ರೈತರ ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ ಉಗ್ರಗಾಮಿಗಳು: ಬಿಜೆಪಿ ಸಂಸದೆ ಜಸ್‌ಕೌರ್ ಮೀನಾ

Update: 2021-01-21 05:29 GMT

ಜೈಪುರ: ರೈತರ ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ ಕೆಲ ಧರಣಿ ನಿರತರು ಉಗ್ರಗಾಮಿಗಳು ಎಂದು ಹೇಳಿಕೆ ನೀಡುವ ಮೂಲಕ ಬಿಜೆಪಿ ಸಂಸದೆ ಜಸ್‌ಕೌರ್ ಮೀನಾ ವಿವಾದ ಹುಟ್ಟುಹಾಕಿದ್ದಾರೆ. ಪಕ್ಷದ ರಾಜ್ಯ ಘಟಕ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ ವೀಡಿಯೊ ತುಣುಕಿನಲ್ಲಿ, ದೌಸಾ ಸಂಸದೆ ಜಸ್‌ಕೌರ್ ಮೀನಾ ಅವರು ನೂತನ ಕೃಷಿ ಮಾರುಕಟ್ಟೆ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರ ಬಗ್ಗೆ ಹೀಗೆ ಹೇಳುತ್ತಿರುವುದು ಕೇಳಿಸುತ್ತಿದೆ.

"ಉಗ್ರಗಾಮಿಗಳು ಅಲ್ಲಿ ಕುಳಿತಿದಿದ್ದಾರೆ ಮತ್ತು ಉಗ್ರರಲ್ಲಿ ಎಕೆ-47 ಬಂದೂಕುಗಳಿವೆ. ಅವರು ಖಲಿಸ್ತಾನ ಧ್ವಜ ನೆಟ್ಟಿದ್ದಾರೆ" ಎಂದು ಹೇಳುತ್ತಿರುವುದು ಕೇಳಿ ಬರುತ್ತದೆ. ಈ ಬಗ್ಗೆ ಪ್ರತಿಕ್ರಿಯೆಗೆ ಸಂಸದೆ ಲಭ್ಯರಿಲ್ಲ.

ಸಂಸದೆಯ ಈ ಹೇಳಿಕೆಯನ್ನು ಕಾಂಗ್ರೆಸ್ ಕಟುವಾಗಿ ಟೀಕಿಸಿದೆ. ಅವರಿಗೆ ಮತ ನೀಡಿದ ರಾಜಸ್ಥಾನ ಜನತೆಗೆ ಇದರಿಂದ ಅವಮಾನವಾಗಿದೆ ಎಂದು ಕಾಂಗ್ರೆಸ್ ಹೇಳಿದೆ.

ಬಿಜೆಪಿಯ ದೃಷ್ಟಿ ಕೇವಲ ಅಧಿಕಾರ ಪಡೆಯುವುದಕ್ಕೆ ಸೀಮಿತವಾಗಿದೆ. ಆ ಪಕ್ಷದ ಹಿರಿಯರು ಬ್ರಿಟಿಷರಿಂದ ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಲು ಕೂಡಾ ಬಯಸಿರಲಿಲ್ಲ ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಗೋವಿಂದ್ ಸಿಂಗ್ ದೊತಾಸ್ರಾ ಹೇಳಿದ್ದಾರೆ. ಬಿಜೆಪಿ ಸದಾ ರೈತ ವಿರೋಧಿ ಪಕ್ಷ ಎಂದು ಅವರು ಆಪಾದಿಸಿದ್ದಾರೆ.

ಆದರೆ ಸಂಸದೆಯ ಹೇಳಿಕೆಯನ್ನು ಬಿಜೆಪಿ ರಾಜ್ಯ ಘಟಕ ಸಮರ್ಥಿಸಿಕೊಂಡಿದ್ದು, "ಸಂಸದೆ ಮೀನಾ ಅವರ ಭಾವನೆಗಳು ತಪ್ಪಲ್ಲ. ರೈತ ಪ್ರತಿಭಟನೆಯಲ್ಲಿ ಪ್ರದರ್ಶನವಾಗುತ್ತಿರುವ ಧ್ವಜ ಹಾಗೂ ಕೂಗುತ್ತಿರುವ ಘೋಷಣೆಗಳು ತಪ್ಪು ಎಂದು ಹೇಳಿದೆ. ಕೆಲ ವ್ಯಕ್ತಿಗಳು ರೈತರ ಹೆಸರಿನಲ್ಲಿ ಪ್ರತಿಭಟನೆಯಲ್ಲಿ ತೊಡಗಿದ್ದಾರೆ" ಎಂದು ಬಿಜೆಪಿ ವಕ್ತಾರ ರಾಮ್‌ಲಾಲ್ ಶರ್ಮಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News