ಬ್ರಿಟನ್: ಒಂದೇ ದಿನ 1610 ಕೊರೋನ ಸೋಂಕಿತರ ಸಾವು

Update: 2021-01-20 03:44 GMT

ಲಂಡನ್, ಜ.20: ಕೋವಿಡ್-19 ಸೋಂಕು 2020ರಲ್ಲಿ ಆರಂಭವಾದ ಬಳಿಕ ಇದೇ ಮೊದಲ ಬಾರಿಗೆ ಒಂದೇ ದಿನ ಗರಿಷ್ಠ ಸಂಖ್ಯೆಯ ಕೋವಿಡ್ ಸೋಂಕಿತರು ಬ್ರಿಟನ್‌ನಲ್ಲಿ ಮೃತಪಟ್ಟಿದ್ದಾರೆ. ಮಂಗಳವಾರ 1,610 ಮಂದಿ ಸೋಂಕಿಗೆ ಬಲಿಯಾಗಿದ್ದು ಇದುವರೆಗಿನ ದಾಖಲೆಯಾಗಿದೆ. ಆದರೆ ದೇಶದಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದೆ.

ಬ್ರಿಟನ್‌ನಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ 91,470ಕ್ಕೇರಿದ್ದು, ಮಂಗಳವಾರ 33,355 ಹೊಸ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 35 ಲಕ್ಷಕ್ಕೇರಿದೆ. ಆದರೆ ಸರಕಾರ ಘೋಷಿಸಿದ ಕಟ್ಟುನಿಟ್ಟಿನ ಲಾಕ್‌ಡೌನ್ ಕಾರಣದಿಂದಾಗಿ ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ದಾಖಲಾದ ಹೊಸ ಪ್ರಕರಣಗಳ ಸಂಖ್ಯೆ ಶೇಕಡ 22ರಷ್ಟು ಕಡಿಮೆಯಾಗಿದೆ.

ಕೊರೋನ ವೈರಸ್ ಸೋಂಕಿನ ಮೂರನೇ ಹಾಗೂ ಮಾರಕ ಅಲೆ ಬ್ರಿಟನ್‌ನಲ್ಲಿ ಕಾಣಿಸಿಕೊಂಡಿದೆ. ಹೊಸದಾಗಿ ಪತ್ತೆಯಾಗಿರುವ ಪ್ರಬೇಧವು ಹೆಚ್ಚು ಸೋಂಕುಕಾರಕ ಎನ್ನಲಾಗಿದೆ. ಕಳೆದ ಡಿಸೆಂಬರ್ ಕೊನೆಯ ವೇಳೆಗೆ ಬ್ರಿಟನ್‌ನ ಶೇಕಡ 12ರಷ್ಟು ಮಂದಿ ಸೋಂಕಿಗೆ ಒಳಗಾಗಿದ್ದಾರೆ ಎಂದು ಅಂದಾಜಿಸಲಾಗಿದೆ. ನವೆಂಬರ್ ಅಂತ್ಯದ ವೇಳೆಗೆ ಈ ಪ್ರಮಾಣ ಶೇಕಡ 9ರಷ್ಟಾಗಿತ್ತು.

ವೇಲ್ಸ್‌ನ ಪ್ರತಿ 10 ಮಂದಿಯ ಪೈಕಿ ಒಬ್ಬರು, ಉತ್ತರ ಐರ್ಲೆಂಡ್‌ನ 13 ಮಂದಿಯ ಪೈಕಿ ಒಬ್ಬರು ಹಾಗೂ ಸ್ಕಾಟ್ಲೆಂಡ್‌ನ 11 ಮಂದಿಯ ಪೈಕಿ ಒಬ್ಬರು ವೈರಸ್‌ಗೆ ತುತ್ತಾಗಿದ್ದಾರೆ ಎಂದು ರಾಷ್ಟ್ರೀಯ ಅಂಕಿ ಸಂಖ್ಯೆಗಳ ಕಚೇರಿ ಪ್ರಕಟಿಸಿದ ಅಂಕಿ ಅಂಶಗಳಿಂದ ತಿಳಿದುಬರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News