ಕೃಷಿ ಕಾಯ್ದೆ ಕುರಿತ ಸಮಿತಿಗೆ ಯಾವುದೇ ನಿರ್ಧಾರ ಕೈಗೊಳ್ಳುವ ಅಧಿಕಾರವಿಲ್ಲ: ಸುಪ್ರೀಂಕೋರ್ಟ್

Update: 2021-01-20 18:50 GMT

ಹೊಸದಿಲ್ಲಿ, ಜ. 20: ವಿವಾದಾತ್ಮಕ ಮೂರು ಕೃಷಿ ಕಾಯ್ದೆಗಳ ಕುರಿತಂತೆ ರೈತರು ಹಾಗೂ ಕೇಂದ್ರ ಸರಕಾರದ ನಡುವಿನ ಬಿಕ್ಕಟ್ಟನ್ನು ಪರಿಹರಿಸಲು ಕಳೆದ ವಾರ ರೂಪಿಸಲಾದ ತಜ್ಞರ ಸಮಿತಿಯನ್ನು ಟೀಕಿಸಿರುವುದನ್ನು ಸುಪ್ರೀಂ ಕೋರ್ಟ್ ಬುಧವಾರ ತರಾಟೆಗೆ ತೆಗೆದುಕೊಂಡಿದ್ದು, ಕಾಯ್ದೆ ಬಗ್ಗೆ ನಿರ್ಧರಿಸಲು ಸಮಿತಿಗೆ ಯಾವುದೇ ಅಧಿಕಾರ ಇಲ್ಲ ಎಂದಿದೆ.

‘‘ಪ್ರತಿಯೊಬ್ಬರ ಅಭಿಪ್ರಾಯವನ್ನು ಆಲಿಸಲು ಹಾಗೂ ನಮಗೆ ವರದಿ ಸಲ್ಲಿಸಲು ನಾವು ಸಮಿತಿಗೆ ಅಧಿಕಾರ ನೀಡಿದ್ದೇವೆ. ಪಕ್ಷಪಾತದ ಪ್ರಶ್ನೆ ಎಲ್ಲಿದೆ? ಜನರನ್ನು ಬ್ರಾಂಡ್ ಮಾಡುವ ಹಾಗೂ ಅವರಿಗೆ ಕಳಂಕ ತರುವ, ಮುಖ್ಯವಾಗಿ ನ್ಯಾಯಾಲಯವನ್ನು ಸಂದೇಹಿಸುವ ಅಗತ್ಯ ಇಲ್ಲ’’ ಎಂದು ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೋಬ್ಡೆ ಬುಧವಾರ ಹೇಳಿದ್ದಾರೆ.

ಸಮಿತಿಯನ್ನು ಮರು ರೂಪಿಸುವಂತೆ ಕೋರಿದ ಮನವಿಯ ಕುರಿತು ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರಕಾರಕ್ಕೆ ಸೂಚಿಸಿತು. ಕೃಷಿ ಕಾಯ್ದೆಗಳನ್ನು ಹಿಂದೆಗೆಯುವಂತೆ ಆಗ್ರಹಿಸಿ ದಿಲ್ಲಿ ಗಡಿಯ ಸಮೀಪ ಸಾವಿರಾರು ರೈತರು ಪ್ರತಿಭಟನೆ ಮುಂದುವರಿಸಿದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಕಾಯ್ದೆಯ ಜಾರಿಯನ್ನು ತಡೆ ಹಿಡಿಯಬೇಕಾಗುತ್ತದೆ ಎಂದು ಕೇಂದ್ರ ಸರಕಾರಕ್ಕೆ ಈ ಹಿಂದೆ ಎಚ್ಚರಿಕೆ ನೀಡಿತ್ತು.

ಸಮಿತಿಯ ನಾಲ್ವರು ಸದಸ್ಯರು ಈ ಹಿಂದೆ ವಿವಾದಾತ್ಮಕ ಕಾಯ್ದೆಯ ಪರವಾಗಿ ನಿಲುವು ವ್ಯಕ್ತಪಡಿಸಿದ್ದಾರೆ ಎಂದು ಕಾಂಗ್ರೆಸ್ ಹಾಗೂ ಅಕಾಲಿ ದಳ ಸೇರಿದಂತೆ ಹಲವು ಪ್ರತಿಪಕ್ಷಗಳು ಹಾಗೂ ಪ್ರತಿಭಟನಾಕಾರರು ಆಕ್ಷೇಪ ವ್ಯಕ್ತಪಡಿಸಿದ್ದರು. ಸಮಿತಿಯ ಓರ್ವ ಸದಸ್ಯರಾಗಿರುವ ಭಾರತೀಯ ಕಿಸಾನ್ ಒಕ್ಕೂಟದ ಅಧ್ಯಕ್ಷ ಭೂಪಿಂದರ್ ಸಿಂಗ್ ಮಾನ್ ಅವರು ಸಮಿತಿಯಿಂದ ಹೊರಬಂದರು ಎಂದು ರೈತರ ಸಂಘಟನೆ ಕಿಸಾನ್ ಮಹಾಪಂಚಾಯತ್ ಇಂದು ವಿಚಾರಣೆ ವೇಳೆ ನ್ಯಾಯಾಲಯಕ್ಕೆ ತಿಳಿಸಿತು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ,‘‘ನೀವು ಯೋಚಿಸದೆ ಸಂದೇಹಿಸುತ್ತೀರಿ. ಕೆಲವರು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದೀರಿ. ಅವರು (ಸಮಿತಿಯ ತಜ್ಞರು) ಅನರ್ಹರೇ? ಮಾನ್ (ಭೂಪಿಂದರ್ ಸಿಂಗ್) ಕಾಯ್ದೆಯನ್ನು ಮಾರ್ಪಾಡು ಮಾಡಬೇಕು ಎಂದು ಕೋರಿದ್ದಾರೆ....ಆದರೆ, ಅವರು ಕಾಯ್ದೆಯ ಪರವಾಗಿ ಇದ್ದಾರೆ ಎಂದು ನೀವು ಹೇಳುತ್ತಿದ್ದೀರಿ’’ ಎಂದು ಹೇಳಿದ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೋಬ್ಡೆ, ಸಮಿತಿಯಲ್ಲಿರುವ ತಜ್ಞರು ಕೃಷಿ ಕ್ಷೇತ್ರದ ಬುದ್ದಿಶಾಲಿಗಳು ಎಂದಿದ್ದಾರೆ.

‘ಸಾರ್ವಜನಿಕರು ಹಾಗೂ ರೈತರ ಹಿಸಾತಕ್ತಿಯ ಹಿನ್ನೆಲೆಯಲ್ಲಿ ನಾವು ಈ ವಿಷಯಕ್ಕೆ ಅವಕಾಶ ನೀಡುತ್ತಿದ್ದೇವೆ. ನೀವು ಹಾಜರಾಗಲು ಬಯಸದೇ ಇದ್ದರೆ, ಹಾಜರಾಗಬೇಡಿ. ಆದರೆ, ಜನರನ್ನು ಬ್ರಾಂಡ್ ಮಾಡಬೇಡಿ. ನಾವು ಈ ಸಮಸ್ಯೆಗೆ ಪರಿಹಾರ ಹುಡುಕುತ್ತಿದ್ದೇವೆ. ಸಾರ್ವಜನಿಕ ಅಭಿಪ್ರಾಯ ಅತಿ ಮುಖ್ಯ. ಇದು ಫಲಿತಾಂಶಕ್ಕೆ ನಿರ್ಣಾಯಕವಾಗಲಿದೆ’’ ಎಂದು ನ್ಯಾಯಾಲಯ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News