ಲಸಿಕೆ ಬಂದರೂ ಮುಂಜಾಗೃತಾ ಕ್ರಮಗಳು ಮುಂದುವರಿಯಲಿ: ಕೋಟ ಶ್ರೀನಿವಾಸ ಪೂಜಾರಿ

Update: 2021-01-16 09:37 GMT

ಮಂಗಳೂರು, ಜ.16: ಕೋವಿಡ್-19 ನಿಯಂತ್ರಣಕ್ಕಾಗಿ ಲಸಿಕೆ ನೀಡುವ ಕಾರ್ಯಕ್ರಮ ಆರಂಭವಾಗಿದ್ದರೂ ಮಾಸ್ಕ್ ಧಾರಣೆ, ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಮುಂಜಾಗೃತಾ ಕ್ರಮಗಳನ್ನು ಅನುಸರಿಸಲು ಮರೆಯಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕಿವಿಮಾತು ಹೇಳಿದ್ದಾರೆ.

ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕಾ ನೀಡುವ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ನೂತನ ಸಚಿವ ಅಂಗಾರ ಅವರ ಜತೆಯಲ್ಲಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಕೊರೋನ ಸಂದರ್ಭ ಅವಿರತವಾಗಿ ಸೇವೆ ಸಲ್ಲಿಸಿದ ಕೋವಿಡ್ ಯೋಧರು‌ಗಳಿಗೆ ಅಭಿನಂದನೆ ಸಲ್ಲಿಸಿದ ಅವರು, ಜಿಲ್ಲೆಯ 73 ಆಸ್ಪತ್ರೆಗಳಲ್ಲಿ ಶೇ.87ರಷ್ಟು ಕೊರೋನ ರೋಗಿಗಳು ಆಯುಷ್ಮಾನ್ ಭಾರತ್ ಯೋಜನೆಯಡಿ ಚಿಕಿತ್ಸೆಯನ್ನು ಪಡೆದಿದ್ದಾರೆ ಎಂದರು.

ಸಚಿವ ಅಂಗಾರ ಮಾತನಾಡಿ, ಲಸಿಕೆ ಪಡೆಯುವ ಬಗ್ಗೆ ಯಾವುದೇ ರೀತಿಯ ಆತಂಕ ಬೇಡ. ಇದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮವಾಗದು. ಈ ಬಗ್ಗೆ ಅಪಪ್ರಚಾರ ನಡೆಸಬಾರದು ಎಂದರು.

ವೇದಿಕೆಯಲ್ಲಿ ಶಾಸಕರಾದ ವೇದವ್ಯಾಸ ಕಾಮತ್, ಡಾ.ಭರತ್ ಶೆಟ್ಟಿ, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಮೇಯರ್ ದಿವಾಕರ ಪಾಂಡೇಶ್ವರ, ಉಪ ಮೇಯರ್ ವೇದಾವತಿ, ಜಿಪಂ ಸ್ಥಾಯಿ ಸಮಿತಿಯ ಅಧ್ಯಕ್ಷೆ ಧನಲಕ್ಷ್ಮೀ, ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ, ಜಿಲ್ಲಾ ಆರೋಗ್ಯಾಧಿಕಾರಿ ರಾಮಚಂದ್ರ ಬಾಯರಿ, ಆರ್‌ಸಿಎಚ್ ಅಧಿಕಾರಿ ಡಾ.ರಾಜೇಶ್, ವೆನ್ಲಾಕ್ ಅಧೀಕ್ಷಕ ಡಾ.ಸದಾಶಿವ ಶ್ಯಾನುಬಾಗ್ ಮೊದಲಾದವರು ಉಪಸ್ಥಿತರಿದ್ದರು.

ವೆನ್ಲಾಕ್ ಆಸ್ಪತ್ರೆಯ ಮೆಡಿಸಿನ್ ವಿಭಾಗದ ಸಿಬ್ಬಂದಿ ರೋಬಿನ್ ಆ್ಯಂಟನಿ ಮೊಂತೆರೋ ಜಿಲ್ಲಾ ಮಟ್ಟದಲ್ಲಿ ಪ್ರಥಮ ಕೋವಿಡ್ ಲಸಿಕೆಯನ್ನು ಪಡೆದರು.

ದ.ಕ. ಜಿಲ್ಲೆಯ ಆರು ಕೇಂದ್ರಗಳಲ್ಲಿ ಇಂದು ತಲಾ 100 ಮಂದಿಗೆ ಲಸಿಕೆ ನೀಡಲಾಗುತ್ತಿದೆ. ದ.ಕ. ಜಿಲ್ಲೆಯಲ್ಲಿ ಪ್ರಥಮ ಹಂತದಲ್ಲಿ ಸರಕಾರದ 89 ಸಂಸ್ಥೆಗಳು ಹಾಗೂ ಖಾಸಗಿಯ 818 ಸಂಸ್ಥೆಗಳ ಒಟ್ಟು 5,2381 ಫಲಾನುಭವಿಗಳು ಲಸಿಕೆ ಪಡೆಯಲು ನೋಂದಾಯಿಸಿಕೊಂಡಿದ್ದಾರೆ. ದ.ಕ. ಜಿಲ್ಲೆಗೆ ಮೊದಲ ಹಂತದಲ್ಲಿ 24,500 ಲಸಿಕೆ ಪೂರೈಕೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News