ಜೋ ಬೈಡನ್ ಆಡಳಿತದಲ್ಲಿ ಪ್ರಮುಖ ಹುದ್ದೆಗಳಿಗೆ ಭಾರತೀಯ ಮೂಲದ 20 ಮಂದಿ

Update: 2021-01-17 06:13 GMT

ವಾಷಿಂಗ್ಟನ್ : ಅಮೆರಿಕದ ಅಧ್ಯಕ್ಷರಾಗಿ ಜೋ ಬೈಡನ್ ಅಧಿಕಾರ ಸ್ವೀಕರಿಸಲು ಕ್ಷಣಗಣನೆ ಆರಂಭವಾಗಿದ್ದು, ಬೈಡನ್ ಆಡಳಿತದ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಲು ನಿಯುಕ್ತರಾದವರಲ್ಲಿ ಕನಿಷ್ಠ 20 ಮಂದಿ ಭಾರತೀಯ ಮೂಲದ ಅಮೆರಿಕನ್ನರು ಸೇರಿದ್ದಾರೆ. ಈ ಪೈಕಿ 13 ಮಂದಿ ಮಹಿಳೆಯರು.

ಅಮೆರಿಕದ ಜನಸಂಖ್ಯೆಯಲ್ಲಿ ಶೇಕಡ 1ರಷ್ಟಿರುವ ಭಾರತೀಯ ಮೂಲದವರು ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಆಯ್ಕೆಯಾಗಿರುವುದು ಇದೇ ಮೊದಲು. ಇವರಲ್ಲಿ 17 ಮಂದಿ ಪ್ರಭಾವಿ ಶ್ವೇತಭವನ ಸಂಕೀರ್ಣದಲ್ಲೇ ಕಾರ್ಯನಿರ್ವಹಿಸಲು ಆಯ್ಕೆಯಾಗಿರುವುದು ಗಮನಾರ್ಹ.

ಬೈಡನ್ ಈ ತಿಂಗಳ 20ರಂದು ಅಮೆರಿಕದ 46ನೇ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದು, ಭಾರತೀಯ ಮೂಲದ ಕಮಲಾ ಹ್ಯಾರೀಸ್ (56) ಇದೇ ಮೊದಲ ಬಾರಿಗೆ ದೇಶದ ಉಪಾಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಬೈಡನ್ ಆಡಳಿತದ ಹಲವು ಹುದ್ದೆಗಳಿಗೆ ಇನ್ನೂ ನೇಮಕವಾಗಬೇಕಿದ್ದು, ಈಗಾಗಲೇ 20ಕ್ಕೂ ಹೆಚ್ಚು ಮಂದಿ ಭಾರತೀಯ ಮೂಲದವರು ನಿಯುಕ್ತರಾಗಿದ್ದಾರೆ.

ನೀರಾ ಟಂಡನ್ ಶ್ವೇತಭವನ ಕಚೇರಿಯ ಆಡಳಿತ ಮತ್ತು ಬಜೆಟ್ ವಿಭಾಗದ ನಿರ್ದೇಶಕರಾಗಿದ್ದರೆ, ಡಾ. ವಿವೇಕ್ ‌ಮೂರ್ತಿಯವರು ಅಮೆರಿಕದ ಸರ್ಜನ್ ಜನರಲ್ ಆಗಿ ಕಾರ್ಯ ನಿರ್ವಹಿಸುವರು. ವಿನಿತಾ ಗುಪ್ತಾ ನ್ಯಾಯಾಂಗ ಇಲಾಖೆಗೆ (ಸಹ ಅಟಾರ್ನಿ ಜನರಲ್), ಊರ್ಜಾ ಝೆಯಾ ಅವರು ನಾಗರಿಕ ಭದ್ರತೆ, ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕುಗಳ ವಿಭಾಗದ ಅಧೀನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.

ಭಾರತೀಯ ಮೂಲದವರು ಸಾರ್ವಜನಿಕ ಸೇವೆಯಲ್ಲಿ ತೋರಿಸಿದ ಬದ್ಧತೆಯನ್ನು ಗುರುತಿಸಿ ದೊಡ್ಡ ಪ್ರಮಾಣದಲ್ಲಿ ಅವರನ್ನು ಬೈಡನ್ ಆಡಳಿತ ಯಂತ್ರಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಇಂಡಿಯಾ ಸ್ಪೋರಾ ಸಂಸ್ಥಾಪಕ ಎಂ.ಆರ್.ರಂಗಸ್ವಾಮಿ ಹೇಳಿದ್ದಾರೆ.

ಭವಿಷ್ಯದ ಪ್ರಥಮ ಮಹಿಳೆ ಡಾ. ಜಿಲ್ ಬೈಡನ್ ಅವರ ಯೋಜನಾ ನಿರ್ದೇಶಕಿಯಾಗಿ ಮಾಲಾ ಅಡಿಗ, ಜಿಲ್ ಅವರ ಕಚೇರಿಯ ಡಿಜಿಟಲ್ ನಿರ್ದೇಶಕರಾಗಿ ಗರೀಮಾ ವರ್ಮಾ ಮತ್ತು ಉಪ ಪತ್ರಿಕಾ ಕಾರ್ಯದರ್ಶಿಯಾಗಿ ಸಬ್ರಿನಾ ಸಿಂಗ್ ನೇಮಕಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News