ ವೇಳೆ ಕೆ. ಶ್ರೀಕಾಂತ್ ಕಾಲು ನೋವಿನಿಂದಾಗಿ ಕೂಟದಿಂದ ನಿರ್ಗಮಿಸಿದ್ದಾರೆ.ಶ್ರೀಕಾಂತ್ ಗುರುವಾರ ತಮ್ಮ ಎರಡನೇ ಸುತ್ತಿನ ಪಂದ್ಯದಿಂದ ಹೊರಬಂದಿದ್ದಾರೆ ಎಂದು ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್ ಇಂಡಿಯಾ ತಿಳಿಸಿದೆ. ಇದರಿಂದಾಗಿ ಎದುರಾಳಿ ಲೀ ಝಿ ಜಿಯಾ ವಾಕ್‌ಓವರ್ ಮೂಲಕ ಮುಂದಿನ ಸುತ್ತು ಪ್ರವೇಶಿಸಿದರು. ಸೌರಭ್ ವರ್ಮಾ ವಿರುದ್ಧ ಗೆಲುವು ಸಾಧಿಸಿದ ನಂತರ ಶ್ರೀಕಾಂತ್ ಬುಧವಾರ ಎರಡನೇ ಸುತ್ತಿಗೆ ತಲುಪಿದ್ದರು.

ಇತರ ಪಂದ್ಯಗಳಲ್ಲಿ ಭಾರತದ ಪುರುಷರ ಡಬಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಇಂಡೋನೇಶ್ಯದ ಜೋಡಿಯಾದ ಮುಹಮ್ಮದ್ ಅಹ್ಸಾನ್ ಮತ್ತು ಹೆಂಡ್ರಾ ಸೆಟಿಯವಾನ್ ವಿರುದ್ಧ 19-21, 17-21 ಅಂತರದಲ್ಲಿ ಎರಡನೇ ಸುತ್ತಿನಲ್ಲಿ ಸೋತರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News