ಕೇರಳಕ್ಕೆ ತೆರಳಿ ದಂಪತಿಯ ಬಂಧಿಸುವ ಅಗತ್ಯವಿತ್ತೇ: ಗುಜರಾತ್ ಪೊಲೀಸರಿಗೆ ಹೈಕೋರ್ಟ್ ತರಾಟೆ

Update: 2021-01-21 16:38 GMT

ಗಾಂಧಿನಗರ, ಜ.21: ಅಂತರ್‌ಧರ್ಮೀಯ ವಿವಾಹವಾಗಿದ್ದ ದಂಪತಿಯನ್ನು ತಕ್ಷಣ ಬಿಡುಗಡೆಗೊಳಿಸುವಂತೆ ಗುಜರಾತ್ ಹೈಕೋರ್ಟ್ ಆದೇಶಿಸಿದೆ. ಈ ದಂಪತಿ ವಿವಾಹದ ಬಳಿಕ ಹನಿಮೂನ್‌ಗೆ ಕೇರಳಕ್ಕೆ ತೆರಳಿದ್ದಾಗ ಗುಜರಾತ್ ಪೊಲೀಸರು ಬಂಧಿಸಿದ್ದರು.

30 ವರ್ಷದ ಮುಸ್ಲಿಮ್ ವ್ಯಕ್ತಿ ಹಾಗೂ ಆತನ ಬಾಲ್ಯದ ಗೆಳತಿ ಹಿಂದು ಮಹಿಳೆಯ ವಿವಾಹ ರಾಜಸ್ತಾನದ ಅಬು ರೋಡ್‌ನಲ್ಲಿರುವ ದೇವಸ್ಥಾನದಲ್ಲಿ ಡಿಸೆಂಬರ್ 30ರಂದು ನೆರವೇರಿತ್ತು. ಬಳಿಕ ದಂಪತಿ ಮಧುಚಂದ್ರಕ್ಕೆ ಕೇರಳಕ್ಕೆ ತೆರಳಿದ್ದರು. ಈ ಮಧ್ಯೆ, ಮಗಳು ತನ್ನ ಇಚ್ಚೆಗೆ ವಿರುದ್ಧವಾಗಿ ವಿವಾಹವಾಗಿದ್ದಾಳೆ. ಮನೆಯಿಂದ ಓಡಿಹೋಗುವಾಗ 82,000 ರೂ. ಹಣ ಕದ್ದಿದ್ದಾಳೆ ಮತ್ತು ನಕಲಿ ವಿವಾಹ ನೋಂದಣಿ ದಾಖಲೆ ಸೃಷ್ಟಿಸಿದ್ದಾಳೆ. ವಿವಾಹವಾಗುವ ಉದ್ದೇಶದಿಂದ ಮುಸ್ಲಿಂ ವ್ಯಕ್ತಿ ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದು ಇದು ಗುಜರಾತ್ ಧಾರ್ಮಿಕ ಸ್ವಾತಂತ್ರ ಕಾಯ್ದೆಯ ಉಲ್ಲಂಘನೆಯಾಗಿದೆ ಎಂದು ಮಹಿಳೆಯ ತಂದೆ ದೂರು ನೀಡಿದ್ದ ಹಿನ್ನೆಲೆಯಲ್ಲಿ ಕೇರಳಕ್ಕೆ ತೆರಳಿದ್ದ ಗುಜರಾತ್ ಪೊಲೀಸರು ದಂಪತಿಯನ್ನು ಕರೆತಂದು ಬಂಧನದಲ್ಲಿಟ್ಟಿದ್ದರು.

ಈ ಮಧ್ಯೆ, ತನ್ನ ಸಹೋದರನನ್ನು ಪೊಲೀಸರು ಅಕ್ರಮವಾಗಿ ಬಂಧಿಸಿದ್ದಾರೆ ಎಂದು ವರನ ಅಣ್ಣ ಹೇಬಿಯಸ್ ಕಾರ್ಪಸ್ ಅರ್ಜಿ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು ಜನವರಿ 22ರವರೆಗೆ ಪೊಲೀಸ್ ಕಸ್ಟಡಿಗೆ ಪಡೆದಿದ್ದಾರೆ. ಜನವರಿ 19ರಂದು ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, 4 ದಿನ ಪೊಲೀಸ್ ಕಸ್ಟಡಿ ಆದೇಶವನ್ನು ರದ್ದುಗೊಳಿಸಿದೆ. ಅಲ್ಲದೆ ಪ್ರಕರಣದ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸುವಂತೆ ಪೊಲೀಸ್ ಮಹಾನಿರ್ದೇಶಕರಿಗೆ ಸೂಚಿಸಿದೆ. ಅಲ್ಲದೆ ಈ ಪ್ರಕರಣದಲ್ಲಿ ಅನಗತ್ಯ ಉತ್ಸಾಹ ಪ್ರದರ್ಶಿಸಿ, ಕೇರಳಕ್ಕೆ ತೆರಳಿ ದಂಪತಿಯನ್ನು ಬಂಧಿಸುವ ಅಗತ್ಯವಿತ್ತೇ ಎಂದು ಪೊಲೀಸರನ್ನು ತರಾಟೆಗೆತ್ತಿಕೊಂಡಿದೆ.

ದಂಪತಿ ಸೂರತ್‌ನಲ್ಲಿ ವಾಸಿಸಲು ಇಚ್ಛಿಸುವ ಕಾರಣ ಅವರಿಗೆ ಆರಂಭದಲ್ಲಿ 4 ವಾರ ಪೊಲೀಸ್ ಭದ್ರತೆ ಒದಗಿಸುವಂತೆ , ನಾಲ್ಕು ವಾರದ ಬಳಿಕವೂ ಪೊಲೀಸ್ ಭದ್ರತೆ ಮುಂದುವರಿಯಬೇಕೆಂದು ದಂಪತಿ ಬಯಸಿದರೆ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ನಗರ ಪೊಲೀಸ್ ಆಯುಕ್ತರಿಗೆ ಹೈಕೋರ್ಟ್ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News