ಕೋವಿಡ್ ಯೋಧರಿಗೆ ವೇತನ ಪಾವತಿಸದ ದಿಲ್ಲಿಯ ಮೂರು ಮನಪಾಗಳಿಗೆ ಹೈಕೋರ್ಟ್ ಚಾಟಿಯೇಟು

Update: 2021-01-15 16:18 GMT

ಹೊಸದಿಲ್ಲಿ,ಜ.15: ವೈದ್ಯರು,ನರ್ಸ್‌ಗಳು ಮತ್ತು ಸ್ವಚ್ಛತಾ ಕಾರ್ಮಿಕರು ಸೇರಿದಂತೆ ಕೋವಿಡ್-19 ಮುಂಚೂಣಿಯ ಕಾರ್ಯಕರ್ತರಿಗೆ ಬಾಕಿಯಿರುವ ವೇತನ ಮತ್ತು ಪಿಂಚಣಿಗಳು ಪಾವತಿಯಾಗುವಂತಾಗಲು ‘ದೊರೆಗಳಂತೆ ಬದುಕುತ್ತಿರುವ ’ ಕೌನ್ಸಿಲರ್‌ಗಳು ಮತ್ತು ಹಿರಿಯ ಅಧಿಕಾರಿಗಳ ವಿಶೇಷ ಸೌಲಭ್ಯಗಳು ಸೇರಿದಂತೆ ಇಲ್ಲಿಯ ಮೂರು ಮಹಾನಗರ ಪಾಲಿಕೆಗಳ ಎಲ್ಲ ಅನಗತ್ಯ ವೆಚ್ಚಗಳನ್ನು ನಿಲ್ಲಿಸಲು ತಾನು ಉದ್ದೇಶಿಸಿರುವುದಾಗಿ ದಿಲ್ಲಿ ಉಚ್ಚ ನ್ಯಾಯಾಲಯವು ತಿಳಿಸಿದೆ.

 ಕೊರೋನ ಯೋಧರು ಸೇರಿದಂತೆ ಮೂರು ಮಹಾನಗರ ಪಾಲಿಕೆಗಳ ಹಾಲಿ ಮತ್ತು ನಿವೃತ್ತ ನೌಕರರ ವೇತನಗಳು ಮತ್ತು ಪಿಂಚಣಿಗಳನ್ನು ಪಾವತಿಸಲಾಗಿಲ್ಲ ಎಂದು ದೂರಿಕೊಂಡು ಸಲ್ಲಿಸಲಾಗಿರುವ ಹಲವಾರು ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್)ಗಳ ವಿಚಾರಣೆಯನ್ನು ಶುಕ್ರವಾರ ಕೈಗೆತ್ತಿಕೊಂಡಿದ್ದ ನ್ಯಾಯಮೂರ್ತಿಗಳಾದ ವಿಪಿನ್ ಸಾಂಘಿ ಮತ್ತು ರೇಖಾ ಪಲ್ಲಿ ಅವರ ಪೀಠವು,ಹಿರಿಯ ಅಧಿಕಾರಿಗಳಿಗಾಗಿ ಮಾಡಿರುವ ವೆಚ್ಚಗಳ ವಿವರಗಳನ್ನು ಸಲ್ಲಿಸುವಂತೆ ಮನಪಾಗಳಿಗೆ ನಿರ್ದೇಶ ನೀಡಿತು. ಈ ಮನಪಾಗಳಲ್ಲಿ ಯಾರದಾದರೂ ವೇತನ ಕಡಿತ ಮಾಡುವುದಿದ್ದರೆ ಅದು ಈ ಹಿರಿಯ ಅಧಿಕಾರಿಗಳು ಮತ್ತು ಕೌನ್ಸಿಲರ್‌ಗಳಿಂದ ಆರಂಭಗೊಳ್ಳುತ್ತದೆ ಎಂದು ಪೀಠವು ತಿಳಿಸಿತು.

 ಕೋವಿಡ್-19 ಸಾಂಕ್ರಾಮಿಕದ ಈ ಕಷ್ಟಕಾಲದಲ್ಲಿ ಹಿರಿಯ ಅಧಿಕಾರಿಗಳ ವಿಶೇಷ ಸೌಲಭ್ಯಗಳಂತಹ ಅನಗತ್ಯ ವೆಚ್ಚಗಳಿಗಿಂತ ಕೊರೋನ ಯೋಧರ ವೇತನ ಪಾವತಿಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕು ಎಂದು ಹೇಳಿದ ಪೀಠವು,ಇದಕ್ಕಾಗಿ ಮೂರೂ ಮನಪಾಗಳ ಎಲ್ಲ ಅನಗತ್ಯ ವೆಚ್ಚಗಳನ್ನು ನಿಲ್ಲಿಸಲು ತಾನು ಉದ್ದೇಶಿಸಿರುವುದಾಗಿ ಸ್ಪಷ್ಟಪಡಿಸಿತು.

ಉನ್ನತ ಸ್ಥಾನಗಳಲ್ಲಿರುವವರು ದೊರೆಗಳಂತೆ ಜೀವನ ಸಾಗಿಸುತ್ತಿದ್ದಾರೆ. ಅವರಿಗೆ ಒಮ್ಮೆ ಬಿಸಿ ತಟ್ಟಿದರೆ ಎಲ್ಲವೂ ಸರಿಯಾಗುತ್ತದೆ ಎಂದ ನ್ಯಾಯಾಲಯವು,ಮೂರು ಮತ್ತು ನಾಲ್ಕನೇ ದರ್ಜೆ ನೌಕರರೇಕೆ ನರಳಬೇಕು ಎಂದು ಪ್ರಶ್ನಿಸಿತು.

ವೇತನ ಮತ್ತು ಪಿಂಚಣಿಗಳು ಸಂವಿಧಾನದಡಿ ಮೂಲಭೂತ ಹಕ್ಕುಗಳಾಗಿರುವುದರಿಂದ ಇವುಗಳನ್ನು ಪಾವತಿಸದಿರುವುದಕ್ಕೆ ಹಣಕಾಸಿನ ಕೊರತೆಯ ನೆಪವನ್ನು ಹೇಳುವಂತಿಲ್ಲ ಎಂದು ನ್ಯಾಯಾಲಯವು ಹೇಳಿತು.

ಮೂಲ ತೆರಿಗೆ ನಿಯೋಜನೆಯಡಿ ಮನಪಾಗಳಿಗೆ ವರ್ಗಾಯಿಸಿರುವ ಹಣದಲ್ಲಿ ಅವುಗಳಿಗೆ ನೀಡಿರುವ ಸಾಲದ ಮೊತ್ತವನ್ನು ಕಡಿತಗೊಳಿಸುವ ದಿಲ್ಲಿ ಸರಕಾರದ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಲಯವು,ಆರ್‌ಬಿಐ ಕೂಡ ಸಾಲಗಳ ಮರುಪಾವತಿಗೆ ಸ್ತಂಭನವನ್ನು ಘೋಷಿಸಿತ್ತು ಎಂದು ಬೆಟ್ಟು ಮಾಡಿತು.

ಸರಕಾರವು ಸಾಲದ ಹಣವನ್ನು ಕಡಿತಗೊಳಿಸದಿದ್ದರೆ ತಮ್ಮೆಲ್ಲ ಉದ್ಯೋಗಿಗಳಿಗೆ ವೇತನ ಪಾವತಿಸಲು ಸಾಧ್ಯವಾಗುತ್ತದೆ ಎಂದು ಮನಪಾಗಳು ವಾದಿಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News