​ಜಮ್ಮು- ಕಾಶ್ಮೀರದಲ್ಲಿ ಮಾನವ ಹಕ್ಕು ಉಲ್ಲಂಘನೆ ಆರೋಪ : ಮಧ್ಯಪ್ರವೇಶಕ್ಕೆ ಬ್ರಿಟನ್ ಸಂಸದರ ಆಗ್ರಹ

Update: 2021-01-15 05:30 GMT
ಫೈಲ್ ಫೋಟೊ (britannica.com)

ಲಂಡನ್: ಜಮ್ಮು ಮತ್ತು ಕಾಶ್ಮೀರದಲ್ಲಿ ಮಾನವ ಹಕ್ಕು ಉಲ್ಲಂಘನೆ ವ್ಯಾಪಕವಾಗಿ ಆಗುತ್ತಿದೆ ಎಂಬ ಆರೋಪಗಳ ಬಗ್ಗೆ ಹೌಸ್ ಆಫ್ ಕಾಮನ್ಸ್‌ನಲ್ಲಿ ಸಂಸದರು ತೀವ್ರ ಕಳವಳ ವ್ಯಕ್ತಪಡಿಸಿದರು.

ಯೂರೋಪಿಯನ್ ಒಕ್ಕೂಟ ಮತ್ತು ವಿಶ್ವಸಂಸ್ಥೆಯ ಮಾನವ ಹಕ್ಕು ಅಧಿಕಾರಿಗಳು ವಾಸ್ತವ ನಿಯಂತ್ರಣ ರೇಖೆಯ ಇಕ್ಕೆಲಗಳಲ್ಲಿ ಪರಿಶೀಲನೆ ನಡೆಸಲು ಅವಕಾಶ ಮಾಡಿಕೊಡಬೇಕು ಹಾಗೂ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಈ ವಿಚಾರವನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಜತೆ ಚರ್ಚಿಸಬೇಕು ಎಂದು ಒತ್ತಾಯಿಸಿದರು.

ಭಾರತ ಹಾಗೂ ಪಾಕಿಸ್ತಾನ ಮೇಲೆ ತನ್ನ ಪ್ರಭಾವವನ್ನು ಬಳಸಿ ಮಾನವಹಕ್ಕು ಸ್ಥಿತಿಗತಿ ಅಧ್ಯಯನಕ್ಕೆ ತನ್ನದೇ ನಿಯೋಗವನ್ನು ಬ್ರಿಟನ್ ಕಳುಹಿಸಬೇಕು ಎಂದೂ ಸಂಸದರು ಸಲಹೆ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿರುವ ಭಾರತ ಹೈಕಮಿಷನ್, "ಸಾರ್ವಜನಿಕ ಡೊಮೈನ್‌ಗಳಲ್ಲಿ ಸಾಕಷ್ಟು ಅಧಿಕೃತ ಮಾಹಿತಿಗಳು ಇದ್ದರೂ, ಪ್ರಸ್ತುತ ವಾಸ್ತವವನ್ನು ನಿರ್ಲಕ್ಷಿಸಿ ಮೂರನೇ ಶಕ್ತಿಯ ಕುಮ್ಮಕ್ಕಿನಿಂದ, "ಹತ್ಯಾಕಾಂಡ, ವ್ಯಾಪಕ ಹಿಂಸಾಚಾರ ಮತ್ತು ಚಿತ್ರಹಿಂಸೆಯ ಬಗ್ಗೆ ಸುಳ್ಳು ಪ್ರತಿಪಾದನೆ ಮಾಡಲಾಗುತ್ತಿದೆ" ಎಂದು ಹೇಳಿಕೆ ನೀಡಿದೆ.

ಸಂಸತ್ತಿನಲ್ಲಿ ನಡೆದ ಚರ್ಚೆಯಲ್ಲಿ ಸರ್ಕಾರದ ಪರವಾಗಿ ಮಾತನಾಡಿದ ಏಷ್ಯಾ ವ್ಯವಹಾರಗಳ ಖಾತೆ ಸಚಿವ ನಿಗೆಲ್ ಆಡಮ್ಸ್, "ಬ್ರಿಟನ್ ಇದಕ್ಕೆ ಪರಿಹಾರವನ್ನು ಸಲಹೆ ಮಾಡುವುದು ಅಥವಾ ಈ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸುವುದು ಸೂಕ್ತವಲ್ಲ. ಆದರೆ ಕಾಶ್ಮೀರದಲ್ಲಿ ಗಂಭೀರ ಮಾನವ ಹಕ್ಕು ಉಲ್ಲಂಘನೆ ಕಳವಳವನ್ನು ಪರಿಗಣಿಸದಿರುವುದು ತಪ್ಪಾಗುತ್ತದೆ ಎಂದು ಅಭಿಪ್ರಾಯಪಟ್ಟರು. ನಮ್ಮ ಮಾನವಹಕ್ಕು ಆಯೋಗ ಕಾಶ್ಮೀರಕ್ಕೆ ಭೇಟಿ ನೀಡಲು ಅನುಮತಿಗಾಗಿ ಕೋರಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News