×
Ad

ಲಡಾಕ್‌ನಲ್ಲಿ ಸೇನೆಯ ವರ್ಚಸ್ವೀ ಪ್ರದರ್ಶನದಿಂದ ನೈತಿಕ ಬಲ ವೃದ್ಧಿ: ರಾಜನಾಥ್ ಸಿಂಗ್

Update: 2021-01-16 23:27 IST

ಲಕ್ನೊ, ಜ.16: ಲಡಾಕ್ ಗಡಿಭಾಗದಲ್ಲಿ ಚೀನಾದೊಂದಿಗೆ ದೀರ್ಘಾವಧಿಯ ಬಿಕ್ಕಟ್ಟಿನ ಸಂದರ್ಭ ಭಾರತದ ಸೇನೆಯ ವರ್ಚಸ್ವೀ ಕಾರ್ಯನಿರ್ವಹಣೆ ಹಾಗೂ ಪ್ರದರ್ಶನ ದೇಶದ ನೈತಿಕ ಬಲ ಹೆಚ್ಚಿಸಿದ್ದು ದೇಶದ ಜನರು ತಲೆಎತ್ತಿ ತಿರುಗಲು ಅನುವು ಮಾಡಿಕೊಟ್ಟಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಲಕ್ನೊದಲ್ಲಿ ನಿರ್ಮಾಣಗೊಳ್ಳಲಿರುವ ನೂತನ ಕಮಾಂಡ್ ಆಸ್ಪತ್ರೆಯ ಭೂಮಿಪೂಜೆ ಹಾಗೂ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

   ನಾವು ಯುದ್ಧವನ್ನು ಬಯಸುತ್ತಿಲ್ಲ ಹಾಗೂ ಪ್ರತಿಯೊಬ್ಬರ ಭದ್ರತೆಯನ್ನು ಖಾತರಿಪಡಿಸಲು ಬಯಸುತ್ತೇವೆ. ಆದರೆ ಯಾವುದಾದರೂ ಸೂಪರ್‌ಶಕ್ತಿ ನಮ್ಮ ಆತ್ಮಾಭಿಮಾನಕ್ಕೆ ಧಕ್ಕೆ ತರಲು ಪ್ರಯತ್ನಿಸಿದರೆ ಆಗ ಅಂತವರಿಗೆ ಸೂಕ್ತ ಪ್ರತ್ಯುತ್ತರ ನೀಡಲು ನಮ್ಮ ಯೋಧರು ಶಕ್ತರಾಗಿದ್ದಾರೆ ಎಂದು ರಾಜನಾಥ್ ಸಿಂಗ್ ಹೇಳಿದರು.

  ಈ ಮಧ್ಯೆ, ಶುಕ್ರವಾರ ಉನ್ನತ ಮಿಲಿಟರಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ರಾಜನಾಥ್ ಸಿಂಗ್, ಪೂರ್ವ ಲಡಾಕ್‌ನ ವಾಸ್ತವಿಕ ನಿಯಂತ್ರಣ ರೇಖೆಯುದ್ದಕ್ಕೂ ಉದ್ವಿಗ್ನ ಪರಿಸ್ಥಿತಿ ಶಮನಗೊಳಿಸಲು ಭಾರತ-ಚೀನಾ ನಡುವೆ ಕೈಗೊಳ್ಳಲಾದ ಒಪ್ಪಂದದ ಬಗ್ಗೆ ಚರ್ಚಿಸಿದರು ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News