ಸೇನಾ ಕಾರ್ಯಾಚರಣೆಯ ಅಧಿಕೃತ ರಹಸ್ಯ ಸೋರಿಕೆ ದೇಶದ್ರೋಹ: ಎ.ಕೆ. ಆ್ಯಂಟನಿ

Update: 2021-01-20 17:02 GMT

ಹೊಸದಿಲ್ಲಿ, ಜ. 20: ಸೇನಾ ಕಾರ್ಯಾಚರಣೆಗಳ ಅಧಿಕೃತ ರಹಸ್ಯವನ್ನು ಸೋರಿಕೆ ಮಾಡುವುದು ದೇಶದ್ರೋಹ ಹಾಗೂ ಇದರಲ್ಲಿ ಭಾಗಿಯಾದವರನ್ನು ಶಿಕ್ಷಿಸಬೇಕು ಎಂದು ಕಾಂಗ್ರೆಸ್ ನಾಯಕ ಎ.ಕೆ. ಆ್ಯಂಟನಿ ಬುಧವಾರ ಹೇಳಿದ್ದಾರೆ.

 ರಿಪಬ್ಲಿಕ್ ಟಿ.ವಿ.ಯ ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿ ಹಾಗೂ ಬ್ರಾಡ್‌ಕಾಸ್ಟ್ ಅಡಿಯನ್ಸ್ ರಿಸರ್ಚ್ ಕೌನ್ಸಿಲ್‌ನ ಮಾಜಿ ಮುಖ್ಯಸ್ಥ ಪಾರ್ಥೋ ದಾಸ್‌ಗುಪ್ತಾ ಅವರ ನಡುವಿನ ವ್ಯಾಟ್ಸ್ ಆ್ಯಪ್ ಚಾಟ್ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗಿರುವುದನ್ನು ಉಲ್ಲೇಖಿಸಿ ಎ.ಕೆ. ಆ್ಯಂಟನಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ನಾಯಕರಾದ ಗುಲಾಂ ನಬಿ ಆಝಾದ್, ಸುಶೀಲ್ ಕುಮಾರ್ ಶಿಂಧೆ ಹಾಗೂ ಸಲ್ಮಾನ್ ಖುರ್ಷಿದ್ ಅವರೊಂದಿಗೆ ಇಲ್ಲಿ ಸಂಯುಕ್ತ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಆ್ಯಂಟನಿ, ದೇಶ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾದವರು ಯಾವುದೇ ಕ್ಷಮೆಗೆ ಅರ್ಹರಲ್ಲ. 2019ರ ಬಾಲ್‌ಕೋಟ್ ವಾಯು ದಾಳಿ ಕುರಿತು ಮಾಹಿತಿ ಸೋರಿಕೆಯಾದ ಬಗ್ಗೆ ತನಿಖೆಗೆ ಕೇಂದ್ರ ಸರಕಾರ ಕೂಡಲೇ ಆದೇಶ ನೀಡಬೇಕು ಎಂದರು.

 ‘‘ಅಧಿಕೃತ ರಹಸ್ಯವನ್ನು ಸೋರಿಕೆ ಮಾಡುವುದು ಕ್ರಿಮಿನಲ್ ಚಟುವಟಿಕೆ. ಸೇನಾ ಕಾರ್ಯಾಚಣೆ, ರಾಷ್ಟ್ರೀಯ ಭದ್ರತೆಯ ವಿಷಯ, ಅತಿಸೂಕ್ಷ್ಮ ಸೇನಾ ಕಾರ್ಯಾಚರಣೆಗಳು, ಮುಖ್ಯವಾಗಿ ಸೇನಾ ದಾಳಿಯ ಕುರಿತ ಅಧಿಕೃತ ರಹಸ್ಯವನ್ನು ಸೋರಿಕೆ ಮಾಡುವುದು ದೇಶ ದ್ರೋಹ ಹಾಗೂ ದೇಶ ವಿರೋಧಿ ಕೃತ್ಯ. ಅವರನ್ನು ದೇಶದ್ರೋಹ ಹಾಗೂ ದೇಶ ವಿರೋಧಿ ಕೃತ್ಯಕ್ಕಾಗಿ ಶಿಕ್ಷಿಸಬೇಕು. ಅವರು ಕ್ಷಮೆಗೆ ಅರ್ಹರಲ್ಲ’’ ಎಂದು ಅವರು ಹೇಳಿದ್ದಾರೆ.

ಭಾರತದ ರಾಷ್ಟ್ರೀಯ ಭದ್ರತೆ ಎಂದಿಗೂ ಈ ರೀತಿ ರಾಜಿ ಮಾಡಿಕೊಳ್ಳಬಾರದು. ಪ್ರಧಾನ ಮಂತ್ರಿ, ಗೃಹ ಸಚಿವರು ಹಾಗೂ ಇತರರ ಉನ್ನತ ಕಚೇರಿಗಳು ಎಂದಿಗೂ ಈ ರೀತಿ ನಿರ್ಲಜ್ಜವಾಗಿ ರಾಜಿ ಮಾಡಿಕೊಳ್ಳಬಾರದು ಎಂದು ಅವರು ಹೇಳಿದ್ದಾರೆ.

 ದೇಶಕ್ಕೆ ಕಳಂಕ ತರುವ ಇಂತಹ ಕೃತ್ಯ ಎಸಗಿದ ಬಳಿಕ ಪ್ರಧಾನಿ, ಗೃಹ ಸಚಿವರು, ವಾಸ್ತವವಾಗಿ ಸಂಪೂರ್ಣ ಸರಕಾರ ತನ್ನ ಅಧಿಕಾರದಲ್ಲಿ ಮುಂದುವರಿಯಲು ಏನಾದರೂ ನೈತಿಕ, ರಾಜಕೀಯ, ಸಾಂವಿಧಾನಿಕ ಹಕ್ಕು ಇದೆಯೇ ಎಂದು ಅವರು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News