ಐಸಿಸಿ ಟೆಸ್ಟ್ ರ‍್ಯಾಂಕಿಂಗ್: ರಿಷಭ್ ಪಂತ್, ಸಿರಾಜ್‍ಗೆ ಭಡ್ತಿ

Update: 2021-01-20 10:12 GMT

ಹೊಸದಿಲ್ಲಿ: ಆಸ್ಟ್ರೇಲಿಯದಲ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿಗಾಗಿ ನಡೆದ ಟೆಸ್ಟ್ ಸರಣಿ ಕೊನೆಗೊಂಡ ಮರುದಿನ ಬುಧವಾರ ಬಿಡುಗಡೆಯಾಗಿರುವ ಐಸಿಸಿ ಟೆಸ್ಟ್ ರ‍್ಯಾಂಕಿಂಗ್ ನಲ್ಲಿ ಭಾರತದ ನಾಯಕ ವಿರಾಟ್ ಕೊಹ್ಲಿ 4ನೇ ಸ್ಥಾನಕ್ಕೆ ಕುಸಿದಿದ್ದರೆ, ಆಸ್ಟ್ರೇಲಿಯದ ಲ್ಯಾಬುಶೇನ್ 3ನೇ ಸ್ಥಾನಕ್ಕೆ ಭಡ್ತಿ ಪಡೆದಿದ್ದಾರೆ. ಕಿವೀಸ್ ಬ್ಯಾಟ್ಸ್ ಮನ್ ವಿಲಿಯಮ್ಸನ್ ನಂ.1 ಸ್ಥಾನ ಉಳಿಸಿಕೊಂಡಿದ್ದಾರೆ. ಆಸ್ಟ್ರೇಲಿಯದ ಸ್ಟೀವನ್ ಸ್ಮಿತ್ 2ನೇ ಸ್ಥಾನದಲ್ಲಿದ್ದಾರೆ. 

ಭಾರತದ ವಿಕೆಟ್ ಕೀಪರ್-ಬ್ಯಾಟ್ಸ್ ಮನ್ ರಿಷಭ್ ಪಂತ್ ರ್ಯಾಂಕಿಂಗ್ ನಲ್ಲಿ ಹೆಚ್ಚು ಲಾಭ ಪಡೆದಿದ್ದಾರೆ. ಬ್ರಿಸ್ಬೇನ್ ಹಾಗೂ ಸಿಡ್ನಿ ಟೆಸ್ಟ್ ನಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಪಂತ್ ಜೀವನಶ್ರೇಷ್ಠ 13ನೇ ಸ್ಥಾನಕ್ಕೇರಿದರು. ಇದೀಗ ಅವರು ಅಗ್ರ ರ್ಯಾಂಕಿನಲ್ಲಿರುವ ಭಾರತದ ವಿಕೆಟ್ ಕೀಪರ್- ಬ್ಯಾಟ್ಸ್ ಮನ್ ಆಗಿದ್ದಾರೆ.

23ರ ಹರೆಯದ ಪಂತ್ ಸಿಡ್ನಿ ಹಾಗೂ ಬ್ರಿಸ್ಬೇನ್ ಟೆಸ್ಟ್ ನಲ್ಲಿ ಪಂದ್ಯವು ಭಾರತದ ಪರ ವಾಲಲು ನೆರವಾಗಿದ್ದರು. 3ನೇ ಟೆಸ್ಟ್ ನಲ್ಲಿ 97 ರನ್ ಗಳಿಸಿ ಪಂದ್ಯ ಡ್ರಾಗೊಳ್ಳಲು ನೆರವಾಗಿದ್ದರೆ, 4ನೇ ಟೆಸ್ಟ್ ನಲ್ಲಿ ಔಟಾಗದೆ 89 ರನ್ ಗಳಿಸಿ ಭಾರತವು 5ನೇ ದಿನದಾಟದಲ್ಲಿ 328 ರನ್ ಗುರಿ ಬೆನ್ನಟ್ಟಲು ನೆರವಾಗಿದ್ದರು.

ಸಿಡ್ನಿ ಟೆಸ್ಟ್ ನಲ್ಲಿ 2ನೇ ಇನಿಂಗ್ಸ್ ನಲ್ಲಿ 5 ವಿಕೆಟ್ ಗುಚ್ಚ ಸೇರಿದಂತೆ ಒಟ್ಟು 6 ವಿಕೆಟ್ ಪಡೆದಿದ್ದ ವೇಗದ ಬೌಲರ್ ಮುಹಮ್ಮದ್ ಸಿರಾಜ್ 32 ಸ್ಥಾನ ಭಡ್ತಿ ಪಡೆದು 45ನೇ ಸ್ಥಾನ ತಲುಪಿದ್ದಾರೆ. ಶುಭಮನ್ ಗಿಲ್ 47ನೇ ಸ್ಥಾನಕ್ಕೆ ಏರಿದರೆ, ಚೇತೇಶ್ವರ ಪೂಜಾರ 1 ಸ್ಥಾನ ಮೇಲಕ್ಕೇರಿ 7ನೇ ಸ್ಥಾನ ತಲುಪಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News