ಕೊರೋನ ವೈರಸ್ ಗೆ ಹೆದರಿ 3 ತಿಂಗಳು ವಿಮಾನ ನಿಲ್ದಾಣದಲ್ಲಿ ವಾಸಿಸುತ್ತಿದ್ದ ಭಾರತ ಮೂಲದ ವ್ಯಕ್ತಿಯ ಬಂಧನ

Update: 2021-01-19 16:42 GMT
 ಫೋಟೊ ಕೃಪೆ: twitter.com

ಲಾಸ್ ಏಂಜಲಿಸ್ (ಅಮೆರಿಕ), ಜ. 19: ಭಾರತೀಯ-ಅಮೆರಿಕನ್ ವ್ಯಕ್ತಿಯೊಬ್ಬರು ಕೊರೋನ ವೈರಸ್‌ಗೆ ಹೆದರಿ ಶಿಕಾಗೊದ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುಮಾರು ಮೂರು ತಿಂಗಳು ಯಾರಿಗೂ ಗೊತ್ತಾಗದಂತೆ ವಾಸಿಸಿರುವುದು ಕೊನೆಗೂ ಬೆಳಕಿಗೆ ಬಂದಿದೆ.

 ಕ್ಯಾಲಿಫೋರ್ನಿಯ ರಾಜ್ಯದ ಲಾಸ್ ಏಂಜಲಿಸ್ ನಿವಾಸಿಯಾಗಿರುವ 36 ವರ್ಷದ ಆದಿತ್ಯ ಸಿಂಗ್‌ರನ್ನು ಶನಿವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ‘ಶಿಕಾಗೊ ಟ್ರಿಬ್ಯೂನ್’ ರವಿವಾರ ವರದಿ ಮಾಡಿದೆ.

ಅವರು ಶಿಕಾಗೊದ ಒ’ಹೇರ್ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದ ರಕ್ಷಿತ ಪ್ರದೇಶವೊಂದರಲ್ಲಿ ಅಕ್ಟೋಬರ್ 19ರಿಂದ ವಾಸಿಸುತ್ತಿದ್ದರು. ಅವರು ಅಲ್ಲಿಗೆ ಅದೇ ದಿನ ಲಾಸ್ ಏಂಜಲಿಸ್‌ನಿಂದ ವಿಮಾನವೊಂದರಲ್ಲಿ ಬಂದಿದ್ದರು.

ಯುನೈಟೆಡ್ ಏರ್‌ಲೈನ್ಸ್‌ನ ಇಬ್ಬರು ಸಿಬ್ಬಂದಿಗೆ ಅನುಮಾನ ಬಂದು ಅವರು ಪೊಲೀಸರಿಗೆ ಮಾಹಿತಿ ನೀಡಿದರು.

ಆದಿತ್ಯ ಸಿಂಗ್ ಹೊಟೇಲ್ ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ನಿರುದ್ಯೋಗಿಯಾಗಿದ್ದಾರೆ.

ಕೊರೋನ ವೈರಸ್ ಹಿನ್ನೆಲೆಯಲ್ಲಿ, ಮನೆಗೆ ಹೋಗಲು ಹೆದರಿ ಅವರು ವಿಮಾನ ನಿಲ್ದಾಣದಲ್ಲೇ ವಾಸಿಸಿದ್ದಾರೆ ಎಂದು ಸಹಾಯಕ ಅಟಾರ್ನಿ ಕ್ಯಾತ್ಲೀನ್ ಹ್ಯಾಗರ್ಟಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News