×
Ad

ಮಾಧ್ಯಮಗಳಿಂದ ವಾಕ್, ಅಭಿವ್ಯಕ್ತಿ ಸ್ವಾತಂತ್ರ್ಯದ ದುರ್ಬಳಕೆ: ಬಾಂಬೆ ಹೈಕೋರ್ಟ್ ಕಳವಳ

Update: 2021-01-19 21:28 IST

ಹೊಸದಿಲ್ಲಿ,ಜ.21: ವಾಕ್ ಸ್ವಾತಂತ್ರ್ಯ ಹಾಗೂ ಅಭಿವ್ಯಕ್ತಿ ಸ್ವಾತಂತ್ರವು , ಇತ್ತೀಚಿನ ದಿನಗಳಲ್ಲಿ ಅತ್ಯಂತ ದುರ್ಬಳಕೆಯಾದ ಹಕ್ಕಾಗಿದೆ ಎಂದು ಬಾಂಬೆ ಹೈಕೋರ್ಟ್ ಸೋಮವಾರ ತಿಳಿಸಿದ್ದು, ಪ್ರಸಕ್ತ ಕ್ರಿಮಿನಲ್ ಪ್ರಕರಣಗಳ ಕುರಿತಾದ ಮಾಧ್ಯಮಗಳ ವರದಿಗಾರಿಕೆಯನ್ನು ನಿಯಂತ್ರಿಸಲು ಮಾರ್ಗದರ್ಶಿ ಸೂತ್ರಗಳನ್ನು ಹೊರಡಿಸಿದೆ.

‘‘ ಸಂವಿಧಾನದ 19(1) ವಿಧಿಯಡಿ ಖಾತರಿಪಡಿಸಲಾದ ಹಕ್ಕು (ವಾಕ್ ಹಾಗೂ ಅಭಿವ್ಯಕ್ತಿ ಸ್ವಾತಂತ್ರ), ಇತ್ತೀಚಿನ ದಿನಗಳಲ್ಲಿ ಅತ್ಯಂತ ದುರ್ಬಳಕೆಯಾದ ಹಕ್ಕಾಗಿದೆಯೇ ಎಂಬ ಮಾತುಗಳು ನಮ್ಮ ಕಿವಿಗಳಲ್ಲಿ ಪ್ರತಿಧ್ವನಿಸುತ್ತವೆ. ನಮಗೆ ಕೂಡಾ ಹಾಗೆಂದೇ ಭಾಸವಾಗುತ್ತಿದೆ’’ ಎಂದು ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತಾ ಹಾಗೂ ಜಿ.ಎಸ್.ಕುಲಕರ್ಣಿ ಅವರನ್ನೊಳಗೊಂಡ ನ್ಯಾಯಪೀಠ ತಿಳಿಸಿದೆ.

ಬಾಲಿವುಡ್ ನಟ ಸುಶಾಂತ್‌ಸಿಂಗ್ ರಜಪೂತ್ ಅವರ ಅಸಹಜ ಸಾವಿನ ಪ್ರಕರಣದ ವಿಚಾರಣೆ ಕುರಿತಾಗಿ ಇಲೆಕ್ಟ್ರಾನಿಕ್ ಮಾಧ್ಯಮಗಳ ವಿವಾದಾತ್ಮಕ ವರದಿಗಳ್ನು ಪ್ರಶ್ನಿಸಿ, ಕಳೆದ ವರ್ಷ ಸಲ್ಲಿಕೆಯಾದ ಐದು ಸಾರ್ವಜನಿಕ ಹಿತಾಸಕ್ತಿಯ ಅರ್ಜಿಗಳ ವಿಚಾರಣೆಯನ್ನು ನಡೆಸುತ್ತಿರುವ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

  ಭಾರತದಲ್ಲಿ ಪತ್ರಿಕೆ, ಮಾಧ್ಯಮಗಳು ಲಕ್ಷಣ ರೇಖೆಯನ್ನು ದಾಟಿದ್ದ ಅಹಿತಕರ ಗತಕಾಲಗಳನ್ನು ಇತ್ತೀಚಿನ ವಿದ್ಯಮಾನಗಳು ನಮಗೆ ನೆನಪಿಸುತ್ತದೆ’’ಎಂದು ನ್ಯಾಯಾಧೀಶರು ಅಸಮಾಧಾನ ವ್ಯಕ್ತಪಡಿಸಿದರು.

 ವರದಿಗಾರಿಕೆಯ ಕ್ಷೇತ್ರದಲ್ಲಿ ತಮ್ಮ ಪ್ರತಿಸ್ಪರ್ಧಿಗಳನ್ನು ಮೀರಿಸಬೇಕೆಂಬ ಹಂಬಲವನ್ನು ತಣಿಸುವುದಕ್ಕಾಗಿ ಮಾಧ್ಯಮಗಳು ತಾವು ಪ್ರಕಟಿಸುವ ಯಾವುದೇ ವರದಿಯು ಆರೋಪಿಗಳ ಅಥವಾ ಸಾಕ್ಷಿಗಳ ಅಥವಾ ತನಿಖೆಗೆ ಸಂಬಂಧಿಸಿದ ಯಾವುದೇ ವ್ಯಕ್ತಿಗಳ ಹಿತಾಸಕ್ತಿಗಳಿಗೆ ಹಾನಿಯುಂಟು ಮಾಡಬಾರದು ಎಂದವರು ಅಭಿಪ್ರಾಯಿಸಿದರು.

ಕ್ರಿಮಿನಲ್ ಪ್ರಕರಣಗಳ ಕುರಿತಾದ ವರದಿಗಾರಿಕೆಗೆ ಹೊಸ ಮಾರ್ಗದರ್ಶಿ ಸೂತ್ರಗಳನ್ನು ಜಾರಿಗೊಳಿಸಿದ ನ್ಯಾಯಾಲಯವು, ವ್ಯಕ್ತಿಯ ಘನತೆಯನ್ನು ಆತ ಮೃತಪಟ್ಟ ನಂತರವೂ ಪತ್ರಕರ್ತರು ಅಥವಾ ವರದಿಗಾರರ ಕೃಪಾಶ್ರಯಕ್ಕೆ ಬಿಡಕೂಡದು ಎಂದು ನ್ಯಾಯಪೀಠ ಪ್ರತಿಪಾದಿಸಿತು.

 ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ಸಮಯದಲ್ಲಿ ‘ಮಾಧ್ಯಮಗಳು ವಿಚಾರಣೆ ನಡೆಸುವುದು’ ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ನ್ಯಾಯಾಲಯ ಆದೇಶಿಸಿತು ಹಾಗೂ ಕ್ರಿಮಿನಲ್ ಪ್ರಕರಣಗಳ ವಿಚಾರಣೆಗೆ ಮೊದಲೇ ತಾವಾಗಿಯೇ ವರದಿಗಳನ್ನು ಪ್ರಕಟಿಸುವುದರ ವಿರುದ್ಧವೂ ಅದು ಎಚ್ಚರಿಕೆ ನೀಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News