ಕಾನೂನು ಸಮಸ್ಯೆಗಳ ಕಾರಣದಿಂದ ವಿಜಯ್ ಮಲ್ಯನನ್ನು ಭಾರತಕ್ಕೆ ಕರೆತರಲಾಗುತ್ತಿಲ್ಲ: ಸುಪ್ರೀಂಗೆ ಕೇಂದ್ರ ಹೇಳಿಕೆ

Update: 2021-01-18 14:37 GMT

ಹೊಸದಿಲ್ಲಿ,ಜ.18: ಬ್ಯಾಂಕುಗಳಿಗೆ 9,000 ಕೋ.ರೂ.ಗೂ ಅಧಿಕ ಸಾಲಬಾಕಿ ಪ್ರಕರಣದಲ್ಲಿ ಆರೋಪಿಯಾಗಿರುವ ದೇಶಭ್ರಷ್ಟ ಉದ್ಯಮಿ ವಿಜಯ ಮಲ್ಯರನ್ನು ಬ್ರಿಟನ್‌ನಿಂದ ಗಡಿಪಾರುಗೊಳಿಸಲು ತಾನು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇನೆ,ಆದರೆ ಕೆಲವು ಕಾನೂನಾತ್ಮಕ ತೊಡಕುಗಳಿಂದಾಗಿ ಗಡಿಪಾರು ಪ್ರಕ್ರಿಯೆ ವಿಳಂಬಗೊಳ್ಳುತ್ತಿದೆ ಎಂದು ಕೇಂದ್ರ ಸರಕಾರವು ಸೋಮವಾರ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದೆ.

ಮಲ್ಯ ಗಡಿಪಾರು ಸ್ಥಿತಿಗತಿ ಕುರಿತು ವರದಿಯನ್ನು ಸಲ್ಲಿಸಲು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಕಾಲಾವಕಾಶವನ್ನು ಕೋರಿದ ಬಳಿಕ ನ್ಯಾಯಮೂರ್ತಿಗಳಾದ ಯು.ಯು.ಲಲಿತ್ ಮತ್ತು ಅಶೋಕ್ ಭೂಷಣ ಅವರ ಪೀಠವು ವಿಚಾರಣೆಯನ್ನು ಮಾ.15ಕ್ಕೆ ಮುಂದೂಡಿತು.

ಬೆಳಿಗ್ಗೆ ವಿಚಾರಣೆ ಆರಂಭಗೊಂಡಾಗ ಮೆಹ್ತಾ ಅವರು ಬ್ರಿಟನ್‌ನಿಂದ ಮಲ್ಯ ಗಡಿಪಾರು ಸ್ಥಿತಿಗತಿಯ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕಾರಿ ದೇವೇಶ ಉತ್ತಮ್ ತನಗೆ ಬರೆದಿರುವ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು. ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಮಲ್ಯ ಗಡಿಪಾರು ವಿಷಯವನ್ನು ಬ್ರಿಟಿಷ್ ಸರಕಾರದ ಬಳಿ ಪ್ರಸ್ತಾಪಿಸಿದೆ ಮತ್ತು ಗಡಿಪಾರಿಗಾಗಿ ಕೇಂದ್ರವು ಎಲ್ಲ ಗಂಭೀರ ಪ್ರಯತ್ನಗಳನ್ನು ಮಾಡುತ್ತಿದೆಯಾದರೂ ಪ್ರಕ್ರಿಯೆ ಸ್ಥಗಿತಗೊಂಡಿದೆ ಮತ್ತು ರಾಜಕೀಯವಾಗಿ ಹಾಗೂ ಆಡಳಿತಾತ್ಮಕವಾಗಿ ಉನ್ನತ ಮಟ್ಟದಲ್ಲಿ ಪದೇಪದೇ ಈ ವಿಷಯವನ್ನು ಪ್ರಸ್ತಾಪಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಈಗ ನಿಷ್ಕ್ರಿಯಗೊಂಡಿರುವ ತನ್ನ ಕಿಂಗ್‌ಫಿಷರ್ ಏರ್‌ಲೈನ್ಸ್‌ಗಾಗಿ ಬ್ಯಾಂಕುಗಳಿಂದ ಸಾಲವನ್ನು ಪಡೆದುಕೊಂಡಿದ್ದ ಮಲ್ಯ,9000 ಕೋ.ರೂ.ಅಧಿಕ ಸಾಲವನ್ನು ಬಾಕಿಯುಳಿಸಿಕೊಂಡಿದ್ದು,2016 ಮಾರ್ಚ್‌ನಿಂದ ಬ್ರಿಟನ್‌ನಲ್ಲಿ ನೆಲೆಸಿದ್ದಾರೆ. ಸ್ಕಾಟ್ಲಂಡ್ ಯಾರ್ಡ್ 2017,ಎ.18ರಂದು ಕಾರ್ಯಗತಗೊಳಿಸಿದ ಗಡಿಪಾರು ವಾರಂಟ್‌ಗೆ ಸಂಬಂಧಿಸಿದಂತೆ ಮಲ್ಯ ಜಾಮೀನಿನಲ್ಲಿದ್ದಾರೆ.

ಮಲ್ಯರನ್ನು ಗಡಿಪಾರುಗೊಳಿಸುವುದಕ್ಕೆ ಮುನ್ನ ಕೆಲವು ಕಾನೂನು ತೊಡಕುಗಳನ್ನು ನಿವಾರಿಸಿಕೊಳ್ಳಬೇಕಿದೆ ಎಂದು ಬ್ರಿಟಿಷ್ ಸರಕಾರವು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ತಿಳಿಸಿದೆ ಎಂದು ಮೆಹ್ತಾ ನ್ಯಾಯಾಲಯಕ್ಕೆ ಸಲ್ಲಿಸಿದ ಪತ್ರದಲ್ಲಿ ಹೇಳಲಾಗಿದ್ದು, ಪ್ರಕರಣದ ಸ್ವರೂಪದಿಂದಾಗಿ ಹೆಚ್ಚಿನ ವಿವರಗಳನ್ನು ಒದಗಿಸಲು ಬ್ರಿಟಿಷ್ ಸರಕಾರಕ್ಕೆ ಸಾಧ್ಯವಾಗುತ್ತಿಲ್ಲ. ಈ ತೊಡಕು ಯಾವಾಗ ಬಗೆಹರಿಯುತ್ತದೆ ಎನ್ನುವುದನ್ನು ನಾವೂ ಅಂದಾಜಿಸುವಂತಿಲ್ಲ. ಸಾಧ್ಯವಾದಷ್ಟು ಶೀಘ್ರ ವಿಷಯವನ್ನು ಬಗೆಹರಿಸಲು ಬ್ರಿಟಿಷ್ ಸರಕಾರವು ಬಯಸಿದೆ ಎಂದು ನಾನು ನಿಮಗೆ ಭರವಸೆ ನೀಡಬಲ್ಲೆ ಎಂದು ದೇವೇಶ ಉತ್ತಮ ಪತ್ರದಲ್ಲಿ ತಿಳಿಸಿದ್ದಾರೆ.

ಕಳೆದ ವರ್ಷದ ನ.2ರಂದು ಸರ್ವೋಚ್ಚ ನ್ಯಾಯಾಲಯವು ಮಲ್ಯ ಗಡಿಪಾರು ಕುರಿತು ಬ್ರಿಟನ್‌ನಲ್ಲಿ ಬಾಕಿಯಾಗಿರುವ ಕಾನೂನು ಕಲಾಪಗಳ ಬಗ್ಗೆ ಸ್ಥಿತಿಗತಿ ವರದಿಯನ್ನು ಆರು ವಾರಗಳಲ್ಲಿ ಸಲ್ಲಿಸುವಂತೆ ಕೇಂದ್ರಕ್ಕೆ ಸೂಚಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News