ವಾಷಿಂಗ್ಟನ್‌ಗೆ ತೆರಳುವ ಮುನ್ನ ಭಾವುಕರಾದ ಬೈಡೆನ್

Update: 2021-01-20 03:50 GMT

ವಾಷಿಂಗ್ಟನ್, ಜ.20: ಹುಟ್ಟೂರು ಡೆಲವೇರ್‌ಗೆ ತೆರಳಿ ನಾಲ್ಕು ವರ್ಷಗಳ ಬಳಿಕ ಜೋ ಬೈಡೆನ್ ವಾಷಿಂಗ್ಟನ್ ಡಿಸಿಗೆ ಮರಳಿದ್ದಾರೆ. ಭಾವನಾತ್ಮಕವಾಗಿ ವಿಭಜನೆಗೊಂಡಿರುವ ದೇಶವನ್ನು ಮತ್ತೆ ಒಗ್ಗೂಡಿಸುವ ಏಕತೆಯ ಸಂದೇಶದೊಂದಿಗೆ ಅಮೆರಿಕದ 46ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವ ಒಂದು ದಿನ ಮೊದಲು ಬೈಡೆನ್ ವಾಷಿಂಗ್ಟನ್ ತಲುಪಿದ್ದಾರೆ.

"ನಿಮ್ಮ ಮುಂದಿನ ಅಧ್ಯಕ್ಷ ಹಾಗೂ ಕಮಾಂಡರ್ ಇನ್ ಚೀಫ್ ಆಗುವ ಗೌರವ ನನಗೆ ಲಭಿಸಿದೆ" ಎಂದು 78 ವರ್ಷದ ಬೈಡೆನ್ ಅವರು ವಾಷಿಂಗ್ಟನ್ ಡಿಸಿಗೆ ತೆರಳುವ ಸಲುವಾಗಿ ಜಂಟಿ ವಾಯುಪಡೆ ವಾಯುನೆಲೆ ಆ್ಯಂಡ್ರೂಸ್‌ನಲ್ಲಿ ಖಾಸಗಿ ವಿಮಾನ ಏರುವ ಮುನ್ನ ಡೆಲೇವರ್ ಸಹನಿವಾಸಿಗಳಿಗೆ ಹೇಳಿದರು.

1973ರಲ್ಲಿ ಮೊಟ್ಟಮೊದಲ ಬಾರಿಗೆ ಅತ್ಯಂತ ಕಿರಿಯ ಸೆನೆಟ್ ಸದಸ್ಯರಾಗಿ ಡೆಲೇವರ್‌ನಿಂದ ಆಯ್ಕೆಯಾದ ಬಳಿಕ ಐದು ದಶಕಗಳ ಸಾರ್ವಜನಿಕ ಜೀವನದಲ್ಲಿ ತಾವು ದೇಶದ ಅಧ್ಯಕ್ಷರಾಗಿ ಹಾಗೂ ಭಾರತ ಮೂಲದ ಕಮಲಾ ಹ್ಯಾರಿಸ್ ಉಪಾಧ್ಯಕ್ಷರಾಗಿ ಆಧಿಕಾರ ಸ್ವೀಕರಿಸುತ್ತಿರುವುದು ಇತಿಹಾಸ ಎಂದು ಅವರು ಬಣ್ಣಿಸಿದ್ದಾರೆ.

"ನಾನು ಅಮೆರಿಕದ ಅಧ್ಯಕ್ಷನಾಗಿ ಮತ್ತು ದಕ್ಷಿಣ ಏಷ್ಯಾ ಮೂಲದ ಕಪ್ಪು ಮಹಿಳೆ ಉಪಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದು, ನಾನು ಹಾಗೂ ನಮ್ಮ ಕುಟುಂಬ ವಾಷಿಂಗ್ಟನ್‌ಗೆ ಮರಳಲಿದ್ದೇವೆ" ಎಂದು ಬೈಡೆನ್ ಭಾವುಕರಾಗಿ ನುಡಿದರು. ಹ್ಯಾರಿಸ್ (56) ಪ್ರಥಮ ಮಹಿಳಾ ಉಪಾಧ್ಯಕ್ಷೆಯಾಗಿದ್ದು, ಅಮೆರಿಕದ ಎರಡನೇ ಅತ್ಯಂತ ಪ್ರಭಾವಿ ಹುದ್ದೆಗೇರುತ್ತಿರುವ ಮೊಟ್ಟಮೊದಲ ಆಫ್ರಿಕನ್ ಅಮೆರಿಕನ್ ಮತ್ತು ಭಾರತೀಯ ಮೂಲದ ಮಹಿಳೆಯಾಗಿದ್ದಾರೆ.

ಭಾವನಾತ್ಮಕವಾಗಿ, ಸುರಿಯುತ್ತಿದ್ದ ಕಣ್ಣೀರನ್ನು ಹತ್ತಿಕ್ಕಿಕೊಂಡು ಮಾಡಿದ ಸಂಕ್ಷಿಪ್ತ ಭಾಷಣದಲ್ಲಿ ಬೈಡೆನ್, "ಇದು ಒಂದು ಭಾವನಾತ್ಮಕ ಕ್ಷಣ" ಎಂದು ಕಣ್ಣೀರು ಒರೆಸಿಕೊಂಡರು. "ನಮ್ಮ ವಾಷಿಂಗ್ಟನ್ ಪಯಣ ಆರಂಭವಾಗಿದ್ದು ಇಲ್ಲಿಂದ ಎನ್ನುವುದು ವೈಯಕ್ತಿಕವಾಗಿ ಭಾವನಾತ್ಮಕ ಅನುಭವ" ಎಂದರು.

12 ವರ್ಷಗಳ ಹಿಂದೆ ಕಪ್ಪುವರ್ಣದ ಬರಾಕ್ ಒಬಾಮಾ, ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದ ತಮ್ಮನ್ನು ರೈಲ್ವೆ ಪ್ಲಾಟ್‌ಫಾರಂನಲ್ಲಿ ಅಭಿನಂದಿಸಿದ್ದನ್ನು ನೆನಪಿಸಿಕೊಂಡ ಅವರು ಇದೀಗ ಉಪಾಧ್ಯಕ್ಷೆಯಾದ ದಕ್ಷಿಣ ಏಷ್ಯಾ ಮೂಲದ ಕಪ್ಪು ಮಹಿಳೆಯನ್ನು ಭೇಟಿ ಮಾಡಲು ತೆರಳುತ್ತಿದ್ದೇನೆ ಎಂದು ಬಣ್ಣಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News