ಔರಂಗಾಬಾದ್ ನಗರದ ಮರುನಾಮಕರಣ ವಿಚಾರ: ಶಿವಸೇನೆ, ಕಾಂಗ್ರೆಸ್ ಮಾತಿನ ಸಮರ

Update: 2021-01-17 16:53 GMT

ಮುಂಬೈ: ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ(ಎಂವಿಎ)ಸರಕಾರದಲ್ಲಿ ಮಿತ್ರಪಕ್ಷಗಳಾಗಿರುವ ಶಿವಸೇನೆ ಹಾಗೂ ಕಾಂಗ್ರೆಸ್ ಔರಂಗಾಬಾದ್ ನಗರದ ಹೆಸರು ಮರುನಾಮಕರಣ ವಿಚಾರಕ್ಕೆ ಸಂಬಂಧಿಸಿ ಪರಸ್ಪರ ಮಾತಿನ ಸಮರ ನಡೆಸಿವೆ.

ಕಾಂಗ್ರೆಸ್ ನಂತಹ ಜಾತ್ಯತೀತ ಪಕ್ಷಗಳು ಔರಂಗಾಬಾದ್ ನಗರವನ್ನು ಸಂಭಾಜಿ ನಗರವನ್ನಾಗಿ ಮರುನಾಮಕರಣ ಮಾಡಬಾರದು ಎಂದು ಅಭಿಪ್ರಾಯಿಸಿವೆ.  ಔರಂಗಾಬಾದ್ ನಗರವನ್ನು ಮರು ನಾಮಕರಣ ಮಾಡಿದರೆ ಮುಸ್ಲಿಮರಿಗೆ ಬೇಸರವಾಗುತ್ತದೆ ಎಂದು ಇಂತಹ ಪಕ್ಷಗಳು ಭಾವಿಸಿವೆ. ಇದು  ಆ ಪಕ್ಷಗಳ ಮತ ಬ್ಯಾಂಕಿಗೆ ಪರಿಣಾಮಬೀರುತ್ತದೆ. ಇದು ಅವರ ಜಾತ್ಯತೀತ ಘನತೆಯ ಬಗ್ಗೆ ಪ್ರಶ್ನೆ ಎತ್ತುವಂತೆ ಮಾಡಿದೆ. ಔರಂಗಾಜೇಬ್ ಜಾತ್ಯತೀತನಾಗಿರಲಿಲ್ಲ. ಆತನೊಬ್ಬ ಕ್ರೂರ ಆಡಳಿತಗಾರನಾಗಿದ್ದ. ಮತಾಂಧನಾಗಿದ್ದ. ಇತರ ಧರ್ಮಗಳನ್ನು ದ್ವೇಷಿಸುತ್ತಿದ್ದ ಎಂದು ಶಿವಸೇನೆಯ ಮುಖವಾಣಿ ಸಾಮ್ನಾದ ಸಾಪ್ತಾಹಿಕ ಕಾಲಂನಲ್ಲಿ ಪಕ್ಷದ ಸಂಸದ ರಾವತ್ ಬರೆದಿದ್ದರು.

ಇದಕ್ಕೆ ಎದಿರೇಟು ನೀಡಿರುವ ಕಾಂಗ್ರೆಸ್, "ಶಿವಸೇನೆ ಹಾಗೂ ಪ್ರತಿಪಕ್ಷ ಬಿಜೆಪಿ ಮರು ನಾಮಕರಣ ವಿಷಯದಲ್ಲಿ ರಾಜಕೀಯ ಮಾಡುತ್ತಿವೆ. ಕಳೆದ 5 ವರ್ಷಗಳ ಕಾಲ ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿದ್ದಾಗ ಈ ವಿಷಯವನ್ನು ಏಕೆ ಚರ್ಚಿಸಲಿಲ್ಲ'' ಎಂದು ಕೇಳಿದೆ.

ಹೆಸರು ಬದಲಾಯಿಸುವ ವಿಚಾರದಲ್ಲಿ ಭಿನ್ನಾಭಿಪ್ರಾಯವಿದ್ದರೂ ರಾಜ್ಯದಲ್ಲಿ ಶಿವಸೇನೆ, ಎನ್ ಸಿಪಿ ಹಾಗೂ ಕಾಂಗ್ರೆಸ್ ಮೈತ್ರಿಕೂಟ ಸರಕಾರ ಸ್ಥಿರವಾಗಿದೆ ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಬಾಲಾ ಸಾಹೇಬ್ ಥೋರಟ್ ಸಮರ್ಥಿಸಿಕೊಂಡರು.

"ಸ್ಥಳೀಯ ಜನರ ದಾರಿ ತಪ್ಪಿಸಲು ಮರು ನಾಮಕರಣದ ವಿಚಾರ ಎತ್ತಲಾಗುತ್ತಿದೆ. ರಾಜ್ಯದಲ್ಲಿ ನಮ್ಮ ಮಿತ್ರಪಕ್ಷವಾಗಿರುವ ಶಿವಸೇನೆ ತನ್ನ ಮತಗಳ ಬಗ್ಗೆ ಚಿಂತಿತವಾಗಿದೆ. ಹೀಗಾಗಿ ಅದು ನಾಮಕರಣ ಎಂಬ ಪಂದ್ಯಕ್ಕೆ ಚಾಲನೆ ನೀಡಿದೆ'' ಎಂದು ಥೋರಟ್ ಹೇಳಿದ್ದಾರೆ.

ಹಿಂದಿನ ಸರಕಾರದಲ್ಲಿ ಶಿವಸೇನೆ ಹಾಗೂ ಬಿಜೆಪಿ ಪಕ್ಷಗಳು ಔರಂಗಾಬಾದ್ ನಗರವನ್ನು ಸಂಭಾಜಿ ನಗರ ಎಂದು ಮರು ನಾಮಕರಣ ಮಾಡಲು ಬಯಸಿದ್ದವು. ಸಂಭಾಜಿ ಮಹಾರಾಜ್, ಛತ್ರಪತಿ ಶಿವಾಜಿ ಮಹಾರಾಜರ ಪುತ್ರನಾಗಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News