ಅರುಣಾಚಲದಲ್ಲಿ ಚೀನಾ ಗ್ರಾಮ ನಿರ್ಮಾಣದ ಕುರಿತು ಕೇಂದ್ರ ಸರಕಾರದ ಪ್ರತಿಕ್ರಿಯೆ ಏನು ಗೊತ್ತಾ?

Update: 2021-01-18 17:37 GMT

ಹೊಸದಿಲ್ಲಿ: ಚೀನಾವು ಅರುಣಾಚಲ ಪ್ರದೇಶದಲ್ಲಿ 101 ಮನೆಗಳಿರುವ ಗ್ರಾಮವನ್ನು ನಿರ್ಮಿಸಿದೆ ಎಂಬ ವರದಿಗೆ ಎಚ್ಚರಿಕೆಯಿಂದ ಪ್ರತಿಕ್ರಿಯಿಸಿರುವ ವಿದೇಶಾಂಗ ವ್ಯವಹಾರ ಸಚಿವಾಲಯ(ಎಂಇಎ), ಸರಕಾರವು ದೇಶದ ಭದ್ರತೆಗೆ ಧಕ್ಕೆ ತರುವ ಎಲ್ಲಾ ಬೆಳವಣಿಗೆಗಳನ್ನು ನಿರಂತರವಾಗಿ ಗಮನಿಸುತ್ತಿದೆ ಹಾಗೂ ತನ್ನ ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆಯನ್ನು ಕಾಪಾಡಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಸೋಮವಾರ ಹೇಳಿದೆ.

ಭಾರತ ತನ್ನ ನಾಗರಿಕರ ಜೀವನೋಪಾಯಕ್ಕಾಗಿ ರಸ್ತೆ ಹಾಗೂ ಸೇತುವೆಗಳು ಸೇರಿದಂತೆ ಗಡಿ ಮೂಲ ಸೌಕರ್ಯಗಳ ನಿರ್ಮಾಣವನ್ನು ಚುರುಕುಗೊಳಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಅರುಣಾಚಲ ಪ್ರದೇಶದ ವಿವಾದಿತ ವಲಯದಲ್ಲಿ ಚೀನಾವು ಸುಮಾರು 101 ಮನೆಗಳಿರುವ ಹಳ್ಳಿಯನ್ನು ನಿರ್ಮಿಸಿದೆ.

ಹೊಸ ಗ್ರಾಮಗಳನ್ನು ನಿರ್ಮಿಸಿರುವುದನ್ನು ತೋರಿಸುವ ಉಪಗ್ರಹ ಚಿತ್ರ ತನಗೆ ದೊರಕಿದೆ ಎಂದು ನ್ಯೂಸ್ ಚಾನಲ್ ಎನ್ ಡಿ ಟಿವಿ ವರದಿ ಮಾಡಿದೆ.

ಚೀನಾವು ಭಾರತದ ಗಡಿ ಪ್ರದೇಶಗಳಲ್ಲಿ ನಿರ್ಮಾಣ ಕಾರ್ಯಗಳನ್ನು ಕೈಗೊಳ್ಳುತ್ತಿದೆ ಎಂಬ ಇತ್ತೀಚೆಗಿನ ವರದಿಗಳನ್ನು ನಾವು ನೋಡಿದ್ದೇವೆ. ಕಳೆದ ಹಲವಾರು ವರ್ಷಗಳಲ್ಲಿ ಚೀನಾ ಹೆಚ್ಚಿನ ಮೂಲ ಸೌಕರ್ಯ ನಿರ್ಮಾಣ ಚಟುವಟಿಕೆಗಳನ್ನು ಕೈಗೊಂಡಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ ನಮ್ಮ ಸರಕಾರವು ರಸ್ತೆಗಳು, ಸೇತುವೆಗಳು ಇತ್ಯಾದಿಗಳ ನಿರ್ಮಾಣ ಸೇರಿದಂತೆ ಮೂಲ ಸೌಕರ್ಯಗಳನ್ನು ಹೆಚ್ಚಿಸಿದೆ. ಇದು ಗಡಿಯುದ್ದಕ್ಕೂ ಸ್ಥಳೀಯ ಜನಸಂಖ್ಯೆಗೆ ಅಗತ್ಯವಾದ ಸಂಪರ್ಕವನ್ನು ಒದಗಿಸಿದೆ ಎಂದು ಎಂಇಎ ತಿಳಿಸಿದೆ.

ಅರುಣಾಚಲ ಪ್ರದೇಶ ಸೇರಿದಂತೆ ತನ್ನ ನಾಗರಿಕರ ಜೀವನೋಪಾಯದ ಸುಧಾರಣೆಗೆ ಗಡಿ ರೇಖೆಗಳಲ್ಲಿ ಮೂಲಸೌಕರ್ಯಗಳನ್ನು ನಿರ್ಮಿಸುವ ಉದ್ದೇಶಕ್ಕೆ ಸರಕಾರ ಬದ್ಧವಾಗಿದೆ. ಭಾರತದ ಭದ್ರತೆಯ ಮೇಲೆ ಪರಿಣಾಮಬೀರುವ ಎಲ್ಲ ಬೆಳವಣಿಗೆಗಳ ಮೇಲೆ ಸರಕಾರ ನಿರಂತರ ನಿಗಾ ಇಡುತ್ತದೆ. ಅದರ ಸಾರ್ವ ಭೌಮತ್ವ ಹಾಗೂ ಪ್ರಾದೇಶಿಕ ಸಮಗ್ರತೆಯನ್ನು ಕಾಪಾಡಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News