'ತಾಂಡವ್’ ವೆಬ್ ಧಾರಾವಾಹಿ ವಿರೋಧಿಗಳ ಗುಂಪಿಗೆ ಮಾಯಾವತಿ ಸೇರ್ಪಡೆ

Update: 2021-01-18 14:25 GMT

ಹೊಸದಿಲ್ಲಿ: ಸೈಫ್ ಅಲಿ ಖಾನ್ ನಟನೆಯ ವೆಬ್ ಧಾರಾವಾಹಿ ‘ತಾಂಡವ್’ ವಿರೋಧಿಸುತ್ತಿರುವ ರಾಜಕೀಯ ನಾಯಕರ ಪಟ್ಟಿಗೆ ಇದೀಗ ಬಹುಜನ ಸಮಾಜವಾದಿ ಪಕ್ಷದ ವರಿಷ್ಠೆ ಮಾಯಾವತಿ ಸೇರ್ಪಡೆಯಾಗಿದ್ದಾರೆ. ವೆಬ್ ಧಾರಾವಾಹಿಯ ಕೆಲವು ದೃಶ್ಯಗಳು ಜನರ ಧಾರ್ಮಿಕ ಹಾಗೂ ಜನಾಂಗೀಯ ಭಾವನೆಗಳಿಗೆ ನೋವುಂಟು ಮಾಡುತ್ತಿದೆ. ದೇಶದಲ್ಲಿ ಶಾಂತಿ ಹಾಗೂ ಸೌಹಾರ್ದತೆ ಕಾಪಾಡಲು ವಿವಾದಾತ್ಮಕ ದೃಶ್ಯಗಳನ್ನು ತೆಗೆಯುವುದು ಸೂಕ್ತ ಎಂದು ಮಾಯಾವತಿ ಅಭಿಪ್ರಾಯಪಟ್ಟಿದ್ದಾರೆ.

ನಿರ್ದಯಿ ಹಾಗೂ ಮಹತ್ವಾಕಾಂಕ್ಷಿ ರಾಜಕೀಯ ನಾಯಕನ ಸುತ್ತ ಹೆಣೆಯಲಾಗಿರುವ  ‘ತಾಂಡವ್’ ಧಾರಾವಾಹಿಯು ಅಮೆಝಾನ್ ಪ್ರೈಮ್ ವೀಡಿಯೊದಲ್ಲಿ ಶುಕ್ರವಾರವಷ್ಟೇ ಬಿಡುಗಡೆಯಾಗಿದೆ. ಈ ಧಾರಾವಾಹಿಯಲ್ಲಿ ಹಿಂದು ದೇವತೆಗಳನ್ನು ಕೆಟ್ಟದ್ದಾಗಿ ಚಿತ್ರಿಸಲಾಗಿದೆ. ಧಾರಾವಾಹಿಯು ದಲಿತ ವಿರೋಧಿಯಾಗಿದೆ. ಹಿಂದುಗಳ ವಿರುದ್ಧ ದ್ವೇಷದಿಂದ ಕೂಡಿದೆ  ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಈ ವೆಬ್ ಧಾರಾವಾಹಿಯನ್ನು ನಿಷೇಧಿಸಬೇಕೆಂಬ ಬೇಡಿಕೆ ಇಟ್ಟಿದ್ದಾರೆ.

‘ತಾಂಡವ್’ ವೆಬ್ ಸರಣಿಯಲ್ಲಿನ ಧಾರ್ಮಿಕ ಹಾಗೂ ಜನಾಂಗೀಯ ಭಾವನೆಗಳನ್ನು ನೋಯಿಸುವ ಕೆಲವು ದೃಶ್ಯಗಳ ವಿರುದ್ದ ಪ್ರತಿಭಟನೆಗಳು ದಾಖಲಾಗುತ್ತಿವೆ. ಈ ನಿಟ್ಟಿನಲ್ಲಿ ಆಕ್ಷೇಪಾರ್ಹವಾದುದ್ದನ್ನು ತೆಗೆದುಹಾಕುವುದು ಸೂಕ್ತವಾದುದು. ಇದರಿಂದ ದೇಶದಲ್ಲಿನ ಶಾಂತಿ, ಸಾಮರಸ್ಯ ಹಾಗೂ ಸಹೋದರತ್ವ ಹಾಳಾಗದಿರಲಿ ಎಂದು ಮಾಯಾವತಿ ಟ್ವೀಟಿಸಿದ್ದಾರೆ.

ಧಾರ್ಮಿಕ ಭಾವನೆಗಳಿಗೆ ಹಾಗೂ ಸಾಮಾಜಿಕ ನಂಬಿಕೆಗಳಿಗೆ ಧಕ್ಕೆ ಉಂಟು ಮಾಡಿದ ಆರೋಪದಲ್ಲಿ ವೆಬ್ ಸರಣಿ ‘ತಾಂಡವ್’ನ ನಿರ್ಮಾಪಕ ಹಾಗೂ ಅಮೆಝಾನ್ ಪ್ರೈಮ್‌ನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘‘ಅಮೆಝಾನ್‌ನ ಅಧಿಕಾರಿ ಅರ್ಪಣಾ ಪುರೋಹಿತ್, ಸರಣಿಯ ನಿರ್ದೇಶಕ ಅಲಿ ಅಬ್ಬಾಸ್ ಝಫರ್, ನಿರ್ಮಾಪಕ ಹಿಮಾಂಶು ಕೃಷ್ಣ ಮೆಹ್ರಾ, ಲೇಖಕ ಗೌರವ್ ಸೋಲಂಕಿ ಹಾಗೂ ಇತರರ ವಿರುದ್ಧ ಹಝ್ರತ್‌ಗಂಜ್ ಪೊಲೀಸ್ ಠಾಣೆಯಲ್ಲಿ ರವಿವಾರ ಪ್ರಕರಣ ದಾಖಲಿಸಲಾಗಿದೆ’’ ಎಂದು ಲಕ್ನೋದ ಪೊಲೀಸ್ ಉಪ ಆಯುಕ್ತ (ಕೇಂದ್ರ) ಸೋಮನ್ ಬರ್ಮಾ ಹೇಳಿದ್ದಾರೆ.

ಸಮಾಜದ ನಿರ್ದಿಷ್ಟ ಸಮುದಾಯದ ಗೌರವಕ್ಕೆ ಹಾನಿ ಉಂಟು ಮಾಡುವ ವೀಡಿಯೊ ತುಣುಕನ್ನು ಸಾಮಾಜಿಕ ಜಾಲ ತಾಣದಲ್ಲಿ ವ್ಯಾಪಕವಾಗಿ ಪ್ರಸಾರ ಮಾಡಲಾಗುತ್ತಿದೆ ಎಂಬ ಮಾಹಿತಿಯನ್ನು ತಾನು ಸ್ವೀಕರಿಸಿದ್ದೆ ಎಂದು ಹಝ್ರತ್‌ಗಂಜ್ ಪೊಲೀಸ್ ಠಾಣೆಯ ಹಿರಿಯ ಸಬ್ ಇನ್ಸ್‌ಪೆಕ್ಟರ್ ಅಮರ್‌ನಾಥ್ ಯಾದವ್ ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News