ತಂದೆ ನಿಧನರಾದ ಸುದ್ದಿಯನ್ನು ಸಿರಾಜ್‌ ಗೆ ತಿಳಿಸಿ, ಸಮಾಧಾನಪಡಿಸಿದವರು ಯಾರು ಗೊತ್ತೇ?

Update: 2021-01-22 11:36 GMT

ಹೊಸದಿಲ್ಲಿ,ಜ.22: ಭಾರತೀಯ ಕ್ರಿಕೆಟ್‌ ತಂಡದ ವೇಗದ ಬೌಲರ್‌, ಆಸ್ಟ್ರೇಲಿಯಾದಲ್ಲಿ ಭಾರತವು ಐತಿಹಾಸಿಕ ಟೆಸ್ಟ್‌ ಸರಣಿ ಗೆಲ್ಲುವಲ್ಲಿ ಮಹತ್ತರ ಪಾತ್ರ ವಹಿಸಿದ ಮುಹಮ್ಮದ್‌ ಸಿರಾಜ್‌ ಸದ್ಯ ಸುದ್ದಿಯಲ್ಲಿದ್ದಾರೆ. ತನ್ನ ತಂದೆಯ ಮರಣ ವಾರ್ತೆ ಕೇಳಿಯೂ ದೇಶಕ್ಕಾಗಿ ಆಡುವ ನಿರ್ಧಾರ ವ್ಯಕ್ತಪಡಿಸಿದ ಸಿರಾಜ್‌ ನಿಲುವು ವ್ಯಾಪಕ ಶ್ಲಾಘನೆಗೆ ಪಾತ್ರವಾಗಿದೆ. ಆಸ್ಟ್ರೇಲಿಯಾದಿಂದ ಹುಟ್ಟೂರಿಗೆ ಆಗಮಿಸಿದ ವೇಳೆ ಮನೆಗೆ ತೆರಳುವ ಮುಂಚೆ ತನ್ನ ತಂದೆಯ ಸಮಾಧಿಯ ಬಳಿ ತೆರಳಿ ಪ್ರಾರ್ಥನೆ ನಡೆಸಿದ ಫೋಟೊ ಸಾಮಾಜಿಕ ತಾಣದಾದ್ಯಂತ ವೈರಲ್‌ ಆಗಿದೆ.

ಮನೆಯಿಂದ ಆಸ್ಟ್ರೇಲಿಯಾಗೆಂದು ಹೊರಡುವ ವೇಳೆ ತನ್ನ ತಂದೆಯೊಂದಿಗೆ ಇದು ಕೊನೆಯ ಮುಖಾಮುಖಿ ಎಂದು ಸಿರಾಜ್‌ ಮತ್ತು ಕುಟುಂಬಸ್ಥರು ಭಾವಿಸಿರಲಿಲ್ಲ. ಸಿರಾಜ್‌ ತಂದೆ ಗೌಸ್‌ ಮುಹಮ್ಮದ್‌ ನಿಧನರಾಗಿದ್ದಾರೆ ಎಂದು ಸಿರಾಜ್‌ ಗೆ ಮೊದಲು ತಿಳಿಸಿದ್ದು ತಂಡದ ನಾಯಕ ವಿರಾಟ್‌ ಕೊಹ್ಲಿ ಮತ್ತು ಕೋಚ್‌ ರವಿಶಾಸ್ರ್ತಿ ಎಂದು timesofindia.com ವರದಿ ಮಾಡಿದೆ.

ಸುದ್ದಿ ತಿಳಿದ ಕೂಡಲೇ ಸಿರಾಜ್‌ ಸಂಪೂರ್ಣ ಕುಸಿದು ಹೋಗಿದ್ದರು. ಕೂಡಲೇ ಕೊಠಡಿ ಕೆಳಗಿರುವ ರೆಸ್ಟೋರೆಂಟ್‌ ಗೆ ತೆರಳಿ ಸಿರಾಜ್‌ ಅಳಲು ಆರಂಭಿಸಿದರು ಎಂದು ವರದಿ ತಿಳಿಸಿದೆ. ಬಳಿಕ ವಿರಾಟ್‌ ಕೊಹ್ಲಿ ಹಾಗೂ ರವಿಶಾಸ್ತ್ರಿ ಸಿರಾಜ್‌ ಬಳಿ ಕುಳಿತು ಹಲವು ಗಂಟೆಗಳ ಕಾಲ ಆತ್ಮಸ್ಥೈರ್ಯ ತುಂಬಿದ್ದರು ಎನ್ನಲಾಗಿದೆ. ವಿರಾಟ್‌ ಕೊಹ್ಲಿ ಕೂಡಾ ಈ ಹಿಂದೆ ಇಂತಹದೇ ಪರಿಸ್ಥಿತಿಯನ್ನು ಅನುಭವಿಸಿದ್ದರು. ಅವರು ಸರಣಿಯೊಂದರಲ್ಲಿ ನಿರತರಾಗಿದ್ದಾಗಲೇ ಅವರ ತಂದೆ ಮೃತಪಟ್ಟಿದ್ದರು.

"ನಾನು ಭಾರತ ಕ್ರಿಕೆಟ್‌ ತಂಡಕ್ಕಾಗಿ ಕ್ರಿಕೆಟ್‌ ಆಡಬೇಕು ಅನ್ನುವುದು ನನ್ನ ತಂದೆಯ ಕನಸಾಗಿತ್ತು. ಅದೂ, ಟೆಸ್ಟ್‌ ಕ್ರಿಕೆಟ್‌ ನ ಜೆರ್ಸಿ ಧರಿಸಿ ನಾನು ಆಡುವುದನ್ನು ನೋಡಲು ತಂದೆ ಕಾತರರಾಗಿದ್ದರು. ಆದರೆ ದೇವರ ತೀರ್ಮಾನ ಬೇರೆಯೇ ಇತ್ತು. ಅಂದು ತಂದೆ ಕಂಡ ಕನಸನ್ನು ನಾನು ನನಸು ಮಾಡಿದ್ದೇನೆ, ಅದನ್ನು ಉಳಿಸಿಕೊಂಡಿದ್ದೇನೆ. ನಾನು ಈ ಹಂತದಲ್ಲಿರಲು ನನ್ನ ತಂದೆಯ ತ್ಯಾಗ ಮತ್ತು ಪರಿಶ್ರಮವೇ ಕಾರಣ ಎಂದು ಮುಹಮ್ಮದ್‌ ಸಿರಾಜ್‌ ಹೇಳಿಕೆ ನೀಡಿದ್ದಾಗಿ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News