ಬಿಜೆಪಿ ಆಡಳಿತದ ಎಲ್ಲ ರಾಜ್ಯಗಳಲ್ಲಿ ಪಾನ ನಿಷೇಧಕ್ಕೆ ಉಮಾ ಭಾರತಿ ಕರೆ, ಪಕ್ಷಾಧ್ಯಕ್ಷ ನಡ್ಡಾಗೆ ಮನವಿ

Update: 2021-01-21 16:06 GMT

ಹೊಸದಿಲ್ಲಿ,ಜ.21: ಪಕ್ಷವು ಆಡಳಿತದಲ್ಲಿರುವ ಎಲ್ಲ ರಾಜ್ಯಗಳಲ್ಲಿ ಪಾನನಿಷೇಧವನ್ನು ಹೇರುವಂತೆ ಹಿರಿಯ ಬಿಜೆಪಿ ನಾಯಕಿ ಉಮಾ ಭಾರತಿ ಅವರು ಗುರುವಾರ ಸರಣಿ ಟ್ವೀಟ್‌ಗಳಲ್ಲಿ ಪಕ್ಷಾಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.

ನೂತನ ಮದ್ಯದಂಗಡಿಗಳ ಆರಂಭಕ್ಕೆ ಅನುಮತಿಗಳನ್ನು ಮಂಜೂರು ಮಾಡುವಲ್ಲಿ ಮಧ್ಯಪ್ರದೇಶದ ಶಿವರಾಜ್ ಸಿಂಗ್ ಚೌಹಾಣ್ ಸರಕಾರದ ವಿಳಂಬ ಧೋರಣೆಯನ್ನು ಸ್ವಾಗತಿಸಿರುವ ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಕೇಂದ್ರ ಸಚಿವೆಯೂ ಆಗಿರುವ ಉಮಾ ಭಾರತಿ,ಮಧ್ಯಪ್ರದೇಶದಲ್ಲಿ ಮದ್ಯದಂಗಡಿಗಳ ಸಂಖ್ಯೆ ಹೆಚ್ಚಿಸುವ ಬಗ್ಗೆ ಸರಕಾರವು ಇನ್ನೂ ನಿರ್ಧರಿಸಿಲ್ಲ. ಈ ಬಗ್ಗೆ ಚೌಹಾಣ್ ಅವರು ನೀಡಿರುವ ಹೇಳಿಕೆಯು ಸ್ವಾಗತಾರ್ಹ ಕ್ರಮವಾಗಿದೆ ಎಂದಿದ್ದಾರೆ.

ಕೊರೋನ ವೈರಸ್ ಲಾಕ್‌ಡೌನ್ ಸಂದರ್ಭದಲ್ಲಿ ಹೆಚ್ಚುಕಡಿಮೆ ಪಾನನಿಷೇಧದ ಸ್ಥಿತಿಯಿತ್ತು. ಜನರು ಇತರ ಕಾರಣಗಳು ಮತ್ತು ಕೊರೋನಾದಿಂದ ಮೃತಪಟ್ಟಿದ್ದರು,ಆದರೆ ಮದ್ಯ ಸೇವಿಸಿ ಯಾರೂ ಸಾವನ್ನಪ್ಪಿರಲಿಲ್ಲ ಎಂದಿದ್ದಾರೆ. ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿ ವಿಷಪೂರಿತ ಮದ್ಯವನ್ನು ಸೇವಿಸಿ ಜನರು ಸಾಯುತ್ತಿರುವ ಇತ್ತೀಚಿನ ಘಟನೆಗಳನ್ನು ಬೆಟ್ಟು ಮಾಡಿರುವ ಅವರು,ಮದ್ಯಪಾನ ಮಾಡಿ ವಾಹನಗಳನ್ನು ಚಲಾಯಿಸುವುದರಿಂದ ಹೆಚ್ಚಿನ ರಸ್ತೆ ಅಪಘಾತಗಳು ಸಂಭವಿಸುತ್ತಿವೆ. ಮದ್ಯವು ಸಾವಿನ ಹರಿಕಾರನಾಗಿದ್ದರೂ ಮದ್ಯ ಮಾಫಿಯಾದ ದುರಾಸೆ ಮತ್ತು ಒತ್ತಡ ಪಾನನಿಷೇಧಕ್ಕೆ ಅವಕಾಶ ನೀಡುತ್ತಿಲ್ಲ ಎಂದಿದ್ದಾರೆ.

ಪಾನನಿಷೇಧದಿಂದ ಎಲ್ಲಿಯೂ ನಷ್ಟವಾಗಿಲ್ಲ. ಆದಾಯದಲ್ಲಿ ನಷ್ಟವನ್ನು ಬೇರೆ ರೀತಿಯಿಂದ ತುಂಬಿಕೊಳ್ಳಬಹುದು. ಆದರೆ ವಿಷಪೂರಿತ ಮದ್ಯ ಮಾರಾಟ,ಕೊಲೆಗಳು,ಅಪಘಾತಗಳು,ಎಳೆಯ ಬಾಲಕಿಯರ ಮೇಲೆ ಅತ್ಯಾಚಾರಗಳ ಘಟನೆಗಳು ಆತಂಕಕಾರಿಯಾಗಿವೆ ಮತ್ತು ದೇಶಕ್ಕೆ ಹಾಗೂ ಸಮಾಜಕ್ಕೆ ಕಪ್ಪುಚುಕ್ಕೆಗಳಾಗಿವೆ ಎಂದು ಉಮಾ ಭಾರತಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News