ಚೀನಾ ನಿರ್ಮಿತ ಗ್ರಾಮದ ವಿರುದ್ಧ ಅರುಣಾಚಲ ಪ್ರದೇಶದಲ್ಲಿ ಭುಗಿಲೆದ್ದಿರುವ ಪ್ರತಿಭಟನೆ

Update: 2021-01-21 15:10 GMT

ಗುವಾಹಟಿ,ಜ.21: ಅರುಣಾಚಲ ಪ್ರದೇಶದಲ್ಲಿ ಚೀನಾ ನೂತನ ಗ್ರಾಮವೊಂದನ್ನು ನಿರ್ಮಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿದ ಬಳಿಕ ರಾಜ್ಯದ ಅಪ್ಪರ್ ಸುಬನಸಿರಿ ಜಿಲ್ಲೆಯಲ್ಲಿ ಪ್ರತಿಭಟನೆಗಳು ಭುಗಿಲೆದ್ದಿವೆ. ಗುರುವಾರ ಭಿತ್ತಿಪತ್ರಗಳೊಂದಿಗೆ ಜಾಥಾ ನಡೆಸಿದ ಸ್ಥಳೀಯರು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಪ್ರತಿಕೃತಿಗಳನ್ನು ದಹಿಸಿದರಲ್ಲದೆ ಭಾರತ ಪರ ಮತ್ತು ಚೀನಾ ವಿರೋಧಿ ಘೋಷಣೆಗಳನ್ನು ಕೂಗಿದರು.

ವಾಸ್ತವ ಗಡಿರೇಖೆಯಿಂದ ಸುಮಾರು 4.5 ಕಿ.ಮೀ.ನಷ್ಟು ಒಳಗೆ ಭಾರತದ ಭೂಪ್ರದೇಶದಲ್ಲಿ ಚೀನಾ ನೂತನ ಗ್ರಾಮವನ್ನು ನಿರ್ಮಿಸಿರುವುದನ್ನು ಮಾಧ್ಯಮಗಳು ಸೋಮವಾರ ವರದಿ ಮಾಡಿದ್ದವು. ಗ್ರಾಮದಲ್ಲಿ ಸುಮಾರು 101 ಮನೆಗಳಿರುವುದನ್ನು ಉಪಗ್ರಹ ಚಿತ್ರಗಳು ತೋರಿಸಿವೆ.

ಈ ಸ್ಥಳವು ಭಾರತದ ಭೂಪ್ರದೇಶವಾಗಿದ್ದರೂ 1959ರಿಂದಲೂ ಚೀನಾದ ನಿಯಂತ್ರಣದಲ್ಲಿದೆ. ಈ ಮೊದಲು ಚೀನಾದ ಮಿಲಿಟರಿ ಚೌಕಿಯೊಂದು ಅಲ್ಲಿತ್ತಾದರೂ,ಈಗ ಸಾವಿರಾರು ಜನರು ವಾಸ ಮಾಡಬಹುದಾದ ಪೂರ್ಣ ಪ್ರಮಾಣದ ಗ್ರಾಮವನ್ನು ನಿರ್ಮಿಸಲಾಗಿದೆ.

ತ್ಸಾರಿ ಚು ನದಿಯ ದಂಡೆಯಲ್ಲಿ ನಿರ್ಮಾಣಗೊಂಡಿರುವ ಈ ಗ್ರಾಮವು ಅಪ್ಪರ್ ಸುಬನಸಿರಿ ಜಿಲ್ಲೆಯಲ್ಲಿ ಸುದೀರ್ಘ ಸಮಯದಿಂದಲೂ ಭಾರತ ಮತ್ತು ಚೀನಾಗಳ ನಡುವೆ ವಿವಾದಕ್ಕೆ ಕಾರಣವಾಗಿರುವ ಪ್ರದೇಶದಲ್ಲಿದೆ.

ಗುರುವಾರ ದಾಪೊರಿಜೊ ಪಟ್ಟಣದಲ್ಲಿ ನಡೆದ ಪ್ರತಿಭಟನೆಯನ್ನು ಆಲ್ ಟಾಗಿನ್ ಯೂಥ್ ಆರ್ಗನೈಸೇಷನ್,ಆಲ್ ಗಿಬಾ ಸರ್ಕಲ್ ವಿಜಿಲೆನ್ಸ್ ಫೋರಮ್‌ನಂತಹ ಸಂಘಟನೆಗಳು ಆಯೋಜಿಸಿದ್ದು,ಯುವಜನರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಪ್ರತಿಭಟನಾಕಾರರು ಭಾರತ ಮಾತಾ ಕಿ ಜೈ,ನಾವು ಭಾರತೀಯರು, ಚೀನಾ ಗೋ ಬ್ಯಾಕ್ ಇತ್ಯಾದಿ ಘೋಷಣೆಗಳನ್ನು ಕೂಗಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News