ವಿಮಾನ ನಿಲ್ದಾಣದಿಂದ ನೇರವಾಗಿ ಖಬರಸ್ಥಾನಕ್ಕೆ ತೆರಳಿ ತಂದೆ ಸಮಾಧಿ ಸಂದರ್ಶಿಸಿದ ಸಿರಾಜ್

Update: 2021-01-21 12:30 GMT

ಹೈದರಾಬಾದ್, ಜ.21: ಆಸ್ಟ್ರೇಲಿಯ ವಿರುದ್ಧ 2-1 ಅಂತರದಿಂದ ಟೆಸ್ಟ್ ಸರಣಿ ಜಯಿಸಿ ಇತಿಹಾಸ ನಿರ್ಮಿಸಿರುವ ಟೀಮ್ ಇಂಡಿಯಾ ಗುರುವಾರ ಬೆಳಗ್ಗೆ ತಾಯ್ನಾಡಿಗೆ ಆಗಮಿಸಿತು. ಎಲ್ಲ ಆಟಗಾರರು ತಮ್ಮ ಮನೆಗಳಿಗೆ ತೆರಳಿದರೆ, ವೇಗದ ಬೌಲರ್ ಮುಹಮ್ಮದ್ ಸಿರಾಜ್ ಮಾತ್ರ ಹೈದರಾಬಾದ್ ವಿಮಾನ ನಿಲ್ದಾಣದಿಂದ ನೇರವಾಗಿ ಖೈರ್ತಾಬಾದ್ ನಲ್ಲಿರುವ ಖಬರಸ್ಥಾನಕ್ಕೆ ತೆರಳಿ ತಂದೆಯ ಸಮಾಧಿ ಸಂದರ್ಶಿಸಿದರು.

ಶಂಶಾಬಾದ್ ನಲ್ಲಿರುವ ರಾಜೀವ್ ಗಾಂಧಿ ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ನಿಂದ ಸಿರಾಜ್ ಅವರು ನೇರವಾಗಿ ಖೈರ್ತಾಬಾದ್ ಗೆ ತೆರಳಿ ಅಗಲಿರುವ ತಂದೆಯ ಸಮಾಧಿಗೆ ಪುಷ್ಪಗಳನ್ನು ಅರ್ಪಿಸಿ ಪ್ರಾರ್ಥನೆ ಸಲ್ಲಿಸಿದರು. ಟೋಲಿ ಚೌಕದಲ್ಲಿರುವ ತನ್ನ ಮನೆಗೆ ಹೋಗುವ ಮೊದಲು ಕೆಲವು ಸಮಯ ಸಮಾಧಿ ಬಳಿ ಕಳೆದರು. ಸಿರಾಜ್ ಕಳೆದ 63 ದಿನಗಳ ಕಾಲ ತಂದೆಯ ನಿಧನದ ದುಃಖವನ್ನು ಅದುಮಿಟ್ಟುಕೊಂಡಿದ್ದರು.

ಸಿರಾಜ್ ಅವರ ತಂದೆ 53ರ ವಯಸ್ಸಿನ ಮುಹಮ್ಮದ್ ಗೌಸ್ ಶ್ವಾಸಕೋಶ ಸಂಬಂಧಿ ಸಮಸ್ಯೆಯಿಂದಾಗಿ ನವೆಂಬರ್ 20ರಂದು ನಿಧನರಾಗಿದ್ದರು. ಸಿರಾಜ್ ಭಾರತೀಯ ಕ್ರಿಕೆಟ್ ತಂಡದೊಂದಿಗೆ ಆಸ್ಟ್ರೇಲಿಯಕ್ಕೆ ತಲುಪಿ ವಾರ ಕಳೆಯುತ್ತಲೇ ಸಿರಾಜ್ ತಂದೆ ನಿಧನರಾಗಿದ್ದರು.

ಕೋವಿಡ್-19 ನಿರ್ಬಂಧಗಳಿದ್ದ ಕಾರಣ ತಂದೆಯ ಅಂತಿಮಕ್ರಿಯೆ ನೆರವೇರಿಸಲು ಭಾರತಕ್ಕೆ ವಾಪಸಾಗುವ ಬದಲು ತಂಡದೊಂದಿಗೆ ಉಳಿದಿದ್ದರು.

‘‘ನನ್ನ ಜೀವನದ ದೊಡ್ಡ ಬೆಂಬಲಿಗನೊಬ್ಬನನ್ನು ಕಳೆದುಕೊಂಡಿದ್ದೇನೆ. ಕ್ರಿಕೆಟ್ ಜೀವನದಲ್ಲಿ ಅವರು ನನಗೆ ಹೆಚ್ಚು ಬೆಂಬಲ ನೀಡಿದ್ದರು. ನನಗಿದು ದೊಡ್ಡ ನಷ್ಟ. ಅವರು ಈ ಜಗತ್ತಿನಲ್ಲಿ ಇರದಿದ್ದರೂ ನನ್ನೊಂದಿಗೆ ಸದಾ ಕಾಲ ಇರುತ್ತಾರೆ’’ ಎಂದು ಸಿರಾಜ್ ಹೇಳಿದರು.

‘‘ಓದಿನ ಕಡೆ ನಿರ್ಲಕ್ಷವಹಿಸುತ್ತಾ, ಕ್ರಿಕೆಟ್ ಆಡುತ್ತಾ ಸಮಯ ವ್ಯರ್ಥ ಮಾಡುತ್ತಿದ್ದ ಸಿರಾಜ್‌ಗೆ ನಾನು ಹಾಗೂ ನನ್ನ ತಾಯಿ ಗದರಿಸುತ್ತಿದ್ದೆವು. ನನ್ನ ತಂದೆ ಆತನಿಗೂ ಏನೂ ಹೇಳುತ್ತಿರಲಿಲ್ಲ. ಅವರು ಆತ ಕ್ರಿಕೆಟ್ ಆಡುವುದನ್ನು ಪ್ರೋತ್ಸಾಹಿಸುತ್ತಿದ್ದರು. ಚಿಂತಿಸಬೇಡ. ಆಟವಾಡಲು ನಿನಗೆ ಸಾಧ್ಯವಾದಷ್ಟು ಸಹಾಯ ಮಾಡುತ್ತೇನೆಂದು ಸಿರಾಜ್ ಗೆ ಹೇಳುತ್ತಿದ್ದರು. ತಂದೆಯವರ ನಿರ್ಧಾರ ಸರಿ ಎಂದು ಇಂದು ಈಗ ಅನಿಸುತ್ತಿದೆ’’ ಎಂದು ಸಿರಾಜ್ ಅವರ ಸಹೋದರ ಹೇಳಿದ್ದಾರೆ.

‘‘ಸಿರಾಜ್ ಇಂದು ಬೆಳಗ್ಗೆ 9 ಗಂಟೆಗೆ ಆಗಮಿಸಿದ್ದರು. ಆತ ವಿಮಾನ ನಿಲ್ದಾಣದಿಂದ ನೇರವಾಗಿ ಖಬರಸ್ಥಾನಕ್ಕೆ ತೆರಳಿದ. ಆತನ ತಂದೆ ಜೀವಂತ ಇರುತ್ತಿದ್ದರೆ, ಆಸ್ಟ್ರೇಲಿಯ ವಿರುದ್ಧ ಅವರದೇ ನೆಲದಲ್ಲಿ ಸಿರಾಜ್ ನೀಡಿದ್ದ ಅಮೋಘ ಪ್ರದರ್ಶನ ನೋಡಿ ಖುಷಿಪಡುತ್ತಿದ್ದರು. ಸಿರಾಜ್ ಭಾರತಕ್ಕೆ ವಾಪಸಾದ ತಕ್ಷಣ ತನ್ನ ತಂದೆಯನ್ನು ಆಲಿಂಗಿಸಿಕೊಂಡು, ತನ್ನ ಯಶೋಗಾಥೆಯನ್ನು ಹೇಳುತ್ತಿದ್ದ. ಆದರೆ, ಎಲ್ಲ ಯೋಜನೆ ತಲೆಕೆಳಗಾಯಿತು’’ಎಂದು ಸಿರಾಜ್ ಸ್ನೇಹಿತ ಮುಹಮ್ಮದ್ ಶಫಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News