ರಾಮಮಂದಿರಕ್ಕೆ 5 ಲಕ್ಷ ರೂ. ದೇಣಿಗೆ ನೀಡಿದ ರಾಷ್ಟ್ರಪತಿ

Update: 2021-01-15 16:33 GMT

ಹೊಸದಿಲ್ಲಿ, ಜ.15: ರಾಷ್ಟ್ರಪತಿ ರಾಮನಾಥ ಕೋವಿಂದ್ ಶುಕ್ರವಾರ 5 ಲಕ್ಷ  ರೂ.ಗಳನ್ನು ದೇಣಿಗೆ ನೀಡುವ ಮೂಲಕ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.

ದೇಶದಾದ್ಯಂತ ನಡೆಯುವ ದೇಣಿಗೆ ಸಂಗ್ರಹ ಅಭಿಯಾನ ಫೆಬ್ರವರಿ 27ರವರೆಗೆ ಮುಂದುವರಿಯಲಿದೆ. ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಸಹಾಧ್ಯಕ್ಷ ಗೋವಿಂದ್ ದೇವ್ ಗಿರೀಜಿ ಮಹಾರಾಜ್ ಶುಕ್ರವಾರ ರಾಷ್ಟ್ರಪತಿಯನ್ನು ಭೇಟಿಯಾದರು. ವಿಶ್ವ ಹಿಂದು ಪರಿಷದ್ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್, ದೇವಳ ನಿರ್ಮಾಣ ಸಮಿತಿಯ ಅಧ್ಯಕ್ಷ ನೃಪೇಂದ್ರ ಶರ್ಮ, ಆರೆಸ್ಸೆಸ್ ಮುಖಂಡ ಕುಲ್‌ಭೂಷಣ್ ಅಹುಜಾ ಜತೆಗಿದ್ದರು. ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ 1 ಲಕ್ಷ ರೂ. ದೇಣಿಗೆ ನೀಡಿದ್ದಾರೆ.

ಬಿಹಾರದ ಪಾಟ್ನದಲ್ಲಿ ದೇಣಿಗೆ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿದ ಬಿಜೆಪಿ ಮುಖಂಡ ಸುಶೀಲ್ ಕುಮಾರ್ ಮೋದಿ ‘ಮಂದಿರ ನಿರ್ಮಾಣಕ್ಕೆ ಅಗತ್ಯವಿರುವ ಹಣವನ್ನು ಜನರ ಸಹಕಾರದಿಂದ ಸಂಗ್ರಹಿಸುವ ವಿಶ್ವಾಸವಿದೆ’ ಎಂದರು. ಇತರ ಧರ್ಮೀಯರೂ ದೇಣಿಗೆ ನೀಡಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಯಾಕಾಗಬಾರದು. ಆದರೆ ಇಲ್ಲಿರುವ ವಿಷಯವೆಂದರೆ, ಮಸೀದಿ ನಿರ್ಮಾಣದ ಕಾರ್ಯದಲ್ಲಿ ಮುಸ್ಲಿಮರು ಮುಂಚೂಣಿಯಲ್ಲಿರುತ್ತಾರೆ. ಅದೇ ರೀತಿ ಮಂದಿರ ನಿರ್ಮಾಣದಲ್ಲಿ ಹಿಂದುಗಳಿರುತ್ತಾರೆ. ಇತರ ಧರ್ಮೀಯರ ಸಹಕಾರವನ್ನೂ ಖಂಡಿತ ಪಡೆಯುತ್ತೇವೆ ಎಂದರು.

ಸರಕಾರದ ಹಣವನ್ನು ಅಥವಾ ಸಂಸ್ಥೆಗಳ ದೇಣಿಗೆ, ವಿದೇಶದಿಂದ ದೇಣಿಗೆ ಸಂಗ್ರಹಿಸದಿರಲು ನಿರ್ಧರಿಸಲಾಗಿದೆ. 10 ರೂ, 100 ರೂ. ಮತ್ತು 1000 ರೂ. ಮೊತ್ತದ ಕೂಪನ್ ಮುದ್ರಿಸಲಾಗಿದ್ದು ದೇಶದಾದ್ಯಂತ ಹಿಂದುಗಳ ಮನೆಯಿಂದ ದೇಣಿಗೆ ಸಂಗ್ರಹಿಸಲಾಗುತ್ತದೆ ಎಂದವರು ಹೇಳಿದ್ದಾರೆ. ರಾಮಮಂದಿರ ನಿಮಾರ್ಣ ಕಾರ್ಯಕ್ಕೆ 2020ರ ಆಗಸ್ಟ್‌ನಲ್ಲಿ ಪ್ರಧಾನಿ ಮೋದಿ ಶಿಲಾನ್ಯಾಸ ನೆರವೇರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News