ಅಧಿಕಾರದ ಕೊನೆಯ ದಿನದಂದು ತಮ್ಮ ಮಾಜಿ ರಾಜಕೀಯ ತಂತ್ರಜ್ಞ ಸಹಿತ 73 ಮಂದಿಗೆ ಕ್ಷಮಾದಾನ ನೀಡಿದ ಟ್ರಂಪ್

Update: 2021-01-20 16:01 GMT

ವಾಶಿಂಗ್ಟನ್, ಜ. 20: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತನ್ನ ಅಧಿಕಾರಾವಧಿಯ ಕೊನೆಯ ಗಂಟೆಗಳಲ್ಲಿ ತನ್ನ ಮಾಜಿ ಸಹಾಯಕ ಸ್ಟೀವ್ ಬ್ಯಾನನ್ ಸೇರಿದಂತೆ 73 ಮಂದಿಗೆ ಕ್ಷಮಾದಾನ ನೀಡಿದ್ದಾರೆ. ಆದರೆ ತನಗಾಗಲಿ, ತನ್ನ ಕುಟುಂಬ ಸದಸ್ಯರಿಗಾಗಲಿ ಅಥವಾ ವಕೀಲ ರೂಡಿ ಜಿಯುಲಿಯಾನಿಗಾಗಲಿ ಕ್ಷಮಾದಾನ ನೀಡಿಲ್ಲ.

ಕ್ಷಮಾದಾನ ಪಡೆದ ಹೆಚ್ಚಿನವರು ಟ್ರಂಪ್‌ರ ಸಹಾಯಕರು ಮತ್ತು ಬೆಂಬಲಿಗರಾಗಿದ್ದಾರೆ.

ಟ್ರಂಪ್ ತನಗಾಗಲಿ, ತನ್ನ ಕುಟುಂಬ ಸದಸ್ಯರಿಗಾಗಲಿ ಕ್ಷಮಾದಾನ ನೀಡಬಾರದು ಎಂಬುದಾಗಿ ಅವರ ಸಲಹೆಗಾರರು ಸಲಹೆ ನೀಡಿದ್ದರು ಎನ್ನಲಾಗಿದೆ. ಹಾಗೆ ಮಾಡಿದರೆ ತಾನು ತಪ್ಪು ಮಾಡಿದ್ದೇನೆ ಎನ್ನುವುದನ್ನು ಟ್ರಂಪ್ ಒಪ್ಪಿಕೊಂಡಂತೆ ಆಗುತ್ತದೆ ಎಂಬುದಾಗಿ ಅವರು ಎಚ್ಚರಿಸಿದ್ದರು ಎಂದು ಮೂಲಗಳು ‘ರಾಯ್ಟರ್ಸ್’ ಸುದ್ದಿ ಸಂಸ್ಥೆಗೆ ತಿಳಿಸಿವೆ.

ಟ್ರಂಪ್‌ರ 2016ರ ಚುನಾವಣಾ ಪ್ರಚಾರ ತಂಡದಲ್ಲಿ ಬ್ಯಾನನ್ ಮುಖ್ಯ ಸಲಹೆಗಾರರಾಗಿದ್ದರು. ಅಮೆರಿಕ-ಮೆಕ್ಸಿಕೊ ಗಡಿಯಲ್ಲಿ ಗೋಡೆ ಕಟ್ಟುವುದಕ್ಕಾಗಿ ಟ್ರಂಪ್‌ರ ಬೆಂಬಲಿಗರಿಂದಲೇ ಹಣ ಸುಲಿಗೆ ಮಾಡಿದ ಆರೋಪವನ್ನು ಅವರ ವಿರುದ್ಧ ಕಳೆದ ವರ್ಷ ಹೊರಿಸಲಾಗಿದೆ. ಆದರೆ, ಅವರು ತನ್ನ ತಪ್ಪನ್ನು ಒಪ್ಪಿಕೊಂಡಿಲ್ಲ.

ಟ್ರಂಪ್ ಪರವಾಗಿ ಹೆಚ್ಚಿನ ಪ್ರಮಾಣದಲ್ಲಿ ನಿಧಿ ಸಂಗ್ರಹ ಮಾಡಿದ್ದ ಎಲಿಯಟ್ ಬ್ರಾಯ್ಡಿಗೂ ಕ್ಷಮಾದಾನ ನೀಡಲಾಗಿದೆ. ವಿದೇಶಿ ಲಾಬಿ ಕಾನೂನುಗಳನ್ನು ಉಲ್ಲಂಘಿಸಿರುವುದನ್ನು ಎಲಿಯಟ್ ಕಳೆದ ವರ್ಷ ಒಪ್ಪಿಕೊಂಡಿದ್ದರು. ಭ್ರಷ್ಟಾಚಾರ ಪ್ರಕರಣದಲ್ಲಿ 28 ವರ್ಷಗಳ ಜೈಲು ಶಿಕ್ಷೆಗ ಗುರಿಯಾಗಿರುವ ಡೆಟ್ರಾಯಿಟ್‌ನ ಮಾಜಿ ಮೇಯರ್ ಕ್ವಾಮ್ ಕಿಲ್‌ಪ್ಯಾಟ್ರಿಕ್‌ಗೂ ಟ್ರಂಪ್ ಕ್ಷಮಾದಾನ ನೀಡಿದ್ದಾರೆ.

ಅವರು 67 ಮಂದಿಯ ಶಿಕ್ಷೆಯ ಪ್ರಮಾಣವನ್ನೂ ಕಡಿತಗೊಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News