ನೀವು ಯಾರನ್ನು ಬೆಂಬಲಿಸುತ್ತಿದ್ದೀರಿ ?: ಮಾಧ್ಯಮದವರ ವಿರುದ್ಧ ರೇಗಾಡಿದ ನಿತೀಶ್ ಕುಮಾರ್

Update: 2021-01-15 16:21 GMT

ಪಾಟ್ನ, ಜ.15: ತನ್ನ ಮನೆ ಸಮೀಪವೇ ನಡೆದ ಕೊಲೆಯ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಹನೆ ಕಳೆದುಕೊಂಡು ರೇಗಿದ ಘಟನೆ ಶುಕ್ರವಾರ ನಡೆದಿರುವುದಾಗಿ ವರದಿಯಾಗಿದೆ.

ಇಂಡಿಗೊ ಸಂಸ್ಥೆಯ ಮ್ಯಾನೇಜರ್ ರೂಪೇಶ್ ಕುಮಾರ್ ಸಿಂಗ್‌ರನ್ನು ಮಂಗಳವಾರ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಕಾರಿನಲ್ಲಿ ಮನೆಗೆ ಬಂದ ಸಿಂಗ್, ಗೇಟು ತೆರೆಯಲು ಕಾಯುತ್ತಿದ್ದಾಗ ಬೈಕಿನಲ್ಲಿ ಬಂದಿದ್ದ ಇಬ್ಬರು ವ್ಯಕ್ತಿಗಳು ಅವರ ಮೇಲೆ ಗುಂಟು ಹಾರಿಸಿ ಪರಾರಿಯಾಗಿದ್ದು ರೂಪೇಶ್ ಸ್ಥಳದಲ್ಲೇ ಮೃತಪಟ್ಟಿದ್ದರು.

ರೂಪೇಶ್ ಮನೆಯು ಮುಖ್ಯಮಂತ್ರಿ ನಿತೀಶ್ ಕುಮಾರ್ ಮನೆಗಿಂತ ಸುಮಾರು 2 ಕಿ.ಮೀ ದೂರವಿದೆ. ಶುಕ್ರವಾರ ಪಾಟ್ನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದ ನಿತೀಶ್ ಕುಮಾರ್‌ರಲ್ಲಿ ಈ ವಿಷಯ ಪ್ರಸ್ತಾಪಿಸಿದ ಮಾಧ್ಯಮದವರು, ನಿಮ್ಮ ಮನೆಯ ಬಳಿಯೇ ಇಂತಹ ಕೃತ್ಯ ನಡೆದಿರುವುದು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯ ಬಗ್ಗೆ ಪ್ರಶ್ನೆ ಮೂಡಿಸಿದೆ ಎಂದರು. ಇದಕ್ಕೆ ಸಹನೆ ಕಳೆದುಕೊಂಡ ಕುಮಾರ್ ‘ನಿಮ್ಮ ಪ್ರಶ್ನೆ ಸಂಪೂರ್ಣ ತಪ್ಪು ಮತ್ತು ಅಸಮಂಜಸವಾಗಿದೆ.  ನೀವು ಯಾರ ಪರವಾಗಿದ್ದೀರಿ? ಇದು ನಿಮಗೆ ನನ್ನ ನೇರ ಪ್ರಶ್ನೆ’ ಎಂದರು. . ಇದನ್ನು ಅಪರಾಧ ಎಂದು ಕರೆಯಬೇಡಿ. ಹತ್ಯೆ ನಡೆದಿದೆ ಮತ್ತು ಇಂತಹ ಕೃತ್ಯಗಳ ಹಿಂದೆ ಯಾವಾಗಲೂ ಉದ್ದೇಶವಿರುತ್ತದೆ. ಕೊಲೆಯ ಹಿಂದಿನ ಕಾರಣ ತಿಳಿದುಕೊಳ್ಳಬೇಕಿದೆ. ಇದನ್ನು ಪೊಲೀಸರು ಮಾಡುತ್ತಾರೆ. ನೀವು ಮಹಾನ್ ವ್ಯಕ್ತಿಗಳು. ನಿಮ್ಮಲ್ಲಿ ಯಾವುದೇ ಸುಳಿವು ಇದ್ದರೆ ಪೊಲೀಸರೊಂದಿಗೆ ಹಂಚಿಕೊಳ್ಳಿ.

2005ಕ್ಕಿಂತ ಮೊದಲು ಏನಾಗಿತ್ತು. ಆಗ ಅಪರಾಧ, ಹಿಂಸಾಚಾರ ಅತ್ಯಧಿಕವಾಗಿತ್ತು. 15 ವರ್ಷ ಆಡಳಿತ ನಡೆಸಿದವರು, ಪತಿ-ಪತ್ನಿಯ (ಲಾಲೂಪ್ರಸಾದ್ ಯಾದವ್ - ರಾಬ್ರೀ ದೇವಿ) ಆಡಳಿತದಲ್ಲಿ ಅಪರಾಧ ಪ್ರಕರಣ ಮುಗಿಲು ಮುಟ್ಟಿದ್ದಾಗ ನೀವೇಕೆ ಆ ಬಗ್ಗೆ ಸುಮ್ಮನಿದ್ದೀರಿ? ಏನಾದರೂ ಘಟನೆ ಸಂಭವಿಸಿದರೆ ನಾವು ತಕ್ಷಣ ಕ್ರಮ ಕೈಗೊಳ್ಳುತ್ತೇವೆ. ನಿಮ್ಮ ಬಗ್ಗೆ ಗೌರವವಿದೆ. ಆದರೆ ನಿಮಗೆ ವಿಶೇಷ ಸಲಹೆ ನೀಡುವವರಿಗೆ ನೀವು ತರಬೇತಿ ನೀಡಬೇಕಾಗಿದೆ’ ಎಂದು ಹರಿಹಾಯ್ದರು.

ಕೊಲೆಯ ಬಗ್ಗೆ ಪತ್ರಕರ್ತರು ನೀಡುವ ಮಾಹಿತಿಯನ್ನು ತಕ್ಷಣ ಗಮನಿಸುವಂತೆ ಪೊಲೀಸ್ ಮಹಾನಿರ್ದೇಶಕರಿಗೆ ನಿತೀಶ್ ಕುಮಾರ್ ಸೂಚಿಸಿದರು. ನಿತೀಶ್ ಕುಮಾರ್ ವರ್ತನೆ ಬಗ್ಗೆ ಪ್ರತಿಕ್ರಿಯಿಸಿರುವ ವಿಪಕ್ಷ ಮುಖಂಡ ತೇಜಸ್ವಿ ಯಾದವ್ ‘ನಿತೀಶ್ ಕುಮಾರ್ ಕ್ರಿಮಿನಲ್‌ಗಳೆದುರು ಶರಣಾಗಿದ್ದಾರೆ. ಅಪರಾಧ ನಡೆಯದಂತೆ ಯಾರೊಬ್ಬರೂ ತಡೆಯಲಾಗದು ಎಂದು ಹೇಳಿದ್ದಾರೆ. ಕ್ರಿಮಿನಲ್‌ಗಳ ಬಗ್ಗೆ ಮಾಹಿತಿಯಿದ್ದರೆ ಹಂಚಿಕೊಳ್ಳಿ ಎಂದು ಪತ್ರಕರ್ತರನ್ನೇ ಕೇಳಿದ್ದಾರೆ. ಮುಖ್ಯಮಂತ್ರಿಗಳು ಪತ್ರಕರ್ತರ ನಿಷ್ಟೆಯ ಬಗ್ಗೆ ಪ್ರಶ್ನೆಯೆತ್ತಿರುವುದು ಬಿಹಾರದ ಜನತೆಗೆ ಕೆಟ್ಟ ಸುದ್ದಿಯಾಗಿದೆ’ ಎಂದು ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News