“ಮೊದಲು ಕೃಷಿ ಕಾಯ್ದೆಯ ಪರ ಹೇಳಿಕೆ ನೀಡಿದ್ದರೂ, ಬಳಿಕ ಅವರ ಅಭಿಪ್ರಾಯ ಬದಲಾಗಬಹುದು”

Update: 2021-01-19 14:21 GMT

ಹೊಸದಿಲ್ಲಿ,ಜ.19: ನೂತನ ಕೃಷಿ ಕಾನೂನುಗಳ ಬಗ್ಗೆ ರೈತಲ್ಲಿಯ ಗೊಂದಲ,ಶಂಕೆಗಳನ್ನು ನಿವಾರಿಸಲು ಸರ್ವೋಚ್ಚ ನ್ಯಾಯಾಲಯವು ರಚಿಸಿರುವ ಸಮಿತಿಯು ಮಂಗಳವಾರ ತನ್ನ ಮೊದಲ ಸಭೆಯನ್ನು ನಡೆಸಿದ್ದು,ಕೇಂದ್ರ ಮತ್ತು ರಾಜ್ಯ ಸರಕಾರಗಳ ಜೊತೆಗೆ ರೈತರು ಮತ್ತು ಕೃಷಿ ಕ್ಷೇತ್ರದ ಪಾಲುದಾರರಿಂದ ಅಭಿಪ್ರಾಯಗಳನ್ನು ಪಡೆದುಕೊಳ್ಳಲು ಅದು ಉದ್ದೇಶಿಸಿದೆ ಎಂದು ಸದಸ್ಯ ಅನಿಲ ಘನ್ವತ್ ಅವರು ತಿಳಿಸಿದರು.

ಸಮಿತಿಯು ವಸ್ತುನಿಷ್ಠತೆಯನ್ನು ಕಾಯ್ದುಕೊಳ್ಳಲಿದೆ ಮತ್ತು ಚರ್ಚೆಗಳ ನಡುವೆ ವೈಯಕ್ತಿಕ ಅಭಿಪ್ರಾಯಗಳಿಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ ಘನ್ವತ್,ಸಮಿತಿಯ ಸದಸ್ಯರು ಯಾವುದೇ ರಾಜಕೀಯ ಪಕ್ಷ ಅಥವಾ ಸರಕಾರದ ಪರವಿಲ್ಲ ಎಂದು ಒತ್ತಿ ಹೇಳಿದರು.

‘ನಮ್ಮೊಂದಿಗೆ ಮಾತುಕತೆಗೆ ಬರುವಂತೆ ರೈತರ ಮನವೊಲಿಸುವುದೇ ಸಮಿತಿಯ ಪಾಲಿಗೆ ದೊಡ್ಡ ಸವಾಲು ಆಗಿದೆ. ನಮ್ಮ ಅತ್ಯುತ್ತಮ ಪ್ರಯತ್ನಗಳನ್ನು ಮಾಡುತ್ತೇವೆ ’ಎಂದರು.

 ರೈತರು ಮತ್ತು ಇತರ ಪಾಲುದಾರರೊಂದಿಗೆ ಮೊದಲ ಸುತ್ತಿನ ಸಮಾಲೋಚನೆಗಳನ್ನು ಗುರುವಾರ ನಡೆಸಲು ನಿಗದಿಗೊಳಿಸಲಾಗಿದೆ ಎಂದು ಅವರು ತಿಳಿಸಿದರು.

‘ನಮ್ಮೊಂದಿಗೆ ಮಾತನಾಡಿ. ನಾವು ನಿಮ್ಮ ಅಹವಾಲುಗಳನ್ನು ಆಲಿಸಿ,ನಿಮ್ಮ ಅಭಿಪ್ರಾಯಗಳನ್ನು ನ್ಯಾಯಾಲಯದ ಮುಂದಿಡುತ್ತೇವೆ’ ಎಂದು ಅವರು ಈ ಸಂದರ್ಭದಲ್ಲಿ ರೈತರನ್ನು ಕೋರಿಕೊಂಡರು.

ಕೃಷಿ ಆರ್ಥಿಕ ತಜ್ಞರಾದ ಅಶೋಕ್ ಗುಲಾಟಿ ಮತ್ತು ಪ್ರಮೋದ್ ಕುಮಾರ್ ಜೋಶಿ ಅವರು ಸಮಿತಿಯ ಇತರ ಸದಸ್ಯರಾಗಿದ್ದಾರೆ. ಸರ್ವೋಚ್ಚ ನ್ಯಾಯಾಲಯದಿಂದ ಹೆಸರಿಸಲಾಗಿದ್ದ ಭಾರತೀಯ ಕಿಸಾನ ಯೂನಿಯನ್ ಅಧ್ಯಕ್ಷ ಭೂಪಿಂದರ್ ಸಿಂಗ್ ಮಾನ್ ಅವರು ತಾನು ರೈತರು ಮತ್ತು ಪಂಜಾಬನ್ನು ಬೆಂಬಲಿಸಿ ಸಮಿತಿಯ ಸದಸ್ಯತ್ವವನ್ನು ತೊರೆಯುತ್ತಿರುವುದಾಗಿ ಕಳೆದ ವಾರ ಪ್ರಕಟಿಸಿದ್ದರು. ತಾನು ಈ ಹಿಂದೆ ತಳೆದಿದ್ದ ಕೃಷಿ ಕಾನೂನುಗಳ ಪರ ನಿಲುವಿನ ವಿರುದ್ಧ ಪ್ರತಿಭಟನೆಯ ಹಿನ್ನೆಲೆಯಲ್ಲಿ ಮಾನ್ ಈ ನಿರ್ಧಾರವನ್ನು ಕೈಗೊಂಡಿದ್ದರು.

 ಮಾನ್ ಬದಲಿಗೆ ಬೇರೆ ಯಾರನ್ನಾದರೂ ನೇಮಿಸಲಾಗುವುದೇ ಎಂಬ ಸುದ್ದಿಗಾರರ ಪ್ರಶ್ನೆಗೆ, ಸಮಿತಿಯನ್ನು ಸರ್ವೋಚ್ಚ ನ್ಯಾಯಾಲಯವು ರಚಿಸಿದೆ ಮತ್ತು ಯಾರನ್ನು ನೇಮಿಸಬೇಕು ಎನ್ನುವುದು ಅದಕ್ಕೆ ಬಿಟ್ಟ ವಿಷಯವಾಗಿದೆ ಎಂದು ಉತ್ತರಿಸಿದರು.

 ಸಮಿತಿ ಸದಸ್ಯರ ಆಯ್ಕೆ ಸಮರ್ಥಿಸಿಕೊಂಡ ಸಿಜೆಐ

 ಸರ್ವೋಚ್ಚ ನ್ಯಾಯಾಲಯವು ನೇಮಿಸಿರುವ ಸಮಿತಿಯ ಸದಸ್ಯರು ನೂತನ ಕೃಷಿ ಕಾನೂನುಗಳ ಪರವಾಗಿದ್ದಾರೆ ಎಂಬ ರೈತರ ದೂರುಗಳ ನಡುವೆಯೇ ಭಾರತದ ಮುಖ್ಯ ನ್ಯಾಯಾಧೀಶ (ಸಿಜೆಐ) ಎಸ್.ಎ.ಬೋಬ್ಡೆ ಅವರು,ಸಮಿತಿಯ ಸದಸ್ಯರು ಆಯ್ಕೆಗೆ ಮುನ್ನ ಕೃಷಿ ಕಾನೂನುಗಳ ಬಗ್ಗೆ ವ್ಯಕ್ತಪಡಿಸಿದ್ದ ಅಭಿಪ್ರಾಯಗಳು ಅವರ ಅನರ್ಹತೆಗೆ ಕಾರಣವಾಗುವುದಿಲ್ಲ ಮತ್ತು ಅವರ ಅಭಿಪ್ರಾಯಗಳು ಬದಲಾಗಬಹುದು ಎಂದು ಮಂಗಳವಾರ ಹೇಳಿರುವುದನ್ನು ಸುದ್ದಿಸಂಸ್ಥೆಯು ಉಲ್ಲೇಖಿಸಿದೆ.

ಕಾನೂನನ್ನು ಅರ್ಥ ಮಾಡಿಕೊಳ್ಳುವಲ್ಲಿ ಕೆಲವು ಗೊಂದಲಗಳಾಗಿವೆ. ಯಾವುದೇ ವ್ಯಕ್ತಿ ಸಮಿತಿಯ ಸದಸ್ಯನಾಗುವ ಮುನ್ನ ಒಂದು ಅಭಿಪ್ರಾಯವನ್ನು ಹೊಂದಿರಬಹದು,ಆದರೆ ಅದು ಬದಲಾಗಬಹುದು. ಇಂತಹ ವ್ಯಕ್ತಿಗಳು ಸಮಿತಿಯ ಸದಸ್ಯರಾಗಬಾರದು ಎಂದೇನಿಲ್ಲ ಎಂದು ನ್ಯಾ.ಬೋಬ್ಡೆ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News