ಕೆಲವು ಆರೋಗ್ಯ ಕಾರ್ಯಕರ್ತರು ಕೋವಿಡ್ ಲಸಿಕೆಯನ್ನು ನಿರಾಕರಿಸುತ್ತಿರುವುದು ದುರದೃಷ್ಟಕರ: ಕೇಂದ್ರ ಸರಕಾರ

Update: 2021-01-19 14:01 GMT

ಹೊಸದಿಲ್ಲಿ,ಜ.19: "ವೈದ್ಯರು, ನರ್ಸ್ ಗಳು, ಆರೋಗ್ಯ ಕಾರ್ಯಕರ್ತರು ಹಾಗೂ ಕೋವಿಡ್ ವಿರುದ್ಧ ಹೋರಾಟ ನಡೆಸುತ್ತಿರುವ ಇತರರು ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಹಿಂಜರಿಯಬಾರದು, ಇಂತಹ ಕೆಲವು ಘಟನೆಗಳು ನಡೆಯುತ್ತಿರುವುದು ದುರದೃಷ್ಟಕರ ಎಂದು ಕೇಂದ್ರ ಸರಕಾರ ಹೇಳಿಕೆ ನೀಡಿದೆ.

"ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಅರ್ಹರಿರುವ ವ್ಯಕ್ತಿಗಳು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು. ಈ ಲಸಿಕೆಯನ್ನು ತಯಾರಿಸಲು ತುಂಬಾ ಶ್ರಮವಹಿಸಲಾಗಿದೆ. ಆದರೆ ವೈದ್ಯರು, ನರ್ಸ್ ಗಳು ಮತ್ತು ಕಲ ಆರೋಗ್ಯ ಕಾರ್ಯಕರ್ತರು ಈ ಲಸಿಕೆ ಹಾಕಿಸಿಕೊಳ್ಳುವುದನ್ನು ತಿರಸ್ಕರಿಸುತ್ತಿರುವುದು ದುರದೃಷ್ಟಕರ. ಈ ಸಾಂಕ್ರಾಮಿಕವು ನಮ್ಮನ್ನು ಯಾವ ಮಟ್ಟಕ್ಕೆ ಕೊಂಡೊಯ್ಯಬಹುದು ಎಂದು ತಿಳಿದಿಲ್ಲ. ಹಾಗಾಗಿ ಕೂಡಲೇ ಲಸಿಕೆಯನ್ನು ಹಾಕಿಸಿ ಎಂದು ನೀತಿ ಆಯೋಗದ ಸದಸ್ಯ ಡಾ. ವಿ.ಕೆ ಪಾಲ್ ಹೇಳಿಕೆ ನೀಡಿದ್ದಾರೆ.

"ಈ ಎರಡೂ ಲಸಿಕೆಗಳು ಸುರಕ್ಷತೆಯನ್ನು ಹೊಂದಿವೆ. ಕೆಲ ಪ್ರಕರಣಗಳಲ್ಲಿ ಸಣ್ಣ ಮಟ್ಟದ ಪರಿಣಾಮ ಉಂಟಾಗಬಹುದೇ ಹೊರತು ಬೇರೆ ಯಾವುದೇ ತೊಂದರೆಗಳಿಲ್ಲ. ಮೊದಲು ಆರೋಗ್ಯ ಕಾರ್ಯಕರ್ತರು ಲಸಿಕೆ ಹಾಕಿಸಿಕೊಂಡು ಜನರ ಆತ್ಮವಿಶ್ವಾಸ ಹೆಚ್ಚಿಸುವ ಕೆಲಸ ಮಾಡಬೇಕು ಎಂದು ಅವರು ಹೇಳಿಕೆ ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News