ಮಧ್ಯಪ್ರದೇಶ: ‘ಲವ್ ಜಿಹಾದ್’ ಕಾಯ್ದೆ ಅಡಿ ಮೊದಲ ಬಂಧನ

Update: 2021-01-19 17:32 GMT

ಭೋಪಾಲ್, ಜ. 19: ಮಧ್ಯಪ್ರದೇಶದಲ್ಲಿ ಜಾರಿಗೆ ತರಲಾದ ನೂತನ ‘ಲವ್ ಜಿಹಾದ್’ ಕಾಯ್ದೆ ಅಡಿಯಲ್ಲಿ ಮೊದಲ ಬಾರಿಗೆ ಪೊಲೀಸರು ಮಂಗಳವಾರ 25 ವರ್ಷದ ಯುವಕನನ್ನು ಬಂಧಿಸಿದ್ದಾರೆ.

ಯುವಕ ತನ್ನ ಧರ್ಮವನ್ನು ಮರೆಮಾಚಿ ವಿವಾಹವಾಗುವ ಆಮಿಷವೊಡ್ಡಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಹಾಗೂ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಿ ಬರ್ವಾನಿ ಜಿಲ್ಲೆಯ ಮಹಿಳೆಯೋರ್ವರು ದೂರು ದಾಖಲಿಸಿದ ಬಳಿಕ ನೂತನವಾಗಿ ಜಾರಿಗೊಳಿಸಲಾದ ಮಧ್ಯಪ್ರದೇಶ ಧಾರ್ಮಿಕ ಸ್ವಾತಂತ್ರ ಆಧ್ಯಾದೇಶ-2020ರ ಅಡಿಯಲ್ಲಿ 25 ವರ್ಷದ ಯುವಕನನ್ನು ಬರ್ವಾನಿ ಪ್ರದೇಶದಿಂದ ಪೊಲೀಸರು ಬಂಧಿಸಿದ್ದಾರೆ.

‘‘22 ವರ್ಷದ ಮಹಿಳೆ ಸಲ್ಲಿಸಿದ ಲಿಖಿತ ದೂರಿನ ಆಧಾರದಲ್ಲಿ ಧಾರ್ಮಿಕ ಸ್ವಾತಂತ್ರ ಆಧ್ಯಾದೇಶದ ನಿಯಮದ ಅಡಿಯಲ್ಲಿ ಅತ್ಯಾಚಾರ ಆರೋಪದಲ್ಲಿ 25 ವರ್ಷದ ವ್ಯಕ್ತಿಯನ್ನು ಸೋಮವಾರ ಬಂಧಿಸಲಾಗಿದೆ’’ ಎಂದು ಬರ್ವಾನಿ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ರಾಜೇಶ್ ಯಾದವ್ ತಿಳಿಸಿದ್ದಾರೆ. ನೂತನ ಕಾಯ್ದೆ ಅಡಿಯಲ್ಲಿ ದಾಖಲಾಗುತ್ತಿರುವ ಮೊದಲ ಪ್ರಕರಣ ಇದಾಗಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News