ಅರ್ನಬ್ ಗೋಸ್ವಾಮಿ ವಾಟ್ಸ್‌ಆ್ಯಪ್ ಚಾಟ್ ಸೋರಿಕೆ:ತನಿಖೆಗೆ ಕಾಂಗ್ರೆಸ್ ಆಗ್ರಹ

Update: 2021-01-17 17:21 GMT

ಹೊಸದಿಲ್ಲಿ,ಜ.17: ಬಾಲಾಕೋಟ್ ವಾಯುದಾಳಿಯ ಬಗ್ಗೆ ರಿಪಬ್ಲಿಕ್ ಟಿವಿಯ ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿಯವರಿಗೆ ಮೊದಲೇ ತಿಳಿದಿತ್ತು ಎನ್ನುವುದನ್ನು ಸೂಚಿಸುವ ಅವರ ಮತ್ತು ಬ್ರಾಡ್‌ಕಾಸ್ಟ್ ಆಡಿಯನ್ಸ್ ರೀಸರ್ಚ್ ಕೌನ್ಸಿಲ್‌ನ ಮಾಜಿ ಸಿಇಒ ಪಾರ್ಥೊ ದಾಸಗುಪ್ತಾ ನಡುವಿನ ವಾಟ್ಸ್‌ಆ್ಯಪ್ ಚಾಟ್‌ಗಳು ಸೋರಿಕೆಯಾಗಿರುವುದು ರಾಷ್ಟ್ರೀಯ ಭದ್ರತೆಯ ಕುರಿತು ಗಂಭೀರ ಪ್ರಶ್ನೆಗಳನ್ನೆತ್ತಿದೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ ಅವರು ರವಿವಾರ ಇಲ್ಲಿ ಹೇಳಿದರು. ತನ್ಮಧ್ಯೆ ಈ ವಾಟ್ಸ್‌ಆ್ಯಪ್ ಚಾಟ್‌ಗಳ ಕುರಿತು ತನಿಖೆಯನ್ನು ನಡೆಸುವಂತೆ ಪಕ್ಷದಲ್ಲಿನ ಅವರ ಸಹೋದ್ಯೋಗಿಗಳು ಆಗ್ರಹಿಸಿದ್ದಾರೆ.

ಟಿಆರ್‌ಪಿ ಹಗರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಮುಂಬೈ ಪೊಲೀಸರು ಗೋಸ್ವಾಮಿ ಮತ್ತು ದಾಸಗುಪ್ತಾ ನಡುವಿನ ವಾಟ್ಸ್‌ಆ್ಯಪ್ ಸಂಭಾಷಣೆಗಳನ್ನು ಉಲ್ಲೇಖಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುರ್ಜೆವಾಲಾ,ಈ ಚಾಟ್‌ಗಳಲ್ಲಿ ಹಣಕಾಸು ವಂಚನೆಗಳು ಮತು ಸಚಿವರ ಖಾತೆಗಳನ್ನು ನಿರ್ಧರಿಸುವ ಬಗ್ಗೆ ಚರ್ಚೆಗಳು ನಡೆದಿವೆ. ಇದು ರಾಷ್ಟ್ರೀಯ ಭದ್ರತೆಯೊಂದಿಗೆ ಆಟವಾಡಿದಂತಾಗಿದೆ ಮತ್ತು ಅಧಿಕಾರದಲ್ಲಿರುವವರ ಪೊಳ್ಳುತನವನ್ನು ತೋರಿಸುತ್ತದೆ ಎಂದು ಹೇಳಿದರು.

ಆದರೆ,ಕಾಂಗ್ರೆಸ್‌ನ ಹಿರಿಯ ನಾಯಕತ್ವವು ಸಂಪೂರ್ಣ ಆರೋಪ ಪಟ್ಟಿಯನ್ನು ಪರಿಶೀಲಿಸಲಿದೆ ಮತ್ತು ಒಂದೆರಡು ದಿನಗಳಲ್ಲಿ ವಿವರವಾದ ಹೇಳಿಕೆಯನ್ನು ನೀಡಲಿದೆ ಎಂದರು.

ಇದಕ್ಕೂ ಮುನ್ನ ಕಾಂಗ್ರೆಸ್ ನಾಯಕ ಮನೀಷ್ ತಿವಾರಿ ಅವರು,ಈ ವಿಷಯದ ಬಗ್ಗೆ ಜಂಟಿ ಸಂಸದೀಯ ಸಮಿತಿಯಿಂದ ತನಿಖೆ ನಡೆಯುವುದು ಅಗತ್ಯವಿದೆ. ಮಾಧ್ಯಮಗಳಲ್ಲಿ ವರದಿಯಾಗಿದ್ದು ಸರಿಯಿದ್ದರೆ ಅದು ಬಾಲಾಕೋಟ್ ವಾಯುದಾಳಿ ಮತ್ತು 2019ರ ಸಾರ್ವತ್ರಿಕ ಚುನಾವಣೆಗಳ ನಡುವೆ ನೇರ ನಂಟನ್ನು ಬೆಟ್ಟು ಮಾಡುತ್ತದೆ ಎಂದು ಟ್ವೀಟಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News