ನ್ಯಾಯಾಂಗ ನಿಂದನೆ ಆರೋಪ: ಕಂಗನಾ ವಿರುದ್ಧ ಬಾಂಬೆ ಹೈಕೋರ್ಟ್‌ಗೆ ಅರ್ಜಿ

Update: 2021-01-19 16:03 GMT

ಮುಂಬೈ,ಜ.19: ದೇಶದ್ರೋಹದ ಪ್ರಕರಣಕ್ಕೆ ಸಂಬಂಧಿಸಿ ಬಾಲಿವುಡ್ ನಟಿ ಕಂಗನಾ ರಾಣಾವತ್ ನ್ಯಾಯಾಲಯಕ್ಕೆ ನೀಡಿರುವ ಮುಚ್ಚಳಿಕೆಯನ್ನು ಉಲ್ಲಂಘಿಸಿದ್ದು, ಆಕೆಯ ವಿರುದ್ಧ ನ್ಯಾಯಾಂಗ ನಿಂದನೆಯ ಪ್ರಕರಣ ದಾಖಲಿಸಬೇಕೆಂದು ಕೋರಿ ಬಾಂಬೆ ಹೈಕೋರ್ಟ್‌ಗೆ ಸೋಮವಾರ ಅರ್ಜಿ ಸಲ್ಲಿಸಲಾಗಿದೆ.

ತನ್ನ ವಿರುದ್ಧದ ದಾಖಲಾಗಿರುವ ದೇಶದ್ರೋಹದ ಪ್ರಕರಣಕ್ಕೆ ಸಂಬಂಧಿಸಿ ಬಹಿರಂಗವಾಗಿ ತಾನು ಯಾವುದೇ ಹೇಳಿಕೆ ನೀಡುವುದಿಲ್ಲವೆಂದು ಕಂಗನಾ ಭರವಸೆ ನೀಡಿದ್ದರು. ಜನವರಿ 8ರಂದು ಪೊಲೀಸ್ ಠಾಣೆಯಲ್ಲಿ ಹೇಳಿಕೆಯನ್ನು ದಾಖಲಿಸಲು ತೆರಳುವ ಮುನ್ನ ಆಕೆ ಟ್ವಿಟ್ಟರ್‌ನಲ್ಲಿ ಪ್ರಕರಣದ ತನಿಖೆಯ ಕುರಿತಾಗಿ ವಿವಾದಾತ್ಮಕ ವಿಡಿಯೋವೊಂದನ್ನು ಪ್ರಸಾರ ಮಾಡಿದ್ದರು. ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಕ್ಕಾಗಿ ತನಗೆ ಮಾನಸಿಕವಾಗಿ ಚಿತ್ರಹಿಂಸೆ ನೀಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದರು.

ಬಾಲಿವುಡ್‌ನ ಕಾಸ್ಟಿಂಗ್(ತಾರಾಗಣ ಆಯ್ಕೆ) ನಿರ್ದೇಶಕ ಮುನಾವರ್ ಅಲಿ ಸಯ್ಯದ್ ಅವರು ಕಂಗನಾ ವಿರುದ್ಧ ನ್ಯಾಯಾಂಗ ನಿಂದನೆಯ ಆರೋಪ ಹೊರಿಸಿ, ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಕಂಗನಾ ಪೋಸ್ಟ್ ಮಾಡಿರುವ ವಿಡಿಯೋ, ಹೈಕೋರ್ಟ್ ಘನತೆ,ಗೌರವ ಹಾಗೂ ಪ್ರತಿಷ್ಠೆಗೆ ಮಾಡಿದ ಅವಮಾನವಾಗಿದ್ದು ಅದು 1971ರ ನ್ಯಾಯಾಂಗ ನಿಂದನೆಯ ಕಾಯ್ದೆ ಸೆಕ್ಷನ್ 2(ಬಿ) ಹಾಗೂ (ಸಿ)ಯ ವ್ಯಾಪ್ತಿಗೆ ಬರುತ್ತದೆ ಎಂದು ಸಯ್ಯದ್‌ಅರ್ಜಿಯಲ್ಲಿ ಆಪಾದಿಸಿದ್ದಾರೆ.

ದೇಶದ್ರೋಹದ ಪ್ರಕರಣದಲ್ಲಿ ಜನವರಿ 11ರಂದು ಬಾಂಬೆ ಹೈಕೋರ್ಟ್ ರಾಣಾವತ್ ಹಾಗೂ ಚಂಡೇಲ್‌ಗೆ ಮಧ್ಯಂತರ ಜಾಮೀನು ನೀಡಿತ್ತು. ಅವರ ವಿರುದ್ಧ ಯಾವುದೇ ದಂಡನಾತ್ಮಕ ಕ್ರಮ ಕೈಗೊಳ್ಳಕೂಡದೆಂದು ನ್ಯಾಯಾಲಯ ಮುಂಬೈ ಪೊಲೀಸರಿಗೆ ತಾಕೀತು ಮಾಡಿತ್ತು. ಸಾಮಾಜಿಕ ಜಾಲತಾಣಗಳ ಮೂಲಕ ಕಂಗನಾ ರಾಣಾವತ್‌ಹಾಗೂರಂಗೋಲಿ ಚಂಡೇಲ್ ದ್ವೇಷ ಹಾಗೂ ಕೋಮು ಉದ್ವಿಗ್ನತೆಯನ್ನು ಸೃಷ್ಟಿಸಲು ಯತ್ನಿಸುತ್ತಿದ್ದಾರೆಂಬ ಆರೋಪದಲ್ಲಿ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News