ವಿಷ ಸೇವಿಸಿ ಆತ್ಮಹತ್ಯೆಗೈದ ಪ್ರತಿಭಟನಾನಿರತ ರೈತ: ಡೆತ್ ನೋಟ್ ಪತ್ತೆ

Update: 2021-01-20 18:06 GMT

ಹೊಸದಿಲ್ಲಿ, ಜ. 20: ಇಲ್ಲಿನ ಟಿಕ್ರಿ ಗಡಿಯಲ್ಲಿ ವಿಷ ಪದಾರ್ಥ ಸೇವಿಸಿ ಗಂಭೀರಗೊಂಡಿದ್ದ ರೈತರೋರ್ವರು ಬುಧವಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತಪಟ್ಟ ರೈತನನ್ನು ಜೈ ಭಗವಾನ್ ರಾಣಾ (42) ಎಂದು ಗುರುತಿಸಲಾಗಿದೆ. ಇವರು ಹರ್ಯಾಣದ ರೋಹ್ಟಕ್ ಜಿಲ್ಲೆಯ ಪಾಕಸ್ಮಾ ಗ್ರಾಮದ ನಿವಾಸಿ. ರೈತರ ಪ್ರತಿಭಟನೆ ನಡೆಯುತ್ತಿರುವ ಟಿಕ್ರಿ ಗಡಿಯಲ್ಲಿ ಇವರು ಮಂಗಳವಾರ ಸಲ್ಫಾಸ್ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಚಿಂತಾಜನಕ ಸ್ಥಿತಿಯಲ್ಲಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಆತ್ಮಹತ್ಯಾ ಪತ್ರದಲ್ಲಿ ರಾಣಾ, ತಾನು ಸಣ್ಣ ರೈತ. ಕೇಂದ್ರ ಸರಕಾರದ ನೂತನ ಕೃಷಿ ಕಾಯ್ದೆಗಳ ವಿರುದ್ಧ ಹಲವು ರೈತರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.

‘‘ಇದು ಕೇವಲ ಎರಡರಿಂದ ಮೂರು ರಾಜ್ಯಗಳಿಗೆ ಸಂಬಂಧಿಸಿದ ವಿಷಯ ಎಂದು ಕೇಂದ್ರ ಸರಕಾರ ಹೇಳಿದೆ. ಆದರೆ, ಕಾಯ್ದೆಗಳ ವಿರುದ್ಧ ದೇಶಾದ್ಯಂತದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಖೇದನೀಯ ವಿಚಾರವೆಂದರೆ, ಇದು ಈಗ ಕೇವಲ ಚಳವಳಿ ಅಲ್ಲ, ಬದಲಾಗಿ ಸಮಸ್ಯೆಗಳ ಹೋರಾಟವಾಗಿದೆ. ಕೇಂದ್ರ ಸರಕಾರ ಹಾಗೂ ರೈತರ ನಡುವಿನ ಬಿಕ್ಕಟ್ಟು ಇನ್ನು ಪರಿಹಾರವಾಗಿಲ್ಲ’’ ಎಂದು ರಾಣಾ ಪತ್ರದಲ್ಲಿ ಹೇಳಿದ್ದಾರೆ.

 ವಿಷ ಪದಾರ್ಥ ಸೇವಿಸಿ ಅಸ್ವಸ್ಥಗೊಂಡ ರೈತನನ್ನು ಸಿಎಟಿ ಆ್ಯಂಬುಲೆನ್ಸ್ ಮೂಲಕ ಸಂಜಯ್ ಗಾಂಧಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿತ್ತು. ಆದರೆ, ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಉಪ ಆಯುಕ್ತ ಎ. ಕೋನ್ ತಿಳಿಸಿದ್ದಾರೆ.

 ಘಟನೆ ಕುರಿತಂತೆ ಸಿಆರ್‌ಪಿಸಿ ಅಡಿಯಲ್ಲಿ ಕಾನೂನು ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News