ದೇವಸ್ಥಾನಗಳನ್ನೇ ಗುರಿಯಾಗಿಸಿ ಕಳವು : ಅಂತರ್‌ ಜಿಲ್ಲೆಯ ಆರು ಮಂದಿ ಆರೋಪಿಗಳು ಸೆರೆ

Update: 2021-01-16 12:16 GMT

ಮಂಗಳೂರು, ಜ.16: ರಾಜ್ಯದ ಹೆಸರಾಂತ ದೇವಸ್ಥಾನಗಳನ್ನೇ ಗುರಿಯಾಗಿಸಿಕೊಂಡು ಹೊಂಚು ಹಾಕಿ, ಪರ್ಸ್, ಬ್ಯಾಗ್ ಎಗರಿಸುತ್ತಿದ್ದ ತಂಡವೊಂದನ್ನು ಬಂಧಿಸುವಲ್ಲಿ ಬಜ್ಪೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಗದಗ ಬೆಟಗೇರಿಯ ಕುಷ್ಟಗಿಚಾಲ ನಿವಾಸಿ ಯಮುನವ್ವ ಮುತ್ತಪ್ಪ ಛಲವಾದಿ (55), ಗದಗ ಗಂಗರಪುರ ಪೇಟೆಯ ಪ್ರಕಾಶ ಚೆನ್ನಪ್ಪ ಹೊಳೆಯಮೆಣಸಿಗೆ (26), ಗದಗ ಸೆಟ್ಲಮೆಂಟ್ ಏರಿಯದ ನಿವಾಸಿಗಳಾದ ಶೋಭಾ ನಾಗರಾಜ ಮುಟ್ಟಗಾರ (40), ಕುಮಾರಮ್ಮ ಮಾರುತಿ ಮುಟ್ಟಗಾರ (45), ಶಾಂತಮ್ಮ ರಾಮಪ್ಪ ಮೆಟಗಾರ್ (55), ಹುಬ್ಬಳ್ಳಿಯ ಚಂದ್ರಶೇಖರ್ ಶಿವರೆಡ್ಡೆಪ್ಪ ಕರಮುಡಿ (49) ಬಂಧಿತ ಆರೋಪಿಗಳು.

ಪ್ರಕರಣ ವಿವರ: ಜ.12ರಂದು ಮಂಗಳೂರು ನಗರದ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಕುಟುಂಬ ಸಮೇತರಾಗಿ ತೆರಳಿದ್ದ ಯಶೋಧ ಗೌಡರ್ ಪೂಜೆ ಮಾಡಿ ಕಾಣಿಕೆ ಡಬ್ಬಿಯಲ್ಲಿ ಹಣ ಹಾಕಲು ಹೋಗುತ್ತಿದ್ದರು. ಇವರನ್ನು ಹಿಂಬಾಲಿಸಿದ್ದ ನಾಲ್ವರು ಮಹಿಳೆಯರು ಹಾಗೂ ಯುವಕನನ್ನೊಳಗೊಂಡ ತಂಡ ಅವರನ್ನು ಸುತ್ತುವರಿದಿದೆ.

ಆರೋಪಿಗಳ ಪೈಕಿ ಯುವಕನು ಯಶೋಧ ಹೆಗಲಿಗೆ ಹಾಕಿಕೊಂಡಿದ್ದ ಹ್ಯಾಂಡ್‌ಬ್ಯಾಗ್‌ನಿಂದ ಪರ್ಸನ್ನು ಒಮ್ಮೇಲೆ ಬಲವಂತವಾಗಿ ಎಳೆದು ಪರಾರಿಯಾಗಿದ್ದಾರೆ. ಕೂಡಲೇ ಸಂತ್ರಸ್ತೆಯು ಈ ವಿಚಾರವನ್ನು ತನ್ನ ಅಳಿಯ ಹಾಗೂ ಇತರರಿಗೆ ಮಾಹಿತಿ ನೀಡಿದ್ದಾರೆ. ಆಗ ಆರೋಪಿಗಳನ್ನು ಹಿಂಬಾಲಿಸಿದಾಗ ಕಾರಿನಲ್ಲಿ ಆರೋಪಿಗಳೂ ತಪ್ಪಿಸಿಕೊಂಡು ಹೋಗುತ್ತಿರುವುದು ಕಂಡುಬಂದಿದೆ.

ಆರೋಪಿಗಳು ಯಶೋಧ ಅವರ ಪರ್ಸ್‌ನಲ್ಲಿದ್ದ 4,000 ರೂ. ನಗದು ದರೋಡೆ ಮಾಡಿದ್ದರು ಎಂದು ದೂರಿನಲ್ಲಿ ವಿವರಿಸಲಾಗಿದೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಬಜ್ಪೆ ಪೊಲೀಸ್ ಪೊಲೀಸರು, ಆರೋಪಿಗಳ ಪತ್ತೆಗಾಗಿ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದರು. ಅದೇ ಕಾರಿನಲ್ಲಿ ಆರೋಪಿಗಳು ಪೊಳಲಿ ದೇವಸ್ಥಾನಕ್ಕೆ ತೆರಳುತ್ತಿರುವ ಖಚಿತ ಮಾಹಿತಿಯಂತೆ ಅಡ್ಡೂರ್ ಚೆಕ್‌ಪೋಸ್ಟ್ ಬಳಿ ರಸ್ತೆಗೆ ಅಡ್ಡಲಾಗಿ ಬ್ಯಾರಿಕೇಡ್ ಅಳವಡಿಸಿ ವಾಹನ ತಡೆದರು. ಸ್ವಲ್ಪ ಮುಂದೆ ಸಾಗಿದ ವಾಹನವು ರಸ್ತೆ ಬದಿ ನಿಂತುಕೊಂಡಿತು. ಪೊಲೀಸರು ವಾಹನದ ಬಳಿ ತೆರಳುತ್ತಿದ್ದಂತೆ ಚಾಲಕನ ಪಕ್ಕದಲ್ಲಿ ಕುಳಿತ ವ್ಯಕ್ತಿ ಪರಾರಿಯಾಗಲು ವಿಫಲ ಯತ್ನ ನಡೆಸಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವಾಹನದಲ್ಲಿದ್ದ ಎಲ್ಲ ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದರು. ಈ ವೇಳೆ ಆರೋಪಿಗಳು ಬೇರೆ ಬೇರೆಯಾಗಿ ಉತ್ತರ ನೀಡಿದ್ದಾರೆ. ಬಳಿಕ ಹೆಚ್ಚಿನ ವಿಚಾರಣೆ ನಡೆಸಿದಾಗ ಆರೋಪಿಗಳು ಹಳೇ ಗೋವಾದ ಶಾಂತದುರ್ಗಾ ದೇವಸ್ಥಾನ, ಮಂಗೇಶ ದೇವಸ್ಥಾನ, ಗೋಕರ್ಣ ಗಣಪತಿ ದೇವಸ್ಥಾನ, ಇಡಗುಂಜಿ ಗಣಪತಿ ದೇವಸ್ಥಾನ, ಕೊಲ್ಲೂರು ಮೂಕಾಂಬಿಕೆ ದೇವಸ್ಥಾನ, ಶೃಂಗೇರಿ ಶಾರದಾ ದೇವಸ್ಥಾನ ಮತ್ತು ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ, ಮುರುಡೇಶ್ವರ ದೇವಸ್ಥಾನ ಸೇರಿದಂತೆ ವಿವಿಧೆಡೆ ಆರೋಪಿಗಳ ತಂಡ ವಂಚಿಸುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ಆರೋಪಿಗಳಿಂದ 74 ಸಾವಿರ ರೂ. ಮೌಲ್ಯದ ಏಳು ಮೊಬೈಲ್‌ಗಳು, 21,540 ರೂ. ನಗದು, ಕೃತ್ಯಕ್ಕೆ ಬಳಸಿದ ತೂಫಾನ್ ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳಿಂದ ಸ್ವಾಧೀನಪಡಿಸಿಕೊಳ್ಳಲಾದ ವಸ್ತುಗಳ ಒಟ್ಟು ಮೌಲ್ಯ ಏಳು ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News