ಧಾರ್ಮಿಕ ಸ್ವಾತಂತ್ರ್ಯ ಅನುಭವಿಸಲು ಪ್ರತಿಯೊಬ್ಬರಿಗೂ ಸಮಾನ ಹಕ್ಕಿದೆ: ಅಲಹಾಬಾದ್‌ ಹೈಕೋರ್ಟ್‌

Update: 2021-01-20 10:25 GMT

ಅಲಹಾಬಾದ್,ಜ.20: "ಧಾರ್ಮಿಕ ಸ್ವಾತಂತ್ರ್ಯ ಅನುಭವಿಸಲು ಹಾಗೂ ಸಮಾಜ ವಿರೋಧಿ ಶಕ್ತಿಗಳ ಭಯವಿಲ್ಲದೆ ಶಾಂತಿಯುತವಾಗಿ ಜೀವಿಸಲು ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಹಕ್ಕಿದೆ"  ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ. ಉತ್ತರ ಪ್ರದೇಶದ ಕೌಶಂಬಿ ಜಿಲ್ಲೆಯ ಗ್ರಾಮವೊಂದರ ಖಬರ್ ಸ್ಥಾನದ ಜಾಗದ ಅಕ್ರಮ ಒತ್ತುವರಿ  ಕುರಿತಾದ ಅಪೀಲಿನ ಸಂಬಂಧ ತೀರ್ಪು ನೀಡುವ ವೇಳೆ ನ್ಯಾಯಾಲಯ ಮೇಲಿನಂತೆ ಹೇಳಿದೆ.

"ನಾಗರಿಕರ ಮೂಲಭೂತ ಹಾಗೂ ಸಾಂವಿಧಾನಿಕ ಹಕ್ಕುಗಳಿಗೆ ಅಪಾಯವಿದೆ ಎಂದು ತಿಳಿದಲ್ಲಿ ಈ ನಿಟ್ಟಿನಲ್ಲಿ ಹಸ್ತಕ್ಷೇಪ ನಡೆಸಿ ಸೂಕ್ತ ನಿರ್ದೇಶನಗಳನ್ನು ನೀಡಲು ಸಂವಿಧಾನದ 226ನೇ ವಿಧಿ  ನ್ಯಾಯಾಲಯಕ್ಕೆ ಅಧಿಕಾರ ನೀಡುತ್ತದೆ" ಎಂದು ಜಸ್ಟಿಸ್ ಜಯಂತ್ ಬ್ಯಾನರ್ಜಿ ಹಾಗೂ ಜಸ್ಟಿಸ್ ಸಂಜಯ್ ಯಾದವ್ ಅವರ ಪೀಠ ಹೇಳಿದೆ.

ಕೌಶಂಬಿ ಜಿಲ್ಲೆಯ ಬೋಂದ ಎಂಬ ಗ್ರಾಮದಲ್ಲಿರುವ ಖಬರ್ ಸ್ಥಾನದ ಅಕ್ರಮ ಒತ್ತುವರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಉತ್ತರ ಪ್ರದೇಶ ಸರಕಾರ ಹಾಗೂ ಇನ್ನಿತರ ಅಧಿಕಾರಿಗಳಿಗೆ ಆದೇಶಿಸಬೇಕೆಂದು ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ  ಸಲ್ಲಿಸಲಾಗಿತ್ತು. ಜತೆಗೆ ಇಲ್ಲಿ  ಆವರಣ ಗೋಡೆ ಕಟ್ಟಲು ಕೂಡ ಯಾವುದೇ ಅಡ್ಡಿಯುಂಟು ಮಾಡದಂತೆ ಕ್ರಮ ಕೈಗೊಳ್ಳುವಂತೆಯೂ ಕೋರಲಾಗಿತ್ತಲ್ಲದೆ ಈ ಪ್ರಕರಣದ ಪ್ರತಿವಾದಿಗಳು  ಖಬರ್ ಸ್ಥಾನದ ಮಧ್ಯ ಭಾಗವನ್ನು  ರಸ್ತೆಯಾಗಿ ಬಳಸುತ್ತಿದ್ದಾರೆಂದೂ ಹಾಗೂ ಅದನ್ನು ಪಂಚಾಯತ್ ಹಣ ಬಳಸಿ ಕಾಂಕ್ರಿಟೀಕರಣಗೊಳಿಸಲು ಯತ್ನಿಸುತ್ತಿದ್ದಾರೆಂದೂ  ಆರೋಪಿಸಲಾಗಿತ್ತು.

ನ್ಯಾಯಾಲಯ ತನ್ನ ಆದೇಶದಲ್ಲಿ ಖಬರ್ ಸ್ಥಾನ ಜಮೀನು ಒತ್ತುವರಿ ಯತ್ನಗಳನ್ನು ನಿಲ್ಲಿಸುವಂತೆ ಸೂಚಿಸಿದೆ. ಆವರಣ ಗೋಡೆ ನಿರ್ಮಿಸಲು  ಯಾರೂ ಅಡ್ಡಿ ಪಡಿಸಬಾರದು, ಖಬರಿಸ್ತಾನಕ್ಕೆ ಸಂಬಂಧಿಸಿದವರು ಅದರ ಗೇಟುಗಳಿಗೆ ಬೀಗ ಜಡಿಯಲು ಸ್ವತಂತ್ರರು ಹಾಗೂ ಖಬರಿಸ್ತಾನದ ಜಾಗವನ್ನು ರಸ್ತೆಯಾಗಿ ಬಳಸುವಂತಿಲ್ಲ ಎಂದೂ ಆದೇಶದಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News