ಮಹಾರಾಷ್ಟ್ರ ಗ್ರಾಮ ಪಂಚಾಯತ್ ಚುನಾವಣೆ ಫಲಿತಾಂಶ: ಆಡಳಿತಾರೂಢ ಮೈತ್ರಿಕೂಟ ಪಕ್ಷಕ್ಕೆ ಮುನ್ನಡೆ

Update: 2021-01-18 12:21 GMT

ಮುಂಬೈ: ಮಹಾರಾಷ್ಟ್ರ ಗ್ರಾಮ ಪಂಚಾಯತ್ ಚುನಾವಣೆ ಫಲಿತಾಂಶದಲ್ಲಿ ಉದ್ದವ್ ಠಾಕ್ರೆ ನೇತೃತ್ವದ ಶಿವಸೇನೆ, ಶರದ್ ಪವಾರ್ ನಾಯಕತ್ವದ ಎನ್ ಸಿಪಿ ಹಾಗೂ ಕಾಂಗ್ರೆಸ್ ಪಕ್ಷ ಒಳಗೊಂಡ ಆಡಳಿತಾರೂಢ ಮೈತ್ರಿಕೂಟ ಮಹಾ ವಿಕಾಸ ಅಘಾಡಿ( ಎಂವಿಎ)ಬೆಂಬಲಿತ ಅಭ್ಯರ್ಥಿಗಳು  ಮುನ್ನಡೆ ಸಾಧಿಸಿದ್ದಾರೆ. ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಸೋಮವಾರ ಬೆಳಗ್ಗೆ ಆರಂಭವಾಗಿದೆ.

ಈ ತನಕ 6,446 ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಿದೆ. ಈ ಪೈಕಿ ಶಿವಸೇನೆ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸ್ಥಾನಗಳಲ್ಲಿ ಮುಂದಿದ್ದಾರೆ. ಶಿವಸೇನೆ ಬೆಂಬಲಿತ ಅಭ್ಯರ್ಥಿಗಳು 1452 ಪಂಚಾಯತ್ ಗಳಲ್ಲಿ ಮುನ್ನಡೆಯಲ್ಲಿದ್ದರೆ, ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು 1398 ಸ್ಥಾನಗಳಲ್ಲಿ ಮುಂದಿದ್ದಾರೆ.ಎನ್ ಸಿಪಿ ಬೆಂಬಲಿತ ಅಭ್ಯರ್ಥಿಗಳು 1239 ಸೀಟುಗಳಲ್ಲಿ ಮುಂದಿದ್ದಾರೆ. ಕಾಂಗ್ರೆಸ್ 1012 ಸೀಟುಗಳನ್ನು ಗೆದ್ದುಕೊಂಡಿದೆ.

ಗ್ರಾಮಪಂಚಾಯತ್ ಚುನಾವಣೆಗಳು ಪಕ್ಷದ ಚಿಹ್ನೆಯಲ್ಲಿ ನಡೆಯುವುದಿಲ್ಲ. ಆದರೆ, ಅಭ್ಯರ್ಥಿಗಳನ್ನು ಪಕ್ಷಗಳು ಬೆಂಬಲಿಸುತ್ತವೆ.

ಮಹಾರಾಷ್ಟ್ರದ ಒಟ್ಟು 36 ಜಿಲ್ಲೆಗಳ ಪೈಕಿ 34 ಜಿಲ್ಲೆಗಳ 14,000ಕ್ಕೂ ಗ್ರಾಮ ಪಂಚಾಯತ್ ಗಳ ಚುನಾವಣೆಯು ಶುಕ್ರವಾರ ನಡೆದಿತ್ತು. ಮಹಾರಾಷ್ಟ್ರದಲ್ಲಿ ಒಟ್ಟು 27,920 ಗ್ರಾಮ ಪಂಚಾಯತ್ ಗಳಿದ್ದು, 20,000ಕ್ಕೂ ಅಧಿಕ ಗ್ರಾಮ ಪಂಚಾಯತ್ ಗಳಲ್ಲಿ ಅವಿರೋಧ ಆಯ್ಕೆ ನಡೆದಿತ್ತು.

ನಾಗ್ಪುರದಲ್ಲಿ ಕಾಂಗ್ರೆಸ್ ಗೆ ಮುನ್ನಡೆ: ಆರ್ ಎಸ್ ಎಸ್ ಪ್ರಾಬಲ್ಯವಿರುವ ನಾಗ್ಪುರ ವಲಯದಲ್ಲಿ 1508 ಸೀಟುಗಳಲ್ಲಿ ಕಾಂಗ್ರೆಸ್ 73 ಸೀಟುಗಳಲ್ಲಿ ಮುನ್ನಡೆಯಲ್ಲಿದ್ದರೆ, ಬಿಜೆಪಿ 38ರಲ್ಲಿ ಲೀಡ್ ನಲ್ಲಿದೆ. ಶಿವಸೇನೆ 5ರಲ್ಲಿ, ಎನ್ ಸಿಪಿ 6ರಲ್ಲಿ ಮುನ್ನಡೆ ಉಳಿಸಿಕೊಂಡಿದೆ. ಒಟ್ಟಾರೆ, ಶಿವಸೇನಾ, ಎನ್ ಸಿಪಿ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಗ್ರಾಮ ಪಂಚಾಯತ್ ಸೀಟುಗಳಲ್ಲಿ ಮುನ್ನಡೆ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News