ನಿಗಾವಣೆ ಕಾಯ್ದೆ: ಸುಪ್ರೀಂಕೋರ್ಟ್ ಮಹತ್ವದ ಆದೇಶ

Update: 2021-01-19 17:59 GMT

ಹೊಸದಿಲ್ಲಿ,ಜ.19: ಅಪರಾಧಿಗಳ ನಿಗಾವಣೆ ಕಾಯ್ದೆ (ಪಿಓ)ಯಡಿಯಲ್ಲಿ ಅಪರಾಧಿಗಳಿಗೆ ದೊರೆಯುವ ಸವಲತ್ತುಗಳು ಭಾರತೀಯ ದಂಡ ಸಂಹಿತೆಯಡಿ ಉಲ್ಲೇಖಿಸಲಾದ ಅಪರಾಧಗಳಿಗೆ ಕನಿಷ್ಠ ಶಿಕ್ಷೆಯನ್ನು ಕಡ್ಡಾಯಗೊಳಿಸುವ ನಿಯಮಗಳ ವ್ಯಾಪ್ತಿಯಿಂದ ಹೊರತಾಗಿಲ್ಲವೆಂದು ಸುಪ್ರೀಂಕೋರ್ಟ್ ಮಂಗಳವಾರ ಅಭಿಪ್ರಾಯಿಸಿದೆ.

ಅಪರಾಧ ಪ್ರಕರಣವೊಂದರಲ್ಲಿ ಆರೋಪಿಗಳಿಗೆ ಭಾರತೀಯ ದಂಡಸಂಹಿತೆಯ 397 ಸೆಕ್ಷನ್‌ನಡಿ ತಲಾ 7 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಆದರೆ ಪ್ರಕರಣ ಸುಪ್ರೀಂಕೋರ್ಟ್ ಮೆಟ್ಟಲೇರಿದಾಗ, ವಿವಾದವು ಸೌಹಾರ್ದಯುತವಾಗಿ ಬಗೆಹರಿದಿದ್ದು, 1958ರ ತಪ್ಪಿತಸ್ಥರ ನಿಗಾವಣೆ ಕಾಯ್ದೆಯಡಿ ತಮಗೆ ಶಿಕ್ಷೆಯಿಂದ ವಿನಾಯಿತಿ ನೀಡುವಂತೆ ಕೋರಿ ಆರೋಪಿಗಳು ಅರ್ಜಿ ಸಲ್ಲಿಸಿದ್ದರು. ಇದನ್ನು ಸರಕಾರವು ವಿರೋಧಿಸಿತ್ತು ಹಾಗೂ ಅವರಿಗೆ ಭಾರತೀಯ ದಂಡಸಂಹಿತೆಯ 397ನೇ ವಿಧಿಯಡಿ ಏಳು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿರುವುದನ್ನು ಸಮರ್ಥಿಸಿಕೊಂಡಿತ್ತು ಮತ್ತು ಶಿಕ್ಷೆಯ ಅವಧಿಯನ್ನು ಕಡಿಮೆಗೊಳಿಸದಂತೆ ನ್ಯಾಯಾಲಯವನ್ನು ಕೋರಿತ್ತು.

  ಅಪರಾಧಿಗಳು ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆಗೆ ಕಾರಣವಾಗುವಂತಹ ಅಪರಾಧಗಳನ್ನು ಎಸಗಿಲ್ಲವಾದ್ದರಿಂದ ಅವರು ತಪ್ಪಿತಸ್ಥರ ನಿಗಾವಣೆ ಕಾಯ್ದೆಯ ಸೆಕ್ಷನ್ 4ರ ವ್ಯಾಪ್ತಿಗೆ ಬರುವುದಿಲ್ಲವೆಂಬುದನ್ನು ನ್ಯಾಯಾಲಯ ಕೂಡಾ ಒಪ್ಪಿಕೊಂಡಿತ್ತು. ಅಲ್ಲದೆ ಅಪರಾಧ ಎಸಗಿದ ಸಂದರ್ಭದಲ್ಲಿ ಅವರು 21 ವರ್ಷಗಳಿಗಿಂತ ಕೆಳವಯಸ್ಸಿನವರಾಗಿದ್ದರೂ ಶಿಕ್ಷೆ ಘೋಷಣೆಯಾದಾಗ ಅವರ ವಯಸ್ಸು 21ನ್ನು ದಾಟಿತ್ತು. ಹೀಗಾಗಿ ಅವರಿಗೆ ಕಾಯ್ದೆಯ ಸೆಕ್ಷನ್ 4 ಕೂಡಾ ಅನ್ವಯವಾಗುವುದಿಲ್ಲವೆಂದು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಹಾಗೂ ಹೃಷಿಕೇಶ್ ರಾಯ್ ಅವರನ್ನೊಳಗೊಂಡ ನ್ಯಾಯಪೀಠ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News