ನೀತಿ ಆಯೋಗದಲ್ಲಿ ಚರ್ಚೆಯಾಗದೆ ಕೃಷಿ ಸುಗ್ರೀವಾಜ್ಞೆ: ಆರ್‌ಟಿಐ ಉತ್ತರದಲ್ಲಿ ಬಹಿರಂಗ

Update: 2021-01-17 15:21 GMT

ಹೊಸದಿಲ್ಲಿ,ಜ.17: ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ತರಲು ಅವಕಾಶ ಕಲ್ಪಿಸಿದ್ದ ಕೃಷಿ ಸುಗ್ರೀವಾಜ್ಞೆಗಳನ್ನು ನೀತಿ ಆಯೋಗದ ಆಡಳಿತ ಮಂಡಳಿಯಲ್ಲಿ ಮುಖ್ಯಮಂತ್ರಿಗಳ ಉನ್ನತಾಧಿಕಾರ ಸಮಿತಿಯ ವರದಿಯ ಚರ್ಚೆಯೇ ಆಗದೇ 2020,ಜೂನ್‌ನಲ್ಲಿ ಘೋಷಿಸಲಾಗಿತ್ತು ಮತ್ತು ಸಂಸತ್ತಿನಲ್ಲಿ ಮಂಡಿಸಲಾಗಿತ್ತು ಎನ್ನುವುದನ್ನು ಆಯೋಗವು ಆರ್‌ಟಿಐ ಕಾರ್ಯಕರ್ತೆ ಅಂಜಲಿ ಭಾರದ್ವಾಜ್ ಅವರ ಆರ್‌ಟಿಐ ಅರ್ಜಿಗೆ ನೀಡಿರುವ ಉತ್ತರವು ಬಹಿರಂಗಗೊಳಿಸಿದೆ.

 ಇದು ಕೃಷಿ ಕಾಯ್ದೆಗಳನ್ನು ಜಾರಿಗೊಳಿಸುವ ಮೂಲಕ ಸಮಗ್ರ ಚರ್ಚೆಗಳನ್ನು ನಡೆಸಲಾಗಿತ್ತು ಎಂಬ ಸರಕಾರದ ಹೇಳಿಕೆಗೆ ವ್ಯತಿರಿಕ್ತವಾಗಿದೆ.

ಪ್ರಧಾನ ಮಂತ್ರಿಗಳು ನೇಮಿಸಿದ್ದ ಸಮಿತಿಯು ಅಗತ್ಯ ಸಾಮಗ್ರಿಗಳ ಕಾಯ್ದೆ ಮತ್ತು ಇತರ ಕೃಷಿ ಸುಧಾರಣೆಗಳ ತಿದ್ದುಪಡಿಗೆ ಶಿಫಾರಸು ಮಾಡಿತ್ತು ಎಂದು ಹೇಳಲಾಗಿತ್ತು. ಆದರೆ ಸಮಿತಿಯ ವರದಿಯ ಪ್ರತಿಯನ್ನು ನೀಡಲು ನಿರಾಕರಿಸಿರುವ ನೀತಿ ಆಯೋಗವು,ಅದನ್ನು ಇನ್ನೂ ಆಡಳಿತ ಮಂಡಳಿಯಲ್ಲಿ ಚರ್ಚೆಗೆ ಇರಿಸಲಾಗಿಲ್ಲ ಎಂದು ತಿಳಿಸಿದೆ.

ಕೃಷಿ ಮಸೂದೆಗಳನ್ನು ಜಾರಿಗೊಳಿಸುವ ಮುನ್ನ ತಾನು ಸಮಾಲೋಚನೆಗಳನ್ನು ನಡೆಸಿದ್ದೆ ಎಂದು ಸರಕಾರವು ವಾದಿಸುತ್ತಿರುವ ಸಂದರ್ಭದಲ್ಲಿಯೇ ಈ ಆರ್‌ಟಿಐ ಉತ್ತರವು ಹೊರಬಿದ್ದಿದೆ. ಕಳೆದ ವರ್ಷದ ಸೆ.14ರಂದು ಲೋಕಸಭೆಯಲ್ಲಿ ಮಸೂದೆ ಮಂಡನೆ ಸಂದರ್ಭದಲ್ಲಿ ಸಹಾಯಕ ಕೃಷಿ ಸಚಿವ ರಾವ್ ಸಾಹೇಬ ದಾನ್ವೆ ಅವರು,ಸುಗ್ರೀವಾಜ್ಞೆಗಳನ್ನು ತರುವ ಮೊದಲು ಮುಖ್ಯಮಂತ್ರಿಗಳ ಸಮಿತಿಯನ್ನು ರಚಿಸಲಾಗಿತ್ತು ಮತ್ತು ಎಲ್ಲ ಅಂಶಗಳನ್ನು ಚರ್ಚಿಸಿರುವ ಸಮಿತಿಯು ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಬೇಕು ಎಂದು ನಿರ್ಧರಿಸಿದೆ ಎಂದು ತಿಳಿಸಿದ್ದರು. ಆದರೆ ಸಮಿತಿಯ ಸದಸ್ಯರಾದ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ಇಂತಹ ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ ಎಂದು ಹೇಳಿದ್ದರು.

2019,ಜು.1 ರಂದು ನಡೆದಿದ್ದ ನೀತಿ ಆಯೋಗದ ಆಡಳಿತ ಮಂಡಳಿಯ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ‘ಭಾರತೀಯ ಕೃಷಿ ಕ್ಷೇತ್ರದಲ್ಲಿ ಪರಿವರ್ತನೆ ’ಗಾಗಿ ಆಗಿನ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಅಧ್ಯಕ್ಷತೆಯ ಸಮಿತಿಯನ್ನು ರಚಿಸಿದ್ದು,ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್, ಪಂಜಾಬ್, ಒಡಿಶಾ, ಉತ್ತರ ಪ್ರದೇಶ, ಮಧ್ಯಪ್ರದೇಶ,ಹರ್ಯಾಣ,ಅರುಣಾಚಲ ಪ್ರದೇಶ ಮತ್ತು ಗುಜರಾತ್ ಮುಖ್ಯಮಂತ್ರಿಗಳು ಸಮಿತಿಯ ಸದಸ್ಯರಾಗಿದ್ದರು.

ಸಮಿತಿಯ ವರದಿಯ ಪ್ರತಿ,ಅದು ನಡೆಸಿದ್ದ ಸಭೆಗಳ ವಿವರಗಳು ಮತ್ತು ಸಭೆಗಳಲ್ಲಿ ಭಾಗವಹಿಸಿದ್ದವರ ಪಟ್ಟಿಯನ್ನು ನೀಡುವಂತೆ ಭಾರದ್ವಾಜ್ ನೀತಿ ಆಯೋಗಕ್ಕೆ ಸಲ್ಲಿಸಿದ್ದ ಅರ್ಜಿಯಲ್ಲಿ ಕೋರಿದ್ದರು.

ವರದಿಯ ಪ್ರತಿಯನ್ನು ನೀಡಲು ನಿರಾಕರಿಸಿರುವ ನೀತಿ ಆಯೋಗವು,ಮೊದಲು ವರದಿಯನ್ನು ಆರನೇ ಆಡಳಿತ ಮಂಡಳಿ ಸಭೆಯಲ್ಲಿ (ಅದು ನಡೆದಾಗ) ಮಂಡಿಸಲಾಗುವುದು. ಹೀಗಾಗಿ ಈ ಹಂತದಲ್ಲಿ ವರದಿಯನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದು ಆರ್‌ಟಿಐ ಉತ್ತರದಲ್ಲಿ ತಿಳಿಸಿದೆ.

ಮುಖ್ಯಮಂತ್ರಿಗಳ ಉನ್ನತಾಧಿಕಾರ ಸಮಿತಿಯ ವರದಿಯನ್ನು ನೀತಿ ಆಯೋಗದ ಆಡಳಿತ ಮಂಡಳಿಯ ಸಭೆಯಲ್ಲಿ ಚರ್ಚಿಸದೇ ಮತ್ತು ಅದನ್ನು ಸಾರ್ವಜನಿಕವಾಗಿ ಲಭ್ಯವಾಗಿಸದೇ ಕೃಷಿ ಸುಗ್ರೀವಾಜ್ಞೆಗಳನ್ನು ಹೊರಡಿಸಲಾಗಿತ್ತು ಮತ್ತು ಸಂಸತ್ತಿನಲ್ಲಿ ಮಂಡಿಸಲಾಗಿತ್ತು ಎನ್ನುವುದನ್ನು ಆರ್‌ಟಿಐ ಉತ್ತರವು ಸ್ಪಷ್ಟಪಡಿಸಿದೆ ಎಂದು ಭಾರದ್ವಾಜ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News