ಮಹತ್ವದ ಸಾಧನೆಗೈದು ತಂದೆಯ ಆಸೆ ನೆರವೇರಿಸಿದ ಮುಹಮ್ಮದ್‌ ಸಿರಾಜ್‌

Update: 2021-01-20 08:48 GMT

ಹೈದರಾಬಾದ್,ಜ.20: ತಮ್ಮ ಮಗ ಕ್ರಿಕೆಟ್ ಆಟದಲ್ಲಿ ಉತ್ತುಂಗಕ್ಕೇರಬೇಕೆಂಬುದು ಕ್ರಿಕೆಟಿಗ ಮೊಹಮ್ಮದ್ ಸಿರಾಜ್  ಅವರ ತಂದೆ  ಮೊಹಮ್ಮದ್ ಗೌಸ್ ಅವರ ಹೆಬ್ಬಯಕೆಯಾಗಿತ್ತು. ಆದರೆ  ತಮ್ಮ ಮಗ ಆಸ್ಟ್ರೇಲಿಯಾ ವಿರುದ್ಧ ತನ್ನ ಚೊಚ್ಚಲ ಟೆಸ್ಟ್ ಪಂದ್ಯ ಆಟವಾಡಲು ಇನ್ನೇನು ಕೆಲವೇ ವಾರಗಳಿವೆ ಎನ್ನುವಾಗ ವೃತ್ತಿಯಲ್ಲಿ ಆಟೋ ಚಾಲಕರಾಗಿದ್ದ ಗೌಸ್ ಅವರು ನವೆಂಬರ್ 20ರಂದು ನಿಧನರಾಗಿದ್ದರು. 

ಸಿರಾಜ್ ಆಸ್ಟ್ರೇಲಿಯಾ ತಲುಪಿ ವಾರವಾಗುತ್ತಲೇ ತಮ್ಮ ತಂದೆಯ ನಿಧನದ ಸುದ್ದಿ ತಿಳಿದು  ಅತೀವ ದುಃಖಿತರಾಗಿದ್ದರೂ  ಕ್ರಿಕೆಟ್ ರಂಗದಲ್ಲಿ ತಮ್ಮ ಛಾಪು ಮೂಡಿಸಲೇಬೇಕೆಂಬ ಛಲ ಹಾಗೂ ತಂದೆಯ ಕನಸು ಈಡೇರಿಸಬೇಕೆಂಬ ಮಹದಾಸೆಯಿಂದ ದುಃಖವನ್ನು ಹತ್ತಿಕ್ಕಿಕೊಂಡು ಸಿರಾಜ್ ಆಸ್ಟ್ರೇಲಿಯಾದಲ್ಲಿಯೇ ಉಳಿದಿದ್ದರಲ್ಲದೆ ತಂದೆಯ ಅಂತ್ಯಕ್ರಿಯೆಯಲ್ಲಿ ಕೂಡ ಭಾಗಿಯಾಗಿರಲಿಲ್ಲ.

ಇದೀಗ ತಮ್ಮ ತಂದೆಯ ಬಯಕೆಯಂತೆಯೇ ಅವರು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಗರಿಷ್ಠ  13 ವಿಕೆಟ್ ಕಿತ್ತ ಬೌಲರ್ ಎಂಬ ಹೆಗ್ಗಳಿಕೆಯ ಜತೆಗೆ ಮಂಗಳವಾರದ ಗಬ್ಬಾ ಟೆಸ್ಟ್‍ನಲ್ಲಿಯೂ ಗರಿಷ್ಠ 5 ವಿಕೆಟ್ ಉರುಳಿಸಿ ಭಾರತದ ಐತಿಹಾಸಿಕ ಗೆಲುವಿಗೆ ತಮ್ಮ ದೊಡ್ಡ ಕಾಣಿಕೆ ನೀಡಿದ್ದಾರೆ. ಈ ಸುದ್ದಿ ತಿಳಿಯುತ್ತಲೇ ಸಿರಾಜ್ ಮನೆಯಿರುವ ಪ್ರದೇಶದ ಎಲ್ಲಾ ನಿವಾಸಿಗಳು ಸಂಭ್ರಮ ಪಟ್ಟಿದ್ದರು.

"ಸಿರಾಜ್ ಟೆಸ್ಟ್ ಪಂದ್ಯದಲ್ಲಿ ಭಾರತವನ್ನು ಪ್ರತಿನಿಧಿಸಬೇಕೆಂಬುದು ನಮ್ಮ ತಂದೆಯ ಕನಸಾಗಿತ್ತು. ತಮ್ಮ ಮಗ ಬಿಳಿ ಮತ್ತು ನೀಲಿ ಜರ್ಸಿ ಧರಿಸಿ ಕ್ರಿಕೆಟ್ ಮೈದಾನಕ್ಕಿಳಿಯಬೇಕು ಎಂದು ಅವರು ಬಯಸಿದ್ದರು" ಎಂದು ಸಿರಾಜ್ ಸೋದರ ಮುಹಮ್ಮದ್ ಇಸ್ಮಾಯಿಲ್ ಹೇಳುತ್ತಾರೆ.

"ಸಿರಾಜ್ ಆಡಿದ ಮೊದಲ ಪಂದ್ಯದಿಂದ ಹಿಡಿದು ಎಲ್ಲಾ ಪಂದ್ಯಗಳನ್ನು ನಾವು ಕುಟುಂಬದ ಸದಸ್ಯರು  ವೀಕ್ಷಿಸುತ್ತಿದ್ದೆವು, ಮನೆಯಲ್ಲಿ ಯಾವುದೇ ಸಂಭ್ರಮಾಚರಣೆ ನಡೆಸಿಲ್ಲ ಆದರೆ ನಮ್ಮ ಪ್ರದೇಶದ ಹಾಗೂ ನಗರದ ಜನರಂತೂ ಸಂಭ್ರಮ ಆಚರಿಸುತ್ತಿದ್ದಾರೆ,'' ಎಂದು ಅವರು ಹೇಳಿದರು.

ಇಪ್ಪತ್ತಾರು ವರ್ಷದ ಸಿರಾಜ್ ಅವರು ಕ್ರಿಕೆಟ್ ರಂಗದಲ್ಲಿ ಮೇಲೆ ಬರಲು ಸಹಾಯ ಮಾಡಿದವರಲ್ಲೊಬ್ಬರು ಚಾರ್ಮಿನಾರ್ ಕ್ರಿಕೆಟ್ ಕ್ಲಬ್ ಕಾರ್ಯದರ್ಶಿ ಮೊಹಮ್ಮದ್ ಮೆಹಬೂಬ್ ಅಹ್ಮದ್. 2016ರಲ್ಲಿ ತರಕಾರಿ ಮಾರಾಟಗಾರ ಕಲೀಂ ಎಂಬವರು ಸಿರಾಜ್ ಕುರಿತು ತಮ್ಮಲ್ಲಿ ಹೇಳಿದ ನಂತರ ಆತನಿಗೆ ಹೈದರಾಬಾದ್ ಕ್ರಿಕೆಟ್ ಅಸೋಸಿಯೇಶನ್‍ನ ಲೀಗ್ ಪಂದ್ಯದಲ್ಲಿ ಚಾರ್ಮಿನಾರ್ ಸಿಸಿಯಲ್ಲಿ ಮೊದಲ ಬಾರಿ  ಅವಕಾಶ ನೀಡಿದ್ದನ್ನು ಅವರು ನೆನಪಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News