ಭಾರತ ಕ್ರಿಕೆಟ್‌ ತಂಡದಿಂದ ಯುವಜನತೆ ಸ್ಫೂರ್ತಿ ಪಡೆಯಬೇಕು, ಅದುವೇ ಆತ್ಮನಿರ್ಭರ್‌ ಭಾರತದ ಸೂತ್ರ: ನರೇಂದ್ರ ಮೋದಿ

Update: 2021-01-22 15:29 GMT

ಹೊಸದಿಲ್ಲಿ,ಜ.22: ಆಸ್ಟ್ರೇಲಿಯಾದ ಗಬ್ಬಾದಲ್ಲಿ ಟೀಮ್ ಇಂಡಿಯಾ  ದಾಖಲಿಸಿದ ಐತಿಹಾಸಿಕ ಗೆಲುವಿನಿಂದ ದೇಶದ ಯುವಜನತೆ ಸ್ಫೂರ್ತಿ ಪಡೆಯಬೇಕು ಹಾಗೂ ಭಾರತ ಸವಾಲುಗಳನ್ನು ಇದೇ ರೀತಿಯಲ್ಲಿ ಹಿಮ್ಮೆಟ್ಟಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ತೇಝ್ಪುರ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ವರ್ಚುವಲ್ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ, ಸಕಾರಾತ್ಮಕ ಫಲಿತಾಂಶಗಳಿಗೆ ಸಕಾರಾತ್ಮಕ ಚಿಂತನೆಗಳು ಅತ್ಯಗತ್ಯ ಹಾಗೂ ಆತ್ಮನಿರ್ಭರ್ ಭಾರತದ ಸಾರ ಕೂಡ ಇದೇ ಆಗಿದೆ ಎಂದರು.

"ಅತ್ಯುತ್ತಮ ಉದಾಹರಣೆಯೆಂದರೆ ಹಲವಾರು ಸವಾಲುಗಳನ್ನೆದುರಿಸಿದ ನಮ್ಮ ಕ್ರಿಕೆಟ್ ತಂಡ. ನಾವು ಹೀನಾಯವಾಗಿ ಸೋತೆವು, ಆದರೂ ಎದೆಗುಂದದೆ  ಆಡಿದ್ದರಿಂದ ಸವಾಲುಭರಿತ ಸನ್ನಿವೇಶದಲ್ಲೂ ಜಯ ಸಾಧಿಸಿದೆವು. ಅವರು(ಕ್ರಿಕೆಟ್ ತಂಡ) ಕಡಿಮೆ ಅನುಭವ ಹೊಂದಿದ್ದರೂ ಆತ್ಮವಿಶ್ವಾಸಭರಿತರಾಗಿದ್ದರು, ಅವರು ಇತಿಹಾಸ ರಚಿಸಿದ್ದಾರೆ. ಈ ಕ್ರಿಕೆಟ್ ಗೆಲುವು ಒಂದು ದೊಡ್ಡ ಜೀವನ ಪಾಠವಾಗಿದೆ. ನಾವು ಸಕಾರಾತ್ನಕವಾಗಿ ಯೋಚಿಸಬೇಕು," ಎಂದು ಪ್ರಧಾನಿ ಹೇಳಿದರು.

ಕೋವಿಡ್ ಕುರಿತು ಮಾತನಾಡಿದ ಪ್ರಧಾನಿ "ಸಾಂಕ್ರಾಮಿಕದ ಆರಂಭದಲ್ಲಿ ಜನರಿಗೆ ಏನಾಗಬಹುದೆಂಬ ಭಯವಿತ್ತು, ಆದರೆ ದೇಶ ಧೈರ್ಯದಿಂದ  ಎಲ್ಲವನ್ನೂ ಎದುರಿಸಿದೆ. ನಾವು ಮೇಡ್ ಇನ್ ಇಂಡಿಯಾ ಪರಿಹಾರಗಳಿಂದ ಕೋವಿಡ್  ವಿರುದ್ಧ ಹೋರಾಡಿದೆವು" ಎಂದು ಭಾರತದಲ್ಲಿ ಬಳಕೆಗೆ ಅನುಮೋದಿಸಲ್ಪಟ್ಟ ಲಸಿಕೆಗಳನ್ನು ಉಲ್ಲೇಖಿಸಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News