ಹಾರ್ವರ್ಡ್‌ ಯುನಿವರ್ಸಿಟಿಯಲ್ಲಿ ಸಹಪ್ರಾಧ್ಯಾಪಕಿ ಹುದ್ದೆ ನೀಡುತ್ತೇವೆಂದು ʼವಂಚನೆ': ಪತ್ರಕರ್ತೆ ನಿಧಿ ರಾಝ್ದಾನ್ ಆರೋಪ

Update: 2021-01-15 14:05 GMT
photo: yahoo news india

ಹೊಸದಿಲ್ಲಿ,ಜ.15: "ಅಮೆರಿಕಾದ ಪ್ರತಿಷ್ಠಿತ ಹಾರ್ವರ್ಡ್‌ ಯುನಿವರ್ಸಿಟಿಯಲ್ಲಿ ಸಹ ಪ್ರಾಧ್ಯಾಪಕಿ ಹುದ್ದೆಗೆ ನೇಮಕ ಮಾಡಲಾಗಿದೆ ಎಂದು ತನ್ನನ್ನು ವಂಚನೆಯ ಜಾಲಕ್ಕೆ ಸಿಲುಕಿಸಲಾಗಿದೆ" ಎಂದು ಹಿರಿಯ ಪತ್ರಕರ್ತೆ ಹಾಗೂ ಎನ್‌ʼಡಿಟಿವಿಯಲ್ಲಿ 21 ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದ ನಿಧಿ ರಾಝ್ದಾನ್‌ ಆರೋಪಿಸಿದ್ದಾರೆ. ಮೋಸದ ಜಾಲಕ್ಕೆ ಸಿಲುಕಿದ ಕುರಿತು ಸಾಮಾಜಿಕ ತಾಣದಾದ್ಯಂತ ಸಹತಾಪ ಮತ್ತು ಆಕ್ರೋಶ ವ್ಯಕ್ತವಾಗಿದೆ.

ಜೂನ್‌ ತಿಂಗಳಿನಲ್ಲಿ "ಎನ್‌ʼಡಿಟಿವಿಯಲ್ಲಿನ 21 ವರ್ಷಗಳ ಕಾಲ ದೀರ್ಘ ವೃತ್ತಿ ಜೀವನದ ಬಳಿಕ ನಾನು ಹಾರ್ವರ್ಡ್‌ ಯುನಿವರ್ಸಿಟಿಯಲ್ಲಿ ಪತ್ರಿಕೋದ್ಯಮ ಸಹ ಪ್ರಾಧ್ಯಾಪಕಿಯಾಗಿ ಕಾರ್ಯ ನಿರ್ವಹಿಸುವ ಸಲುವಾಗಿ ಮುಂದುವರಿಯಲಿದ್ದೇನೆ” ಎಂದು ಟ್ವೀಟ್‌ ಮಾಡಿದ್ದರು. ಈ ಸಂದರ್ಭ ಸಾಮಾಜಿಕ ತಾಣದಲ್ಲಿ ಅವರಿಗೆ ಹಲವರು ಶುಭಾಶಯ ಕೋರಿದ್ದರು.

“ನಾನು ಸೆಪ್ಟೆಂಬರ್‌ 2020ರ ವೇಳೆಗೆ ಹಾರ್ವರ್ಡ್‌ ಯುನಿವರ್ಸಿಟಿಗೆ ಸೇರ್ಪಡೆಗೊಳ್ಳುತ್ತೇನೆ ಎಂದು ನಂಬಿದ್ದೆ. ಬಳಿಕ ಅದು ಜನವರಿ 2021ಕ್ಕೆ ಮುಂದೂಡಲ್ಪಟ್ಟಿತ್ತು. ಆ ವೇಳೆ  ಈ ಹೊಸ ಯೋಜನೆಯ ಕುರಿತು ತಯಾರಿ ನಡೆಸುತ್ತಿರುವಾಗ ಕೆಲವು ಆಡಳಿತಾತ್ಮಕ ವೈಪರೀತ್ಯಗಳನ್ನು ಗಮನಿಸಿದೆ. ಕೋವಿಡ್‌ ನ ಕಾರಣದಿಂದಾಗಿ ತಡವಾಗುತ್ತಿರಬಹುದೆಂದು ಅಂದಾಜಿಸಿದರೂ ಬಳಿಕ ಈ ಕುರಿತಾದಂತೆ ಅನುಮಾನಗಳು ಹೆಚ್ಚಾದವು"

“ ಈ ಪ್ರಕ್ರಿಯೆಯಲ್ಲಿ ಅನುಮಾನಗಳು ವ್ಯಕ್ತವಾದ ವೇಳೆ ನಾನು ಹಾರ್ವರ್ಡ್‌ ಯುನಿವರ್ಸಿಟಿಯ ಅಧಿಕೃತರನ್ನು ಸಂಪರ್ಕಿಸಿದೆ. ಈ ವೇಳೆ ಇದು ಮೋಸದ ಜಾಲ ಎಂದು ನನಗೆ ತಿಳಿದು ಬಂದಿದ್ದು, ಎಲ್ಲಾ ವಿಚಾರಗಳನ್ನೂ ಅವರಿಗೆ ವಿವರಿಸಿದ್ದೇನೆ. ವಂಚಕರು ನಂಬಲರ್ಹ ಮತ್ತು ಚಾಣಾಕ್ಷತನದಿಂದ ವ್ಯವಹರಿಸಿ ನನ್ನ ಹಲವಾರು ದಾಖಲೆಗಳನ್ನು ಪಡೆದುಕೊಂಡಿದ್ದಾರೆ. ನನ್ನ ಲ್ಯಾಪ್ ಟಾಪ್‌, ಇಮೈಲ್‌ ಮತ್ತು ಮೊಬೈಲ್‌ ಗಳಲ್ಲಿನ ಮಾಹಿತಿಗಳನ್ನೂ ಸಂಗ್ರಹಿಸಿದ್ದಾರೆ.  ಈ ಕುರಿತು ನಾನು ಪೊಲೀಸ್‌ ಪ್ರಕರಣ ದಾಖಲಿಸಿದ್ದೇನೆ. ಪೊಲೀಸರು ಈ ಕುರಿತು ಸಮರ್ಪಕ ತನಿಖೆ ನಡೆಸಿ ಆರೋಪಿಗಳನ್ನು ಪತ್ತೆಹಚ್ಚುತ್ತಾರೆಂಬ ನಂಬಿಕೆ ನನಗಿದೆ ಎಂದು ನಿಧಿ ಹೇಳಿಕೆ ನೀಡಿದ್ದಾಗಿ scroll.in ವರದಿ ಮಾಡಿದೆ.

ನಿಧಿ ರಾಝ್ದಾನ್‌ ಹಿರಿಯ ಪತ್ರಕರ್ತೆಯಾಗಿದ್ದು, ಎನ್ಡಿಟಿವಿಯಲ್ಲಿ 21 ವರ್ಷಗಳ ಕಾಲ ವೃತ್ತಿ ಜೀವನ ನಿರ್ವಹಿಸಿದ್ದಾರೆ. ಜಮ್ಮುಕಾಶ್ಮೀರದ ಕಥುವಾ ಅತ್ಯಾಚಾರದ ಕುರಿತು ಅವರು ತಯಾರಿಸಿದ್ದ ವರದಿಗೆ ಪ್ರೆಸ್‌ ಇನ್‌ ಸ್ಟಿಟ್ಯೂಟ್‌ ಆಫ್‌ ಇಂಡಿಯಾದ ಪ್ರಶಸ್ತಿಯೂ ದೊರಕಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News