ಸ್ನೇಹಿತೆಯ ಮನೆಗೆ ರಹಸ್ಯವಾಗಿ ಭೇಟಿ ನೀಡಿದಾಗ ಸಿಕ್ಕಿಬಿದ್ದ ಯುವಕ ಪಾಕ್‌ಗೆ ಪರಾರಿ

Update: 2021-01-22 18:07 GMT

ಜೈಪುರ, ಜ.22: ರಾಜಸ್ಥಾನದ ಯುವಕನೊಬ್ಬ ತನ್ನ ಸ್ನೇಹಿತೆಯ ಮನೆಗೆ ಕದ್ದುಮುಚ್ಚಿ ಭೇಟಿ ನೀಡಿದ ಸಂದರ್ಭ ಹುಡುಗಿಯ ಹೆತ್ತವರಿಗೆ ಸಿಕ್ಕಿಬಿದ್ದಿದ್ದು, ಮನೆಯವರಿಗೆ ತಿಳಿದರೆ ಅವಮಾನವಾಗುತ್ತದೆ ಎಂದು ಹೆದರಿ ಗಡಿದಾಟಿ ಪಾಕಿಸ್ತಾನಕ್ಕೆ ಪರಾರಿಯಾದ ಘಟನೆ ನಡೆದಿರುವುದಾಗಿ ತಡವಾಗಿ ವರದಿಯಾಗಿದೆ.

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಬಿಜ್ರಡ್ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ, 19 ವರ್ಷದ ಗೆಮರ ರಾಮ್ ಮೇಘಾವಾಲ್ ಎಂಬಾತ ನೆರೆಮನೆಯ ಯುವತಿಯನ್ನು ಪ್ರೀತಿಸುತ್ತಿದ್ದು ಮನೆಯವರ ಕಣ್ತಪ್ಪಿಸಿ ಆಗಾಗ ಆಕೆಯನ್ನು ಭೇಟಿಯಾಗುತ್ತಿದ್ದ. ಆದರೆ ಕಳೆದ ವರ್ಷದ ನವೆಂಬರ್ 4ರಂದು ಯುವತಿ ಮನೆ ಪ್ರವೇಶಿಸುವ ವೇಳೆ ಯುವತಿಯ ಹೆತ್ತವರು ನೋಡಿದ್ದು ರಾಮ್‌ನನ್ನು ಹಿಡಿದಿದ್ದಾರೆ. ಈ ವಿಷಯವನ್ನು ರಾಮ್‌ನ ಮನೆಯವರಿಗೆ ತಿಳಿಸುವುದಾಗಿ ಎಚ್ಚರಿಸಿದ್ದರಿಂದ ಹೆದರಿದ್ದ ರಾಮ್, ಗಡಿದಾಟಿ ಪಾಕಿಸ್ತಾನಕ್ಕೆ ಪರಾರಿಯಾಗಿದ್ದಾನೆ.

ರಾಮ್‌ನನ್ನು ಹುಡುಕುವ ಪ್ರಯತ್ನ ಫಲಿಸದ ಹಿನ್ನೆಲೆಯಲ್ಲಿ ಮನೆಯವರು ನವೆಂಬರ್ 16ರಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ತಮ್ಮ ಮನೆ ಭಾರತ-ಪಾಕ್ ಗಡಿಭಾಗದ ಬಳಿ ಇದೆ ಮತ್ತು ಬಂಧುಗಳು ಪಾಕಿಸ್ತಾನದ ಪಬ್ನಿ ಗ್ರಾಮದಲ್ಲಿ ನೆಲೆಸಿರುವ ಕಾರಣ ರಾಮ್ ಪಾಕಿಸ್ತಾನಕ್ಕೆ ಪರಾರಿಯಾಗಿರಬಹುದು ಎಂದು ಹೇಳಿದ್ದರು. ಇದರಂತೆ ಪೊಲೀಸರು ಗಡಿಭದ್ರತಾ ಪಡೆಗೆ ಮಾಹಿತಿ ನೀಡಿದ್ದು , ಸುಮಾರು ಒಂದೂವರೆ ತಿಂಗಳ ಪ್ರಯತ್ನದ ಬಳಿಕ ರಾಮ್‌ನ ಬಗ್ಗೆ ಮಾಹಿತಿ ಪಡೆಯಲು ಗಡಿಭದ್ರತಾ ಪಡೆ ಶಕ್ತವಾಗಿದೆ. ಆಕಸ್ಮಿಕವಾಗಿ ಗಟಿ ದಾಟಿದ ಆತನನ್ನು ಸಿಂಧ್ ಪೊಲೀಸರು ಬಂಧಿಸಿ ಜೈಲಿನಲ್ಲಿಟ್ಟಿರುವುದಾಗಿ ಜನವರಿ 5ರಂದು ಪಾಕಿಸ್ತಾನದ ಗಡಿಭದ್ರತಾ ಪಡೆ ದೃಢಪಡಿಸಿದೆ. ಇದೀಗ ರಾಮ್‌ನನ್ನು ಭಾರತಕ್ಕೆ ಕರೆತರುವ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಬಾರ್ಮರ್ ಜಿಲ್ಲಾ ಪೊಲೀಸ್ ಅಧೀಕ್ಷಕ ಆನಂದ್ ಶರ್ಮ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News