ಸ್ವಾವಲಂಬಿ ಬದುಕಿಗೆ ರೈತರು ಸಮಗ್ರ ಕೃಷಿ ಅಳವಡಿಸಿಕೊಳ್ಳಿ : ಕೃಷಿ ಸಚಿವ ಪಾಟೀಲ್

Update: 2021-01-18 17:36 GMT

ಕಾರ್ಕಳ, ಜ.18: ರೈತರು ಸ್ವಾಭಿಮಾನದಿಂದ ಬದುಕಲು, ತಮ್ಮ ಕಾಲ ಮೇಲೆ ನಿಂತುಕೊಳ್ಳಲು ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು ಎಂದು ರಾಜ್ಯ ಕೃಷಿ ಸಚಿವ ಬಿ.ಸಿ.ಪಾಟೀಲ್ ರಾಜ್ಯದ ಕೃಷಿಕರಿಗೆ ಕರೆ ನೀಡಿದ್ದಾರೆ.

ಕಾರ್ಕಳದ ಕುಕ್ಕುಂದೂರು ಗ್ರಾಮಪಂಚಾಯತ್ ಮೈದಾನದಲ್ಲಿ ಸೋಮವಾರ ಆಯೋಜಿಸಲಾದ ಕಾರ್ಕಳದ ಮಣ್ಣಿನ ವಿಶಿಷ್ಟ ಕುಚ್ಚಲಕ್ಕಿ 'ಕಾರ್ಲ ಕಜೆ' ಬ್ರಾಂಡ್‌ನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿ, ಈ ಸಂದರ್ಭದಲ್ಲಿ ಆಯೋಜಿ ಸಲಾದ ಕೃಷಿ ಸಂಬಂಧಿತ ವಸ್ತುಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಅತ್ಯಂತ ಕಡಿಮೆ ಮಳೆ ಬೀಳುವ, ನೀರಿನ ಸೌಕರ್ಯವಿರುವ ಕೋಲಾರದ ರೈತರು ಸಮಗ್ರ ಕೃಷಿಯನ್ನು ಅಳವಡಿಸಿಕೊಂಡು ಬದುಕಿನಲ್ಲಿ ಯಶಸ್ಸು ಪಡೆದಿರುವುದನ್ನು ಉದಾಹರಣೆಯಾಗಿ ನೀಡಿದ ಸಚಿವರು, ಧಾರಾಳ ನೀರಿನ ಸೌಕರ್ಯವಿರುವ ಮಂಡ್ಯದ ರೈತರು ಆತ್ಮಹತ್ಯೆಗೆ ಮುಂದಾದರೆ, ನೀರೇ ಇಲ್ಲದ ಕೋಲಾರದ ಕೃಷಿಕರು ಇದರಿಂದ ನೆಮ್ಮದಿಯ ಬದುಕು ಕಾಣುತಿದ್ದಾರೆ ಎಂದರು.

ಇದಕ್ಕಾಗಿ ರಾಸಾಯನಿಕ ಗೊಬ್ಬರದ ಬಳಕೆಯನ್ನು ಕಡಿಮೆ ಮಾಡಿ, ಸಾವಯವ ಗೊಬ್ಬರವನ್ನು ಹೆಚ್ಚು ಹೆಚ್ಚು ಬಳಸಿ. ಇದಕ್ಕಾಗಿ ಕೃಷಿಯೊಂದಿಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆಗೆ ಒತ್ತು ನೀಡಿ. ಮೊದಲು ನಿಮ್ಮ ಜಮೀನಿನ ಮಣ್ಣಿನ ಪರೀಕ್ಷೆ ನಡೆಸಿ 17 ಲವಣಾಂಶಗಳ ಪ್ರಮಾಣವನ್ನು ತಿಳಿದುಕೊಳ್ಳಿ ಎಂದರು.

ಮಣ್ಣು ಪರೀಕ್ಷಾ ಕೇಂದ್ರ: ಇದಕ್ಕಾಗಿ ಪ್ರತಿ ಗ್ರಾಮದಲ್ಲಿ ಮಣ್ಣು ಪರೀಕ್ಷಾ ಕೇಂದ್ರವನ್ನು ತೆರೆಯುವುದು ನಮ್ಮ ಉದ್ದೇಶವಾಗಿದೆ. ಆದರೆ ಇದು ಅಸಾಧ್ಯವಾದ್ದರಿಂದ ಪ್ರತಿ ಗ್ರಾಪಂಗೊಂದು ಕೇಂದ್ರ ನೀಡುವಂತೆ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಸದ್ಯ 'ಕೃಷಿ ಸಂಜೀವಿನಿ' ಎಂಬ ವಾಹನದ ಮೂಲಕ ಕರೆ ಬಂದ (155313) ರೈತರ ಹೊಲಕ್ಕೆ ಭೇಟಿನೀಡಿ ಸಮಸ್ಯೆ ನಿವಾರಣೆಗೆ ಮಾರ್ಗದರ್ಶನ ನೀಡಲಾಗುವುದು. ವಾಹನದೊಂದಿಗೆ ಪ್ರಯೋಗಾಲಯಕ್ಕೆ ಬೇಕಾದ ಸೌಕರ್ಯವೂ ಇದೆ ಎಂದವರು ವಿವರಿಸಿದರು.

ತಾನು ಉಸ್ತುವಾರಿ ಸಚಿವನಾಗಿರುವ ಕೊಪ್ಪಳ ಜಿಲ್ಲೆಯಲ್ಲಿ ಇದನ್ನು ಪೈಲೆಟ್ ಯೋಜನೆಯಾಗಿ ಜಾರಿಗೊಳಿಸಲಾಗಿದೆ. 4.75 ಕೋಟಿ ರೂ. ವೆಚ್ಚದಲ್ಲಿ ಈಗಾಗಲೇ 40 ವಾಹನಗಳನ್ನು ಖರೀದಿಸಿ, 20 ರೈತ ಸಂಪರ್ಕ ಕೇಂದ್ರಗಳಿಗೆ 20 ವಾಹನಗಳನ್ನು ನೀಡಲಾಗಿದೆ. ಇದನ್ನು ಇಡೀ ರಾಜ್ಯಕ್ಕೆ ವಿಸ್ತರಿಸಲು 519 ವಾಹನಗಳ ಅಗತ್ಯವಿದೆ. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದು, ತಾತ್ವಿಕವಾಗಿ ಒಪ್ಪಿದ್ದಾರೆ. ಮುಂದಿನ ದಿನಗಳಲ್ಲಿ ಯೋಜನೆಯನ್ನು ರಾಜ್ಯಕ್ಕೆ ಇದನ್ನು ವಿಸ್ತರಿಸಲಾಗುವುದು ಎಂದು ಕೃಷಿ ಸಚಿವರು ಹೇಳಿದರು.

ಸ್ವಾಭಿಮಾನಿ ರೈತ ಕಾರ್ಡ್:  ಇದರೊಂದಿಗೆ ಕೊಪ್ಪಳ ಜಿಲ್ಲೆಯ 1.5 ಲಕ್ಷ ರೈತರಿಗೆ 'ಸ್ವಾಭಿಮಾನಿ ರೈತ' ಎಂಬ ಕಾರ್ಡ್‌ನ್ನು ನೀಡಲಾಗಿದೆ. ಇದರ ಮೂಲಕ ರೈತನ ಬಗ್ಗೆ ಎಲ್ಲಾ ಮಾಹಿತಿಗಳು ಒಂದೇ ಕಡೆ ಲಭ್ಯವಾಗಲಿದೆ. ಹೀಗಾಗಿ ಆತ ದಾಖಲೆಗಳನ್ನು ಹೊತ್ತೊಯ್ಯುವ ಪ್ರಮೇಯವಿರುವುದಿಲ್ಲ. ಇದನ್ನು ರಾಜ್ಯದ 70 ಲಕ್ಷ ರೈತರಿಗೂ ವಿತರಿಸುವ ಯೋಜನೆಯನ್ನು ರೂಪಿಸಲಾಗಿದೆ ಎಂದರು.

ಸ್ಥಳೀಯ ಅಕ್ಕಿ ಬ್ರಾಂಡ್ ಆದ 'ಕಾರ್ಲ ಕಜೆ'ಯ ಮೂಲಕ ರೈತರಿಗೆ ಬೆನ್ನೆಲುಬಾಗಿ ನಿಂತ ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್‌ರನ್ನು ಅವರು ಅಭಿನಂದಿಸಿದರು. ಕಾರ್ಲ ಕಜೆಯ ಡಿಎನ್‌ಎ ಪರೀಕ್ಷೆ, ಸಂಶೋಧನೆ ನಡೆಸಿ ಅದರ ವಿಶಿಷ್ಟತೆಗಳ ಬಗ್ಗೆ ಜನತೆಗೆ ತಿಳಿಸುವಂತೆ ಸಚಿವರು ಶಿವಮೊಗ್ಗ ಕೃಷಿ ವಿಶ್ವವಿದ್ಯಾನಿಲಯದ ಕುಲಪತಿಗಳಿಗೆ ಸೂಚನೆ ನೀಡಿದರು.

ಕೋಲಾರ ಮಾದರಿ: ಕೃಷಿ ಕ್ಷೇತ್ರದಲ್ಲಿ ಇಸ್ರೇಲ್‌ಗಿಂತ ಕರ್ನಾಟಕದ ಕೋಲಾರ ವಿಶ್ವಕ್ಕೆ ಮಾದರಿಯಾಗಬೇಕು. ಆದರೆ ಇಂದು ಇಸ್ರೇಲ್ ಮಾದರಿ ಹೆಚ್ಚು ಸದ್ದು ಮಾಡುತಿದ್ದು, ಕೋಲಾರದ ಕೃಷಿಕರು ಕಡಿಮೆ ಮಳೆಯಲ್ಲಿ ಸಮಗ್ರ ಕೃಷಿ ನೀತಿಯನ್ನು ಅಳವಡಿಸಿ ಕೊಂಡು ಹೆಚ್ಚು ಬೆಳೆ ಬೆಳೆಯುತಿದ್ದಾರೆ. ಹೆಚ್ಚು ಉತ್ಪಾದನೆ ಪಡೆಯುತಿದ್ದಾರೆ. ಈ ಬಗ್ಗೆ ರಾಜ್ಯದ ಎಲ್ಲಾ ರೈತರಿಗೆ ತರಬೇತಿ ನೀಡಲು ಸರಕಾರ ಯೋಜನೆ ರೂಪಿಸಿದೆ, ಪ್ರತಿ ವಾರ ತಲಾ 50 ರೈತರಿಗೆ 6 ದಿನಗಳ ತರಬೇತಿಯನ್ನು ನೀಡಲಾಗುತ್ತದೆ. ಮಾರ್ಚ್ ಒಳಗೆ 500 ಮಂದಿಗೆ ತಬೇತಿ ನೀಡುವ ಗುರಿ ಇದೆ ಎಂದರು.

ಕೃಷಿ ಕ್ಷೇತ್ರದಲ್ಲಿ ಇಸ್ರೇಲ್‌ಗಿಂತ ಕರ್ನಾಟಕದ ಕೋಲಾರ ವಿಶ್ವಕ್ಕೆ ಮಾದರಿಯಾಗಬೇಕು. ಆದರೆ ಇಂದು ಇಸ್ರೇಲ್ ಮಾದರಿ ಹೆಚ್ಚು ಸದ್ದು ಮಾಡುತಿದ್ದು, ಕೋಲಾರದ ಕೃಷಿಕರು ಕಡಿಮೆ ಮಳೆಯಲ್ಲಿ ಸಮಗ್ರ ಕೃಷಿ ನೀತಿಯನ್ನು ಅಳವಡಿಸಿಕೊಂಡು ಹೆಚ್ಚು ಬೆಳೆ ಬೆಳೆಯುತಿದ್ದಾರೆ. ಹೆಚ್ಚು ಉತ್ಪಾದನೆ ಪಡೆಯುತಿದ್ದಾರೆ. ಈ ಬಗ್ಗೆ ರಾಜ್ಯದ ಎಲ್ಲಾ ರೈತರಿಗೆ ತರಬೇತಿ ನೀಡಲು ಸರಕಾರ ಯೋಜನೆ ರೂಪಿಸಿದೆ, ಪ್ರತಿ ವಾರ ತಲಾ 50 ರೈತರಿಗೆ 6 ದಿನಗಳ ತರಬೇತಿಯನ್ನು ನೀಡಲಾಗುತ್ತದೆ. ಮಾರ್ಚ್ ಒಳಗೆ 500 ಮಂದಿಗೆ ತರಬೇತಿ ನೀಡುವ ಗುರಿ ಇದೆ ಎಂದರು. ಶಾಸಕ ಹಾಗೂ ಸರಕಾರದ ಮುಖ್ಯ ಸಚೇತಕ ವಿ.ಸುನೀಲ್ ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ರೈತರು ಬೆಳೆಸುವ ಬೆಳೆಗೆ ಮುದ್ರಾಂಕ ದೊರೆತಾಗ ಸರಕಾರದ ಮಾನ್ಯತೆಯಿಂದ ಕೃಷಿಕರಿಗೆ ಹೆಚ್ಚಿನ ಪ್ರಯೋಜನವಾಗುವ ಮೂಲಕ ಆ ಉತ್ಪನ್ನ ಹೆಚ್ಚು ಪ್ರಸಿದ್ಧಿ ಪಡೆಯಲಿದೆ. ಜೊತೆಗೆ ಗ್ರಾಹಕರಿಗೂ ಗುಣಮಟ್ಟದ ಉತ್ಪನ್ನ ದೊರಕಲು ಸಾಧ್ಯ ಎಂದರು.

ಕಾರ್ಕಳದಲ್ಲಿ ಸದ್ಯ 6500 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿದ್ದು, ಇದರಲ್ಲಿ 1000 ಹೆಕ್ಟ್ಟೆರ್‌ನಲ್ಲಿ ಕಾರ್ಲ ಕಜೆಯನ್ನು ಬೆಳೆಸಲಾಗುತ್ತಿದೆ. ಕಾರ್ಲ ಕಜೆ ಇದೀಗ 5000 ಕ್ವಿಂಟಾಲ್ ಉತ್ಪಾದನೆಯಾಗುತಿದ್ದು, ಮುಂದಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಉತ್ತಮಬೆಲೆ ದೊರಕುವುದರಿಂದ ಉತ್ಪಾದನೆ ಹೆಚ್ಚುವ ನಿರೀಕ್ಷೆ ಇದೆ. ಸರಕಾರ ಈ ಯೋಜನೆಗೆ ಕಾನೂನು ಚೌಕಟ್ಟಿನಲ್ಲಿ ಮಾನ್ಯತೆ ನೀಡುವಂತೆ ಅವರು ಸಚಿವರಲ್ಲಿ ಕೋರಿದರು.

ಗೇರುಬೀಜ ನಿಗಮದ ಅಧ್ಯಕ್ಷ ಮಣಿರಾಜ್ ಶೆಟ್ಟಿ, ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉಡುಪಿ ಜಿಪಂ ಕೃಷಿ ಮತ್ತು ಕೈಗಾರಿಕಾ ಸ್ಥಾಯೀ ಸಮಿತಿ ಅಧ್ಯಕ್ಷ ಸುಮೀತ್ ಶೆಟ್ಟಿ, ತಾಪಂ ಅಧ್ಯಕ್ಷೆ ಸೌಭಾಗ್ಯ ಮಡಿವಾಳ, ಉಪಾಧ್ಯಕ್ಷ ಹರೀಶ್ ನಾಯಕ್, ಹೆಬ್ರಿ ತಾಪಂ ಅಧ್ಯಕ್ಷ ರಮೇಶ್ ಪೂಜಾರಿ, ಪುರಸಭಾ ಅಧ್ಯಕ್ಷೆ ಸುಮಾ, ಉಪಾಧ್ಯಕ್ಷೆ ಪಲ್ಲವಿ ರಾವ್, ಜಿಪಂ ಸದಸ್ಯರು, ಭಾಕಿಸಂ ಉಪಾಧ್ಯಕ್ಷ ಉಮಾಕಾಂತ ರಾನಡೆ, ಕಾರ್ಕಳ ಎಪಿಎಂಸಿ ಅಧ್ಯಕ್ಷ ಮೋಹನ್ ದಾಸ್ ಶೆಟ್ಟಿ, ಕಾರ್ಕಳ ತೋಟಗಾರಿಕೆ ರೈತ ಉತ್ಪಾದಕ ಕಂಪೆನಿಯ ಅಧ್ಯಕ್ಷ ಅಂತೋನಿ ಡಿಸೋಜಾ ನಕ್ರೆ, ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿವಿ ಉಪಕುಲಪತಿ ಡಾ. ಎಮ್.ಕೆ. ನಾಯ್ಕೆ, ಉಡುಪಿ ಜಿಪಿ ಸಿಇಓ ಡಾ. ನವೀನ್ ಭಟ್, ಉಡುಪಿ ತೋಟಗಾರಿಕೆ ಉಪನಿರ್ದೇಶಕಿ ಭುವನೇಶ್ವರಿ ಉಪಸ್ಥಿತರಿದ್ದರು.

ಉಡುಪಿ ಕೃಷಿ ಇಲಾಖೆ ಜಂಟೀ ನಿರ್ದೇಶಕ ಕೆ.ಕೆಂಪೇಗೌಡ ಸ್ವಾಗತಿಸಿದರು. ಉದಯ ಹೆಗ್ಡೆ ನಿರೂಪಿಸಿದರು. ಭಾರತೀಯ ಕಿಸಾನ್ ಸಂಘದ ಉಡುಪಿ ಜಿಲ್ಲಾ ಅಧ್ಯಕ್ಷ ನವೀನ್‌ಚಂದ್ರ ಜೈನ್ ಪ್ತಾಸ್ತಾವಿಕವಾಗಿ ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News