ಮಂಗಳೂರು : ಟೀಮ್ ಬಿ ಹ್ಯೂಮನ್, ಟ್ಯಾಲೆಂಟ್‌ನಿಂದ ವೀರ ಯೋಧ ಝುಬೈರ್ ನೇರೆಂಕಿಗೆ ಸನ್ಮಾನ

Update: 2021-01-16 16:51 GMT

ಮಂಗಳೂರು : ದೇಶದ ಗಡಿಯಲ್ಲಿ ಉಗ್ರಗಾಮಿಗಳು ನಡೆಸಿದ ದಾಳಿಯನ್ನು ಎದುರಿಸಿದ ಕಾರ್ಯಾಚರಣೆಯಲ್ಲಿ ಭಾಗವಹಿಸಿ ಇಬ್ಬರು ಉಗ್ರಗಾಮಿಗಳನ್ನು ಕೊಂದ ವೀರಯೋಧ ಝುಬೈರ್ ನೇರೆಂಕಿ ಅವರನ್ನು ಟೀಮ್ ಬಿ ಹ್ಯೂಮನ್  ಹಾಗೂ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‌ನಿಂದ ನಗರದ ಕಂಕನಾಡಿಯ ವಿಶ್ವಾಸ್ ಕ್ರೌನ್‌ನ ಟ್ಯಾಲೆಂಟ್ ಸಭಾಂಗಣದಲ್ಲಿ ಶನಿವಾರ ಸಂಜೆ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ವೀರಯೋಧ ಝುಬೈರ್ ನೇರೆಂಕಿ ಮಾತನಾಡಿ, 2018ರ ಫೆಬ್ರವರಿಯ ಘಟನೆ ತುಂಬಾ ಮಹತ್ವದ್ದು. ಒಂದೂವರೆ ದಿನ ಪೂರ್ತಿ‌ ಕಾರ್ಯಾಚರಣೆ ನಡೆಸಿದ್ದೆವು. ವೈರಿಗಳನ್ನು ನಾಶಪಡಿಸುವಲ್ಲಿ ಯಶಸ್ವಿಯಾದೆವು ಎಂದರು.

ಯುವಕರು ಪಬ್‌ಜಿ ಆಡುವುದು, ಗಾಂಜಾ ಡ್ರಗ್ಸ್‌ನ್ನು ಹಿಂಬಾಲಿಸುವ ಬದಲು ಮಹಾತ್ಮರನ್ನು, ಸಾಧಕರ ತತ್ವಗಳನ್ನು ಅನುಸರಿಸಿದರೆ ದೇಶಕ್ಕೆ ಕೊಡುಗೆ‌ ನೀಡಬಹುದಾಗಿದೆ. ಆಯಾ ಪ್ರದೇಶದಲ್ಲಿ ದೇಶಭಕ್ತಿ ಹೆಚ್ಚಿಸುವ ಹಾಗೂ ಸೌಹಾರ್ದ ಕಾರ್ಯಕ್ರಮ‌ ಆಯೋಜಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್, ಸೈನಿಕರಿಗೆ ಹಬ್ಬಗಳಿಲ್ಲ.‌ ಎಲ್ಲರಂತೆ ಕುಟುಂಬದೊಂದಿಗೆ ಕುಳಿತು ಊಟ ಮಾಡಲು ಆಗಲ್ಲ. ಜೀವವನ್ನು ಪಣಕ್ಕಿಟ್ಟು ಗಡಿ ಕಾಯುವುದು ಸವಾಲಿನ ಕೆಲಸವಾಗಿದೆ. ವೀರಯೋಧ ಝುಬೈರ್ ನೇರೆಂಕಿ ಕಾರ್ಯ ಶ್ಲಾಘನೀಯ. ರಾಜ್ಯದ ಎಲ್ಲರಿಗೂ ಝುಬೈರ್ ಮಾದರಿಯಾಗಿದ್ದಾರೆ ಎಂದರು.

ಶಾಸಕ ಯು.ಟಿ. ಖಾದರ್ ಮಾತನಾಡಿ, ದೇಶಕ್ಕಾಗಿ ಸೇವೆ ಸಲ್ಲಿಸಲು ಧೈರ್ಯ ಇರಬೇಕು.‌ ಅದು ಎಲ್ಲರಲ್ಲೂ ಇರುತ್ತದೆ.‌ ಇದಕ್ಕೆ ದೃಢ‌ ಮನಸು ಇರಬೇಕು. ಝುಬೈರ್ ಅವರ ಸೇವೆಯನ್ನು ಇಡೀ ರಾಜ್ಯವೇ ಶ್ಲಾಘಿಸಲಿದೆ. ಎಲ್ಲ ಯುವಕರಿಗೆ ಝುಬೈರ್ ಆದರ್ಶರಾಗಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಎಕ್ಸ್‌ಪರ್ಟೈಝ್‌ ಕಾಂಟ್ರಾಕ್ಟಿಂಗ್‌ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಶೇಕ್ ಕರ್ನಿರೆ, ವೈಟ್ ಸ್ಟೋನ್ ಕೆಎಸ್‌ಎ ವ್ಯವಸ್ಥಾಪಕ ನಿರ್ದೇಶಕ ಶರೀಫ್ ಬೋಳಾರ್, ಡೀಲ್ಸ್ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ಕೆ.ಅಹ್ಮದ್ ಬಾವ ಮತ್ತಿತರರು ಭಾಗವಹಿಸಿದ್ದರು.

ಟೀಮ್ ಬಿ ಹ್ಯೂಮನ್‌ನ ಅಧ್ಯಕ್ಷ ಆಸಿಫ್ ಡೀಲ್ಸ್ ಪ್ತಾಸ್ತಾವಿಕವಾಗಿ ಮಾತನಾಡಿದರು.

ಸಮಾರಂಭದಲ್ಲಿ  ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‌ನ ಅಧ್ಯಕ್ಷ ರಿಯಾಝ್ ಕಣ್ಣೂರು, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ಕಣ್ಣೂರು ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಲಾಂ‌ ಉಸ್ತಾದ್ ಕಿರಾಅತ್ ಪಠಿಸಿದರು. ಟೀಮ್ ಬಿ ಹ್ಯೂಮನ್‌ನ ಅಧ್ಯಕ್ಷ ಆಸಿಫ್ ಡೀಲ್ಸ್ ಸ್ವಾಗತಿಸಿದರು. ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News