2 ವರ್ಷದಲ್ಲಿ ಹೆಜಮಾಡಿ ಬಂದರು ಬಳಕೆಗೆ ಸಿದ್ಧ: ಸಿಎಂ ಯಡಿಯೂರಪ್ಪ

Update: 2021-01-19 14:30 GMT

ಪಡುಬಿದ್ರಿ, ಜ.19: ಕಳೆದ ನಾಲ್ಕು ದಶಕಗಳಿಗೂ ಅಧಿಕ ಸಮಯದಿಂದ ಮೀನುಗಾರರ ಪ್ರಮುಖ ಬೇಡಿಕೆಯಾಗಿದ್ದರೂ ನೆನೆಗುದಿಗೆ ಬಿದ್ದಿದ್ದ ಹೆಜಮಾಡಿ ಕೋಡಿಯ ಬಂದರು ಕಾಮಗಾರಿ ಎರಡು ವರ್ಷಗಳಲ್ಲಿ ಪೂರ್ಣಗೊಂಡು ಮೀನುಗಾರರ ಬಳಕೆಗೆ ಮುಕ್ತವಾಗಲಿದೆ. ಇದಕ್ಕೆ ಯಾವುದೇ ರೀತಿಯಲ್ಲಿ ಹಣಕಾಸಿನ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ಹೆಜಮಾಡಿ ಕೋಡಿಯಲ್ಲಿ ಸುಮಾರು 180.84 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಸರ್ವಋತು ಮೀನುಗಾರಿಕಾ ಬಂದರಿಗೆ ಮಂಗಳವಾರ ಬೆಳಗ್ಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡುತಿದ್ದರು.

ಹೆಜಮಾಡಿ ಕೋಡಿಯಲ್ಲಿ ಬಂದರು ನಿರ್ಮಾಣದಿಂದ ಮಲ್ಪೆ ಬಂದರಿನಲ್ಲಿ ಈಗಿರುವ ಮೀನುಗಾರಿಕಾ ಬೋಟು ಹಾಗೂ ದೋಣಿಗಳ ದಟ್ಟಣೆ ಕಡಿಮೆ ಯಾಗಲಿದೆ. ಇದರಿಂದ ಮೀನುಗಾರರಿಗೆ ಸುರಕ್ಷಿತ ಮೀನುಗಾರಿಕೆ ನಡೆಸಲು ಅನುಕೂಲಕರ ವಾತಾವರಣ ಉಂಟಾಗಲಿದೆ ಎಂಬ ವಿಶ್ವಾಸ ವನ್ನು ಅವರು ವ್ಯಕ್ತಪಡಿಸಿದರು.

ಹೆಜಮಾಡಿ ಕೋಡಿ ಬಂದರು ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರಗಳ ಜಂಟಿ ಸಹಯೋಗದಲ್ಲಿ ನಿರ್ಮಾಣಗೊಳ್ಳುತ್ತಿದೆ. ಇದರಲ್ಲಿ ಕೇಂದ್ರದ ಪಾಲು 69.30 ಕೋಟಿ ರೂ.ಗಳಾದರೆ, ರಾಜ್ಯ ಉಳಿದ 111.50 ಕೋಟಿ ರೂ.ಗಳನ್ನು ನೀಡಲಿದೆ. ಕೇಂದ್ರದಿಂದ ಮೊದಲ ಕಂತಾಗಿ 13.80 ಕೋಟಿ ರೂ. ಈಗಾಗಲೇ ಬಿಡುಗಡೆಯಾಗಿದೆ ಎಂದ ಮುಖ್ಯಮಂತ್ರಿಗಳು, ಕಾಮಗಾರಿಯ ಗುಣಮಟ್ಟದಲ್ಲಿ ಯಾವುದೇ ರಾಜಿ ಹಾಗೂ ವಿಳಂಬಕ್ಕೆ ಅವಕಾಶವಿಲ್ಲದಂತೆ ನಡೆಸಲು ಸಂಬಂಧಿತ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದರು.

ಆರ್ಥಿಕ ಪ್ರಗತಿಗೆ ಮೀನುಗಾರಿಕೆ: ಮೀನುಗಾರಿಕೆಯು ರಾಜ್ಯದ ಆರ್ಥಿಕ ಪ್ರಗತಿಯಲ್ಲಿ ಹೆಚ್ಚಿನ ಕೊಡುಗೆಯನ್ನು ನೀಡುತ್ತಿದೆ. ಕೈಗಾರಿಕೆ, ಉದ್ದಿಮೆಯ ಸ್ವರೂಪವನ್ನು ಹೊಂದಿರುವ ಮೀನುಗಾರಿಕೆಯ ಅಭಿವೃದ್ಧಿಗೆ ಕರ್ನಾಟಕ ರಾಜ್ಯ ಸರಕಾರ ಬದ್ಧವಾಗಿದೆ. ಮೀನುಗಾರಿಕೆಯು ಪೌಷ್ಟಿಕ ಆಹಾರ, ವಿದೇಶೀ ವಿನಿಮಯ ಹಾಗೂ ಉದ್ಯೋಗಾವಕಾಶಗಳಿಗೆ ಹೆಚ್ಚಿನ ಒತ್ತನ್ನು ನೀಡುತ್ತಿದೆ ಎಂದೂ ಯಡಿಯೂರಪ್ಪ ವಿವರಿಸಿದರು.

ರಾಜ್ಯವು 320ಕಿಮೀ ಕರಾವಳಿ ತೀರ ಹಾಗೂ 8000 ಹೆಕ್ಟೇರ್‌ಗೂ ಅಧಿಕ ಹಿನ್ನೀರಿನ ಪ್ರದೇಶವನ್ನು ಹೊಂದಿದೆ. ದೇಶದ ಆರ್ಥಿಕತೆಗೆ ಮೀನುಗಾರಿಕಾ ವಲಯ ಗಣನೀಯ ಪಾಲು ನೀಡುತ್ತಿದೆ. ಹೀಗಾಗಿ ಶ್ರಮಜೀವಿಗಳಾದ ಮೀನುಗಾರರ ಸುರಕ್ಷತೆಗೆ ರಾಜ್ಯ ಸರಕಾರ ವಿಶೇಷ ಒತ್ತು ನೀಡುತ್ತಿದೆ. ಅವರ ಹಾಗೂ ಕುಟುಂಬದ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಗಳನ್ನು ಉತ್ತುಮ ಪಡಿಸಲು ಮೀನುಗಾರರಿಗೆ ಅನೇಕ ಕಲ್ಯಾಣ ಕಾರ್ಯಕ್ರಮಗಳನ್ನು ಸರಕಾರವು ಅನುಷ್ಟಾನಗೊಳಿಸುತ್ತಿದೆ ಎಂದೂ ಮುಖ್ಯಮಂತ್ರಿಗಳು ಹೇಳಿದರು.

ಕರಾವಳಿಯಲ್ಲಿ ಯಾಂತ್ರೀಕೃತ ಮೀನುಗಾರಿಕೆಗೆ ಪ್ರೋತ್ಸಾಹ ನೀಡಲು ಪ್ರತೀ ವರ್ಷ ಸುಮಾರು 135 ಕೋಟಿ ರೂ.ವನ್ನು ಮೀನುಗಾರಿಕಾ ದೋಣಿಗೆ ಬಳಸುವ ಡಿಸೇಲ್‌ಗೆ ಸಹಾಯಧನವಾಗಿ ನೀಡಲಾಗುತ್ತಿದೆ.ಮುಂದಿನ ದಿನಗಳಲ್ಲಿ ಮೀನುಗಾರರಿಗೆ ಇನ್ನೂ ಹೆಚ್ಚಿನ ಅನುಕೂಲವನ್ನು ಮಾಡಿಕೊಡಲು ಶಕ್ತಿ ಮೀರಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಯಡಿಯೂರಪ್ಪ ಭರವಸೆ ನೀಡಿದರು.

ಸಂಸದೆ ಶೋಬಾ ಕರಂದ್ಲಾಜೆ ಮಾತನಾಡಿ, ಹೆಜಮಾಡಿ ಬಂದರು ಅತ್ಯಂತ ಸುಸಜ್ಜಿತ ಬಂದರಾಗಿ ಮೀನುಗಾರರಿಗೆ ಒದಗಿಬರಲಿದೆ. ಮುಂದೆ ಕೋಡಿ ಕನ್ಯಾಣ, ಹಂಗಾರಕಟ್ಟೆಗಳಲ್ಲಿ ಬಂದರು ನಿರ್ಮಾಣ ಹಾಗೂ ಮಲ್ಪೆಬಂದರಿನ ವಿಸ್ತರಣೆ ಮುಂದಿನ ಯೋಜನೆಯಾಗಿದೆ ಎಂದರು.

ಸಬಾಧ್ಯಕ್ಷತೆಯನ್ನು ವಹಿಸಿದ್ದ ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಮಾತನಾಡಿ, ಹೆಜಮಾಡಿ ಸರ್ವಋತು ಬಂದರು ಯೋಜನೆ ಕಾರ್ಯಗತ ಗೊಂಡಾಗ ಕ್ಷೇತ್ರದ ಹಾಗೂ ಜಿಲ್ಲೆಯ ಜನರ ಜೀನ ಸ್ಥಿತಿಗತಿ ಸುಧಾರಿಸಲಿದೆ ಎಂದರು.

ಹೆಜಮಾಡಿ ಬಂದರು ಯೋಜನೆಯ ವಿವರಗಳನ್ನು ತಿಳಿಸಿದ ರಾಜ್ಯ ಬಂದರು ಮತ್ತು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶೀಘ್ರದಲ್ಲೇ ರಾಜ್ಯದ ಸುಮಾರು 22,000 ಮೀನುಗಾರಿಕಾ ಬೋಟುಗಳಲ್ಲಿರುವ ಚೀನಿ ನಿರ್ಮಿತ ಯಂತ್ರಗಳನ್ನು ಬದಲಿಸಿ ಭಾರತದಲ್ಲೇ ನಿರ್ಮಾಣಗೊಂಡ ಇಂಜಿನ್‌ನ್ನು ಅಳವಡಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಮೀನುಗಾರಿಕೆಯಲ್ಲಿ ಈಗ ದೇಶದಲ್ಲಿ 4ನೇ ಸ್ಥಾನದಲ್ಲಿರುವ ಕರ್ನಾಟಕವನ್ನು ಇನ್ನು ಎರಡು ವರ್ಷಗಳಲ್ಲಿ ಮೊದಲ ಸ್ಥಾನಕ್ಕೇರಿಸುವ ಗುರಿ ಹೊಂದಲಾಗಿದೆ ಎಂದರು.

ಶಾಸಕರಾದ ರಘುಪತಿ ಭಟ್, ಉಮಾನಾಥ ಕೋಟ್ಯಾನ್, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಜೀವರಾಜ್, ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಕಾಪು ನಿತಿನ್ ಕುಮಾರ್, ದ.ಕ. ಉಡುಪಿ ಸಹಕಾರಿ ಮೀನು ಮಾರಾಟ ಮಹಾ ಮಂಡಲದ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷ ಸುಮಿತ್ ಶೆಟ್ಟಿ, ಸದಸ್ಯ ಶಶಿಕಾಂತ್ ಪಡುಬಿದ್ರಿ, ತಾಪಂ ಅಧ್ಯಕ್ಷೆ ಶಶಿಪ್ರಬಾ ಶೆಟ್ಟಿ, ಮೀನುಗಾರ ಮುಖಂಡರಾದ ಡಾ. ಜಿ. ಶಂಕರ್, ಆನಂದ ಸಿ. ಕುಂದರ್, ಸದಾಶಿವ ಕೋಟ್ಯಾನ್, ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್, ಉಡುಪಿ ಜಿಪಂ ಸಿಇಓ ಡಾ. ವೈ. ನವೀನ್ ಟ್, ಮೀನುಗಾರಿಕಾ ನಿರ್ದೇಶಕ ರಾಮಾಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

ಸಭೆಯಲ್ಲಿ ಮತ್ಸ್ಯಾಶ್ರಯ, ಮೀನುಗಾರರ ಸಂಕಷ್ಟ ನಿಧಿ ಹಾಗೂ ಬಾಗ್ಯಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಚೆಕ್ಗಳನ್ನು ವಿತರಿಸಿದರು.

ಕೃಷಿ ಹಾಗೂ ಮೀನುಗಾರಿಕಾ ಇಲಾಖೆಯ ಮುಖ್ಯ ಅಪರ ಕಾರ್ಯದರ್ಶಿ ಡಾ.ಜಿ.ಕಲ್ಪನಾ ಸ್ವಾಗತಿಸಿದರು. ನಾಗರಾಜ್ ಜಿ. ಎಸ್. ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News